* ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಸಿಪಿಐಎಂ ಆಗ್ರಹ* 47.63 ಜಮೀನಿಗೆ ನಕಲಿ ದಾಖಲೆ ಸೃಷ್ಟಿ* ಸಂತೋಷ್‌ ಲಾಡ್‌ ತಮ್ಮ ಪ್ರಭಾವ ಬಳಸಿ ನಕಲಿ ದಾಖಲೆ ಸೃಷ್ಟಿ 

ಬಳ್ಳಾರಿ(ಜೂ.24): ಸಂಡೂರು ತಾಲೂಕು ತೋರಣಗಲ್ಲು ಹೋಬಳಿ ವ್ಯಾಪ್ತಿಯ ಮಾಳಾಪುರ ಗ್ರಾಮದ ಸರ್ವೆ ಸಂಖ್ಯೆ 123ರಲ್ಲಿ 47.63 ಎಕರೆ ಸರ್ಕಾರಿ ಭೂಮಿಯನ್ನು ಮಾಜಿ ಸಚಿವ ಸಂತೋಷ್‌ ಲಾಡ್‌ ಮತ್ತು ಅವರ ಕುಟುಂಬದ ಸದಸ್ಯರು ಭೂ ಕಬಳಿಕೆ ಮಾಡಿದ್ದಾರೆ ಎಂದು ‘ಕರ್ನಾಟಕ ಪ್ರಾಂತ ರೈತ ಸಂಘ’ ಹಾಗೂ ‘ಭೂ ಸಂತ್ರಸ್ತರ ಹೋರಾಟ ಸಮಿತಿ’ ಮುಖಂಡರು ಆರೋಪಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ನಿಗದಿತ ಸರ್ವೆ ಸಂಖ್ಯೆಯ 47.63 ಎಕರೆ ಪ್ರದೇಶದಲ್ಲಿ ಭೂರಹಿತ ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ದಲಿತ 16 ಕುಟುಂಬಗಳು ಕಳೆದ ಏಳು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿವೆ. ಸಾಗುವಳಿ ಸ್ವಾಧೀನದಲ್ಲಿಯೇ ಭೂಮಿ ಇದ್ದು, ಸರ್ಕಾರ ಪಟ್ಟ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದ್ದಕ್ಕಿದ್ದಂತೆಯೇ ಕಳೆದ ಜೂ. 18ರಂದು ಸಿ.ವಿ. ನಾಗರಾಜ್‌ ಎಂಬ ವ್ಯಕ್ತಿ ಪೊಲೀಸರ ಬೆಂಗಾವಲಿನಿಂದ ಜಮೀನಿಗೆ ಆಗಮಿಸಿ, ಈ ಭೂಮಿಯನ್ನು ಹನುಮನ ಮಗ ಹೊನ್ನೂರಪ್ಪ ಎಂಬವರಿಂದ ಸಂತೋಷ್‌ ಲಾಡ್‌ ಹಾಗೂ ಇತರೆ ಕುಟುಂಬ ಸದಸ್ಯರು ಖರೀದಿ ಮಾಡಿದ್ದಾರೆ ಎಂದು ಹೇಳಿ ಜಮೀನಿಗೆ ಹದ್ದುಬಸ್ತು ಹಾಕಲು ಮುಂದಾಗಿದ್ದರು. ಇದನ್ನು ವಿರೋಧಿಸಿದ್ದಕ್ಕೆ ಜಿಪಂ ಸದಸ್ಯ ಅಕ್ಷಯ ಲಾಡ್‌ ಅವರು ಗಾದಿಗನೂರು ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ವಿವರಿಸಿದರು.

ಕಲಘಟಗಿ: ಸಂತೋಷ ಲಾಡ್‌ ವಿರುದ್ಧ ಛಬ್ಬಿ ಬೆಂಬಲಿಗರ ಆಕ್ರೋಶ

ಹೊನ್ನೂರಪ್ಪ ಎಂಬಾತ ಈಗಾಗಲೇ ಮೃತಪಟ್ಟಿದ್ದು, ಕುಟುಂಬ ಸದಸ್ಯರು ಈ ಜಮೀನಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ. 47.63 ಎಕರೆ ಸರ್ಕಾರಿ ಜಮೀನನ್ನು ಒಬ್ಬರಿಗೆ ನೀಡಲು ಬರುವುದಿಲ್ಲ. ಅಲ್ಲದೆ, ಈ ಮೊದಲೇ ಹೊನ್ನೂರಪ್ಪ ಎಂಬಾತನಿಗೆ ಸರ್ಕಾರ ಮೂರು ಎಕರೆ ಭೂಮಿ ನೀಡಿದ್ದು, ಮಾಜಿ ಸಚಿವ ಸಂತೋಷ್‌ ಲಾಡ್‌ ಅವರು ತಮ್ಮ ಪ್ರಭಾವ ಬಳಸಿ ನಕಲಿ ದಾಖಲೆ ಸೃಷ್ಟಿ ಮಾಡಿ ಜಮೀನು ಕಬಳಿಸಲು ಹೊರಟಿದ್ದಾರೆ. ಈ ಕುರಿತು ತಾಲೂಕು ಕಚೇರಿಯಲ್ಲಿ ಮುಟೇಷನ್‌ ದಾಖಲೆ ಕೇಳಿದರೆ ಇಲ್ಲ ಎಂದು ಹಿಂಬರಹ ಬರೆದುಕೊಟ್ಟಿದ್ದಾರೆ. ಸರ್ಕಾರಿ ಜಮೀನನ್ನು ಕಬಳಿಕೆ ಮಾಡಲು ಹೊರಟಿರುವ ಲಾಡ್‌ ಕುಟುಂಬ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈವರೆಗೆ ಸಾಗುವಳಿ ಮಾಡಿಕೊಂಡು ಬಂದಿರುವ ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಿ, ಪಟ್ಟಾನೀಡಬೇಕು ಎಂದು ಆಗ್ರಹಿಸಿದರಲ್ಲದೆ, ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ಜೂ. 28ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸಿಪಿಐಎಂ ಪಕ್ಷದ ತೋರಣಗಲ್‌ ವಲಯ ಕಾರ್ಯದರ್ಶಿ ಎ. ಸ್ವಾಮಿ, ಜಿಲ್ಲಾಧ್ಯಕ್ಷ ವಿ.ಎಸ್‌. ಶಿವಶಂಕರ್‌, ಸಂಚಾಲಕ ಯು. ತಿಪ್ಪೇಸ್ವಾಮಿ, ವಿ.ಎಸ್‌. ಶಂಕರ್‌ ಅಂತಾಪುರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಮಾಳಾಪುರ ಗ್ರಾಮದಲ್ಲಿ 1996ರಲ್ಲಿ ಹೊನ್ನೂರಪ್ಪ ಎಂಬವರಿಂದ ನಮ್ಮ ಸಹೋದರ ಅಶೋಕ್‌ ಲಾಡ್‌ ಅವರು ಭೂಮಿ ಖರೀದಿಸಿದ್ದಾರೆ. ಆಗ ನಾನಿನ್ನು ಚಿಕ್ಕವನು. ಈ ಜಮೀನಿನ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆ ಜಾಗ ಎಲ್ಲಿದೆ ಎಂಬುದು ಸಹ ಗೊತ್ತಿಲ್ಲ. ನಾನು ನೋಡಿಲ್ಲ. ಒಂದು ವೇಳೆ ಸರ್ಕಾರದ ಜಮೀನನ್ನೇ ಹೊನ್ನೂರಪ್ಪ ಖರೀದಿಸಿದ್ದರೆ, ಖರೀದಿಸಲು ಬರುವುದಿಲ್ಲ ಎಂದಾದರೆ ಆ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಲಿ. ನಮಗ್ಯಾವ ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ.