ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಲಿ ಎಂದು ತಾಲೂಕು ಅಂಬರೀಶ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಹರಳಹಳ್ಳಿ ಅಂಬಿ ಸುಬ್ಬಣ್ಣ ಆಶಯ ವ್ಯಕ್ತಪಡಿಸಿದ್ದರು.

 ಪಾಂಡವಪುರ(ಅ.08) : ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಲಿ ಎಂದು ತಾಲೂಕು ಅಂಬರೀಶ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಹರಳಹಳ್ಳಿ ಅಂಬಿ ಸುಬ್ಬಣ್ಣ ಆಶಯ ವ್ಯಕ್ತಪಡಿಸಿದ್ದರು.

ಅಭಿಷೇಕ್‌ ಅಂಬರೀಶ್‌ ಹುಟ್ಟುಹಬ್ಬದ ಅಂಗವಾಗಿ ಅಂಬಿ ಸುಬ್ಬಣ್ಣ ನೇತೃತ್ವದಲ್ಲಿ ಅಭಿಮಾನಿಗಳು ಒಗ್ಗೂಡಿ, ಪಾಂಡವಪುರ ಆಸ್ಪತ್ರೆ ಆವರಣದ ಅಂಬಿ ಕ್ಯಾಂಟೀನ್‌ನಲ್ಲಿ ಅಂಬರೀಶ್‌ (Ambareesh) ಭಾವಚಿತ್ರಕ್ಕೆ ಪೂಜೆ ಮಾಡಿ ನಂತರ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ, ಅಭಿಷೇಕ್‌ ಹೆಸರಿನಲ್ಲಿ ಜೈಕಾರ ಕೂಗುತ್ತಾ, ನೆರೆದಿದ್ದ ಜನರಿಗೆ ಸಿಹಿ ವಿತರಿಸಿ ಮಾತನಾಡಿದರು.

ಅಂಬರೀಶ್‌ ಸಿನಿಮಾ ಮತ್ತು ರಾಜಕೀಯ (Politics ) ಎರಡು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಅದರಂತೆ ಪುತ್ರ ಅಭಿಷೇಕ್‌ ವರ್ಷಕ್ಕೆ ಎರಡು ಅಥವಾ ಮೂರು ಚಲನಚಿತ್ರದಲ್ಲಿ ಅಭಿನಯಿಸಿ ಸ್ಯಾಂಡಲ… ವುಡ್‌ನಲ್ಲಿ ಮಿಂಚಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ. ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲ್ಲಲಿ ಹಾರೈಸಿದರು.

ಈ ವೇಳೆ ಅಂಬರೀಶ್‌ ಅಭಿಮಾನಿಗಳಾದ ಕೆನ್ನಾಳು ಲಿಂಗರಾಜು, ಮೆಸ್‌ ಪ್ರಕಾಶ್‌, ಯುವ ಕಾಂಗ್ರೆಸ್‌ ಮಾಜಿ ಉಪಾಧ್ಯಕ್ಷ ಸುಬ್ಬಣ್ಣ, ಎಲೆಕೆರೆ ಈರೇಗೌಡ, ಹರೀಶ್‌, ಕೆರೆತೊಣ್ಣೂರು ಪ್ರಕಾಶ, ಸಯ್ಯಾದ್‌ ಆಸ್ಕರ್‌, ಗ್ಯಾಸ್‌ ತಮ್ಮಣ್ಣ, ಆಟೋ ಜಲೇಂದ್ರ, ಕೆನ್ನಾಳು ಅಣ್ಣಯ್ಯ ಸೇರಿದಂತೆ ಅಭಿಮಾನಿಗಳಿದ್ದರು.

ಶಾಸಕರ ವಿರುದ್ಧ ಟೀಕೆ ಬೇಡ : 

ಸಂಸದೆ ಸುಮಲತಾ ಜೆಡಿಎಸ್‌ ಶಾಸಕರ ವಿರುದ್ಧ ಟೀಕೆ-ಟಿಪ್ಪಣಿಗಳನ್ನು ಮಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಿ ಎಂದು ಶಾಸಕ ಡಿ.ಸಿ. ತಮ್ಮಣ್ಣ ಬೆಂಬಲಿಗರು ಸಲಹೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಟಿ. ರಾಮೇಗೌಡ, ಎಸ್‌.ಎಂ. ಗೌರ, ಹೊಸಕರೆ ಪ್ರಸನ್ನ ಸೇರಿದಂತೆ ಹಲವರು ಜೆಡಿಎಸ್‌ ಶಾಸಕರ ವಿರುದ್ಧ ವಿನಾಕಾರಣ ಟೀಕೆ ಮಾಡುತ್ತಿರುವ ಸಂಸದೆ ಸುಮಲತಾ ವಿರುದ್ಧ ಹರಿಹಾಯ್ದರು.

ಅಧಿವೇಶನದಲ್ಲಿ ಯಾವ ಶಾಸಕರು ಏನು ಮಾತನಾಡಿದ್ದಾರೆ?: ದಳಪತಿಗಳ ವಿರುದ್ಧ ಹರಿಹಾಯ್ದ ಸುಮಲತಾ

ಕೇವಲ ಟೀಕೆ ಮಾಡುವುದರಿಂದ ಯಾರೂ ನಾಯಕರಾಗುವುದಿಲ್ಲ. ಅಭಿವೃದ್ಧಿ ಕೆಲಸಗಳಿಂದಷ್ಟೇ ನಾಯಕರಾಗಿ ಬೆಳವಣಿಗೆ ಕಾಣಲು ಸಾಧ್ಯ. ಟೀಕೆಗಳನ್ನು ಮಾಡಿದರೂ ಅವುಗಳು ಸಕಾರಾತ್ಮಕವಾಗಿರಬೇಕು. ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಟೀಕೆ ಮಾಡಲಿ, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸುಮಲತಾ ಅವರು ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುತ್ತಿರುವುದು ಸರಿಯಲ್ಲ, ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಕಿವಿಮಾತು ಹೇಳಿದರು.

ಅಂಬರೀಶ್‌ ಪತ್ನಿ ಎಂಬ ಒಂದೇ ಕಾರಣಕ್ಕೆ ಕ್ಷೇತ್ರದ ಜನರು ಎಲ್ಲವನ್ನೂ ಸಹಿಸಿಕೊಂಡು ಕೂರುತ್ತಾರೆ ಎಂದು ಸುಮಲತಾ ತಿಳಿಯಬಾರದು. ಅಂಬರೀಶ್‌ ಬಗ್ಗೆ ನಮಗೂ ಕ್ಷೇತ್ರ ಜನರಿಗೂ ಗೌರವವಿದೆ. ಮುಂದೆ ಇದೇ ರೀತಿ ಟೀಕೆ ಟಿಪ್ಪಣಿ ಮಾಡುತ್ತಿದ್ದರೆ ಅಂಬರೀಶ್‌ ಅವರ ಗೌರವಕ್ಕೆ ಸುಮಲತಾ ಅವರೇ ಮಸಿ ಬಳಿದಂತಾಗುತ್ತದೆ ಎಂದರು. ಈ ಹಿಂದೆ ಅಂಬರೀಶ್‌ ಅವರು ಎಷ್ಟುತೂಕವಾಗಿ ನಡೆದುಕೊಂಡರೋ ಅವರ ಪತ್ನಿಯಾಗಿ ನೀವೂ ಸಹ ಅದೇ ರೀತಿ ನಡೆದುಕೊಳ್ಳಬೇಕು. ಸುಖಾ ಸುಮ್ಮನೆ ಆಧಾರರಹಿತ ಆರೋಪ ಮಾಡಿಕೊಂಡು ನೀವು ಪೇಚಿಕೆ ಸಿಲುಕಬಾರದು ಎಂದು ಕಿವಿಮಾತು ಹೇಳಿದರು. ಶಾಸಕ ಪುಟ್ಟರಾಜು ಅವರು ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಆಣೆ ಪ್ರಮಾಣಕ್ಕೆ ಸಿದ್ಧ ಎಂದು ಹೇಳಿದ್ದಾರೆ. ತಮಗೆ ಧೈರ್ಯವಿದ್ದರೆ ಹೋಗಿ ಎಂದು ಪ್ರತಿಸವಾಲು ಹಾಕಿದರು.

ಶಾಸಕ ಡಿ.ಸಿ.ತಮ್ಮಣ್ಣ ಮದ್ದೂರು ಕ್ಷೇತ್ರದಲ್ಲಿ ರಸ್ತೆ, ನೀರಾವರಿ, ನಾಲೆಗಳ ಅಭಿವೃದ್ಧಿ, ಸೇತುವೆ, ಆಸ್ಪತ್ರೆ ಮತ್ತಿತರ ಯೋಜನೆಗಳಿಗೆ ಸರ್ಕಾರಿದಿಂದ ಕೋಟ್ಯಂತರ ರು.ಗಳ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಅರಿತು ಸುಮಲತಾ ಮಾತನಾಡಬೇಕು ಎಂದರು.

ತಮ್ಮಣ್ಣ ಇಳಿ ವಯಸ್ಸಿನಲ್ಲೂ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿರುವ ತಮ್ಮಣ್ಣರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಟ್ಟು ಸಂಸದೆ ಸುಮಲತಾ ರಾಜಕೀಯ ಬದಿಗಿಟ್ಟು ತಮ್ಮಣ್ಣರೊಂದಿಗೆ ಸೇರಿ ಕ್ಷೇತ್ರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.