ಕಲಘಟಗಿ: ಸಂತೋಷ ಲಾಡ್ ವಿರುದ್ಧ ಛಬ್ಬಿ ಬೆಂಬಲಿಗರ ಆಕ್ರೋಶ
* ಮುಗದ ಗ್ರಾಮದಲ್ಲಿ ಲಾಡ್ ಕಾರಿಗೆ ಮುತ್ತಿಗೆæ ಧಿಕ್ಕಾರ ಘೋಷಣೆ
* ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಲಾಡೋ, ಛಬ್ಬಿಯೋ ಎಂಬ ಗೊಂದಲ
* ಲಾಡ್-ಛಬ್ಬಿ ಶೀತಲ ಸಮರ
ಧಾರವಾಡ(ಜೂ.10): ಕಲಘಟಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಸಂತೋಷ ಲಾಡೋ ಅಥವಾ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿಯೋ ಎಂಬ ಗೊಂದಲ ಸೃಷ್ಟಿಯಾಗಿದ್ದು, ಕ್ಷೇತ್ರದ ಜನರೇ ಬುಧವಾರ ಸಂತೋಷ ಲಾಡ್ ಅವರ ಕಾರಿಗೆ ಮುತ್ತಿಗೆ ಹಾಕಿ ಈ ಕುರಿತಾಗಿ ಪ್ರಶ್ನಿಸಿರುವ ಪ್ರಸಂಗ ನಡೆದಿದೆ.
"
ಅಳ್ನಾವರದ ಲಾಡ್ ಕಚೇರಿಯಲ್ಲಿ ಉಚಿತ ಕ್ಯಾಂಟೀನ್ ಉದ್ಘಾಟಿಸಿ ಮುಗದ ಗ್ರಾಮದಲ್ಲಿ ದಿನಸಿ ಕಿಟ್ ಹಂಚಲು ಹೋಗುವಾಗ ಕ್ರಾಸ್ ಬಳಿ ನಾಗರಾಜ ಛಬ್ಬಿ ಅವರ ಬೆಂಬಲಿಗ ಕಾಂಗ್ರೆಸ್ ಸದಸ್ಯರು ಕಾರಿಗೆ ಮುತ್ತಿಗೆ ಹಾಕಿ ‘ಸಂತೋಷ ಲಾಡ್‌ಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.
ಗ್ರಾಮದಲ್ಲಿ ಆಹಾರ ಕಿಟ್ ಹಂಚದಂತೆ ವಿರೋಧ ವ್ಯಕ್ತಪಡಿಸಿದ ಛಬ್ಬಿ ಅಭಿಮಾನಿಗಳು, ತಿಳಿದಾಗೊಮ್ಮೆ ಕ್ಷೇತ್ರಕ್ಕೆ ಬಂದು ಭೇಟಿ ನೀಡುವ ನಿಮ್ಮನ್ನು ನಾಯಕರೆಂದು ಹೇಗೆ ಒಪ್ಪಿಕೊಳ್ಳೋಣ? ನಿಮ್ಮ ನಿರ್ಗಮನದ ನಂತರ ನಿರಂತರವಾಗಿ ನಮ್ಮ ಜತೆಗಿರುವ ಛಬ್ಬಿ ಅವರನ್ನು ಸ್ವೀಕರಿಸಬೇಕೆ ಹೇಳಿ? ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದರು.
ಹುಬ್ಬಳ್ಳಿ: ಕಿಮ್ಸ್‌ನಲ್ಲಿ 342 ಕೊರೋನಾ ಸೋಂಕಿತೆಯರಿಗೆ ಹೆರಿಗೆ..!
