ಕೃಷ್ಣೆಗಾಗಿ ಬಲಿಯಾದ ಬದುಕುಗಳು: ಸಂತ್ರಸ್ತರ ಗೋಳು ಕೇಳೋರಿಲ್ಲ!

ಆಲಮಟ್ಟಿ ಜಲಾಶಯ ನಿರ್ಮಾಣದಿಂದಾಗಿ ಸಾವಿರಾರು ಕುಟುಂಬಗಳು ಸ್ಥಳಾಂತರಗೊಂಡು, ಮೂಲಭೂತ ಸೌಕರ್ಯಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ.

Almatti Dam  Krishna River Project  Thousands of families have been suffering for basic amenities gow

ಶಶಿಕಾಂತ ಮೆಂಡೆಗಾರ

 ವಿಜಯಪುರ (ಆ.21): ನಾಲ್ಕು ರಾಜ್ಯಗಳ ಜಲಧಾರೆ, ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣೆಗಾಗಿ ಜೀವನವನ್ನೇ ಅರ್ಪಿಸಿದವರು ಇಂದಿಗೂ ಸಂಕಷ್ಟದಲ್ಲೇ ಇದ್ದಾರೆ. ನಾಲ್ಕು ದಶಕಗಳ ಯೋಜನೆಯಲ್ಲಿ ಕಳೆದ ಎರಡು ದಶಕಗಳಿಂದ ಭರವಸೆಗಳನ್ನೇ ನಂಬಿಕೊಂಡು ಕುಳಿತಿರುವ ಅದೆಷ್ಟೋ ಜೀವಗಳು ಕೃಷ್ಣಾರ್ಪಣವಾಗಿದ್ದು, ಇನ್ನಷ್ಟು ಕುಟುಂಬಗಳು ಸರ್ಕಾರಗಳ ಹುಸಿ ಭರವಸೆಗಳನ್ನೇ ನಂಬಿ ಜೀವನ ಸಾಗಿಸುತ್ತಿವೆ.

ಬಾಧಿತವಾದ ಮಾಹಿತಿ: ಆಲಮಟ್ಟಿ ಜಲಾಶಯ ನಿರ್ಮಾಣ ಹಿನ್ನೆಲೆ 519.60 ಮೀಟರ್ ಎತ್ತರಕ್ಕೆ ಅವಳಿ ಜಿಲ್ಲೆಗಳ 201 ಗ್ರಾಮಗಳು ಬಾಧಿತಗೊಂಡಿವೆ. ಅದರಲ್ಲಿ 4 ಲಕ್ಷ ಕುಟುಂಬಗಳುಳ್ಳ 136 ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿವೆ. ಡ್ಯಾಂ ಹಿನ್ನೀರಿನ ಪಾತ್ರದಲ್ಲಿರುವ ಕೊಲ್ಹಾರ, ಗಣಿ, ಚಿಮ್ಮಲಗಿ, ಬೇನಾಳ, ಮಾರಡಗಿ, ಮಾರಡಗಿ ತಾಂಡಾ, ಹೆಗ್ಗೂರ, ಮನಗೂರ, ಗುಳಬಾಳ ಸೇರಿ 136 ಹಳ್ಳಿಗಳಿಗೆ ಪುನರ್ವಸತಿ ಕೇಂದ್ರಗಳನ್ನು ಕಲ್ಪಿಸಲಾಗಿದೆ. ಇದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ (Upper Krishna Project ) 2 ಹಂತಗಳು ಮಾತ್ರ ಪೂರ್ಣಗೊಂಡಿವೆ. 3ನೇ ಹಂತದಲ್ಲಿ ಜಲಾಶಯದ ಎತ್ತರವನ್ನು 524.225 ಮೀಟರ್‌ಗೆ ಎತ್ತರಿಸಿದಾಗ ಈಗಾಗಲೇ ಮುಳುಗಡೆಯಾಗಿರುವ 136 ಹಳ್ಳಿಗಳ ಜನರ ಜಮೀನುಗಳು ಹಾಗೂ ಹೊಸದಾದ 20 ಹಳ್ಳಿಗಳು ಮತ್ತೆ ಮುಳುಗಡೆ ಆಗಲಿವೆ. ಇದೆಲ್ಲವನ್ನೂ ಭೂಸ್ವಾಧೀನ ಮಾಡಿಕೊಳ್ಳಬೇಕಾದರೆ ಬರೋಬ್ಬರಿ ₹1 ಲಕ್ಷ ಕೋಟಿ ಬಜೆಟ್ ಬೇಕಾಗಬಹುದು. ಇದು ಅಂದಾಜು ಮಾತ್ರ.