ಯಾವತ್ತೂ ಬರದ ತಾವು ಈಗ ಆಹಾರದ ಕಿಟ್ ನೀಡಲು ಬಂದ್ದಿದ್ದೀರಾ, ಸಮರ್ಥ ನಾಯಕರಿಲ್ಲದೇ ಕ್ಷೇತ್ರದಲ್ಲಿ ಪಕ್ಷವು ಸೊರಗಿ ಹೋಗುತ್ತಿದೆ. ಪಕ್ಷದ ಹಿನ್ನಡೆಗೆ ತಾವೇ ಕಾರಣ ಎಂದು ಲಾಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘೋಷಣೆಗಳ ಧ್ವನಿ ಜೋರಾಗುತ್ತಿದ್ದಂತೆ ಕಾರಿನಿಂದ ಕೆಳಗಿಳಿದು ಬಂದ ಲಾಡ್ ಪಕ್ಷದ ಕಾರ್ಯಕರ್ತರನ್ನು ಸಂತೈಸಲು ಪರದಾಡಬೇಕಾಯಿತು. ನಂತರದಲ್ಲಿ ಗ್ರಾಮದ ಬಡವರಿಗೆ ಆಹಾರ ಕಿಟ್ ವಿತರಿಸಿ ಮುಂದೆ ಸಾಗಿಸಿದರು.
ಲಾಡ್-ಛಬ್ಬಿ ಶೀತಲ ಸಮರ:
ಸಂತೋಷ ಲಾಡ್ ಹಾಗೂ ನಾಗರಾಜ ಛಬ್ಬಿ ಮಧ್ಯೆ ಕೆಲವು ದಿನಗಳಿಂದ ಶೀತಲ ಸಮರ ಶುರುವಾಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆಯುವ ವಿಚಾರದಲ್ಲಿ ಉಭಯ ನಾಯಕರಲ್ಲಿ ವೈಮನಸ್ಸು ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ನಾಗರಾಜ್ ಛಬ್ಬಿ ಅವರು ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏಕಾಏಕಿ ಲಾಡ್ ಅವರು ಕ್ಷೇತ್ರಕ್ಕೆ ಬಂದು ಆಹಾರ ಕಿಟ್ ಹಂಚುತ್ತಿರುವುದಕ್ಕೆ ಅವರ ಬೆಂಬಲಿಗರಿಂದ ವಿರೋಧ ವ್ಯಕ್ತವಾಗಿದ್ದು, ಈ ಕುರಿತಾಗಿ ಪಕ್ಷದ ರಾಜ್ಯ ಮುಖಂಡರು ಇಬ್ಬರ ಮಧ್ಯ ವೈಮನಸ್ಸನ್ನು ಯಾವ ರೀತಿ ಬಗೆಹರಿಸುತ್ತಾರೆಯೋ ಕಾದು ನೋಡಬೇಕಿದೆ.
ಮಾಜಿ ಸಚಿವ ಸಂತೋಷ ಲಾಡ್ ಹಾಗೂ ನಾನು ಒಳ್ಳೆಯ ಸ್ನೇಹಿತರು. ನನ್ನ ಅವರ ನಡುವೆ ಯಾವುದೇ ಬಗೆಯ ಭಿನ್ನಾಭಿಪ್ರಾಯಗಳಿಲ್ಲ. ಅವರು ಆಹಾರದ ಕಿಟ್ ಹಂಚುತ್ತಿದ್ದಾರೆ. ಇದು ನನಗೆ ಸಂತೋಷವನ್ನುಂಟು ಮಾಡಿದೆ. ಆದರೆ ಕ್ಷೇತ್ರದ ಕಾರ್ಯಕರ್ತರಲ್ಲಿ ಕೆಲ ಗೊಂದಲಗಳಿವೆ. ಹೀಗಾಗಿ ಮುಗದದಲ್ಲಿ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಕೂಗಿರಬಹುದು. ಕಾರ್ಯಕರ್ತರ ಗೊಂದಲಗಳನ್ನು ಪಕ್ಷದ ವರಿಷ್ಠರು ಬಗೆಹರಿಸಿ ಸಮಾಧಾನ ಪಡಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ತಿಳಿಸಿದ್ದಾರೆ.
ಮುಗದದಲ್ಲಿ ಯಾರು ಸಮಸ್ಯೆ ಮಾಡಿಲ್ಲ. ಯಾವುದೇ ಗಲಾಟೆಯಾಗಿಲ್ಲ. ಅಲ್ಲಿ ಏನು ನಡೆದಿದೆಯೋ ನನಗೇನು ಗೊತ್ತಿಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.