ಮಳೆಯೇ ಇಲ್ಲದಿದ್ದರೂ ಮೃತ್ಯುಂಜಯ ನದಿಯಲ್ಲಿ ಪ್ರವಾಹದ ರೌದ್ರ ನರ್ತನ! ಚಾರ್ಮಾಡಿ ಘಾಟ್ ಕುಸಿತವಾಯ್ತೆ?

ಸಂತ್ರಸ್ತ ಗ್ರಾಮಗಳ ಭವಣೆ: ಕೃಷ್ಣಾ ನದಿ ಹಿನ್ನೀರಿನಲ್ಲಿ ಇದುವರೆಗೂ ಮುಳುಗಡೆಯಾಗಿರುವ 136 ಹಳ್ಳಿಗಳ ಜನರಿಗೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿ ಕೊಡಲಾಗಿದೆ. ಆದರೆ ಅವುಗಳಲ್ಲಿನ ಬಹುತೇಕ ಕೇಂದ್ರಗಳಿಗೆ ಕುಡಿಯುವ ನೀರು, ಸರಿಯಾದ ರಸ್ತೆ, ವಿದ್ಯುತ್, ಶಾಲೆಗಳು, ಆಸ್ಪತ್ರೆಗಳು ಸೇರಿ ಮೂಲಭೂತ ಸೌಕರ್ಯಗಳೇ ಇಲ್ಲ. ಜೀವನಾಡಿ ಕೃಷ್ಣೆಯಿಂದ ಸಾವಿರಾರು ಎಕರೆ ನೀರಾವರಿ ಆಗಲಿದ್ದು, ಆ ನೀರಾವರಿಗಾಗಿ ತಮ್ಮ ಬದುಕು, ಭಾವನೆಗಳನ್ನೇ ಬಲಿಕೊಟ್ಟವರು ಇದುವರೆಗೂ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ.

ರಾತ್ರೋರಾತ್ರಿ ಊರು ಬಿಟ್ಟವರು: ಕೃಷ್ಣೆಯ ಹಿನ್ನೀರಿನಿಂದಾಗಿ ಮುಳುಗಡೆಯಾದ ಅದೆಷ್ಟೋ ಹಳ್ಳಿಗಳ ಜನರು, ಲಕ್ಷಾಂತರ ಕುಟುಂಬಗಳು ರಾತ್ರೋರಾತ್ರಿ ಉಟ್ಟಬಟ್ಟೆಯ ಮೇಲೆಯೇ ಮನೆ ಬಿಡುವಂತಾಗಿತ್ತು. ತಾವು ಹುಟ್ಟಿ ಬೆಳೆದು ಬದುಕು ಕಲ್ಪಿಸಿಕೊಂಡಿದ್ದ ಊರು ಮುಳುಗಡೆಯಾದಾಗ 4ಲಕ್ಷ ಕುಟುಂಬಗಳ ಭಾವನೆಗಳೆಲ್ಲವೂ ಕಣ್ಣೀರಿನೊಂದಿಗೆ ಕೃಷ್ಣೆಯನ್ನು ಸೇರಿದ್ದವು. ಸರ್ಕಾರಗಳು ಕಲ್ಪಿಸಿಕೊಟ್ಟ ಹೊಸ ಬದುಕಿಗೆ ಕಾಲಿಟ್ಟವರಿಗೆ ದಶಕಗಳು ಕಳೆದರೂ ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಿದೆ.

ಬರೋಬ್ಬರಿ 100 ಕೋಟಿ ಮೌಲ್ಯದ ಆಸ್ತಿ ಬಿಟ್ಟು ನಿತ್ಯಾನಂದನ ಕೈಲಾಸ ಸೇರಿದ ಸುಂದರಿ ಯಾರೀಕೆ?

ಈಡೇರುತ್ತಾ ಅಹಿಂದ ನಾಯಕನ ಭರವಸೆ?: ಕಳೆದ ವರ್ಷ ಬಾಗಿನ ಅರ್ಪಣೆಗೆ ಬಂದಿದ್ದ ಸಿಎಂ ಸಿದ್ಧರಾಮಯ್ಯನವರು ಯುಕೆಪಿಗೆ 20 ಸಾವಿರ ಕೋಟಿ ಹಣ ಕೊಡಲಾಗುವುದು ಎಂದಿದ್ದರು. ಆದರೆ ಬಜೆಟ್ ನಲ್ಲಿ ಕೇವಲ ₹ 5500 ಕೋಟಿ ಹಣ ಮಾತ್ರ ಬಿಡುಗಡೆ ಮಾಡಲಾಗಿದೆ. ಕೃಷ್ಣಾ ಕಣಿವೆಯ ಜನರಿಗಾಗಿ ವಿಶೇಷವಾಗಿ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಹೀಗಾಗಿ, ಈಗಾಗಲೇ ಮುಳುಗಡೆ ಆಗಿರುವ ಹಳ್ಳಿಗಳ ಜನರಿಗೆ ಮೂಲ ಸೌಕರ್ಯಗಳ ಕೊರತೆ ಇದ್ದು, ಪೂರೈಸಬೇಕಿದೆ. ಜೊತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗೆ ಕೋಟ್ಯಂತರ ಹಣ ಬೇಕಿದೆ. ಇದರೊಟ್ಟಿಗೆ ಆಲಮಟ್ಟಿ ಡ್ಯಾಂ ಸೈಟ್ ಅಭಿವೃದ್ಧಿಗಾಗಿ ಜೊತೆಗೆ ಇಲ್ಲಿನ ಪ್ರವಾಸೋದ್ಯಮಕ್ಕೂ ಹಣ ಬೇಕಿದೆ. ಇದೆಲ್ಲದರ ಜೊತೆಗೆ ಬದುಕು ಕಟ್ಟಿಕೊಳ್ಳಬೇಕಿರುವ ಇಲ್ಲಿನ ರೈತರಿಗೆ ವಿಶೇಷ ಪ್ಯಾಕೇಜ್ ಅಗತ್ಯವಿದೆ. ಈ ಬಾರಿ ಬಾಗಿನಕ್ಕೆ ಬರುವ ಸಿಎಂ ಸಿದ್ಧರಾಮಯ್ಯನವರು ಈ ಅಗತ್ಯತೆಗಳಿಗೆ ಅನುದಾನ ಕೊಡುತ್ತಾರಾ? ಎಂಬ ನಿರೀಕ್ಷೆ ಜನರಲ್ಲಿದೆ.

ಅತಿದೊಡ್ಡ ಯೋಜನೆ ಕೃಷ್ಣೆ: ಮಹಾರಾಷ್ಟ್ರದಲ್ಲಿ ಉಗಮವಾಗುವ ಕೃಷ್ಣೆ 282 ಕಿಲೊಮೀಟರ್ ಹರಿದು ಕರ್ನಾಟಕ ಸೇರುತ್ತದೆ. ಕರ್ನಾಟಕದಲ್ಲಿ 483 ಕಿಮೀ ಹರಿದು ಆಂಧ್ರ ಪ್ರದೇಶ 612 ಕಿಮೀ ಸಂಚರಿಸಿ ಬಳಿಕ ತೆಲಂಗಾಣಕ್ಕೆ ಹರಿಯುತ್ತದೆ. ಇಂತಹ ಜೀವನಾಡಿ ಕೃಷ್ಣೆಗೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಅಣೆಕಟ್ಟು ನಿರ್ಮಿಸಲಾಗಿದೆ. ಈ ನದಿಯಿಂದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಒಟ್ಟು 1536 ಎಕರೆ ಭೂಮಿಯನ್ನು ನೀರಾವರಿ ಮಾಡುವ ಉದ್ದೇಶದಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲಾಗಿದೆ.

ಕುಂಟುತ್ತ ಸಾಗಿರುವ ನೀರಾವರಿ ಯೋಜನೆಗಳು: ಇದುವರೆಗಿನ ಸರ್ಕಾರಗಳೆಲ್ಲ ಕೃಷ್ಣಾ ಕೊಳ್ಳದ ಭಾಗದ ಜನರಿಗೆ ಕೇವಲ ಭರವಸೆಗಳನ್ನಷ್ಟೆ ಕೊಟ್ಟಿದ್ದಾರೆ ಹೊರತು ಯೋಜನೆಗಳನ್ನು ಪರಿಪೂರ್ಣಗೊಳಿಸಿ ನಂಬಿಕೆ ಉಳಿಸಿಕೊಂಡಿಲ್ಲ. 4 ದಶಕಗಳ ಯೋಜನೆಯಲ್ಲಿ ಕಳೆದ 2 ದಶಕಗಳಿಂದ ಕುಂಟುತ್ತ ಸಾಗಿರುವ ನೀರಾವರಿ ಯೋಜನೆಗಳು ಯಾವಾಗ ಮುಗಿಯುತ್ತವೆಯೋ ಗೊತ್ತಿಲ್ಲ. ಕೃಷ್ಣೆಗಾಗಿ ಭೂ ಸ್ವಾಧೀನದ ವೇಳೆ ತಮ್ಮ ಊರು, ಜಮೀನುಗಳನ್ನೇ ಬಿಟ್ಟವರಿಗೆ ಬದುಕು ಕಟ್ಟಿಕೊಳ್ಳಲಾಗುತ್ತಿಲ್ಲ. ಕೃಷ್ಣೆಯ ತಟಕ್ಕೆ ಬರುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಕೃಷ್ಣೆಯ ಕೂಗಿಗೆ ಕಿವಿಗೊಡುತ್ತಾ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios