Asianet Suvarna News Asianet Suvarna News

ಬೆಂಗಳೂರು: ಪೀಣ್ಯ ಫ್ಲೈ ಓವರಲ್ಲಿ ರಾತ್ರಿ ಸಂಚಾರ ಇನ್ನೂ ತಡ?

120 ಪಿಲ್ಲರ್‌ (ಸ್ಪ್ಯಾನ್‌) ನಡುವಿನ 1200 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಬೇಕಿದೆ. ಇದಕ್ಕೆ ಸುಮಾರು ಒಂಬತ್ತು ತಿಂಗಳು ರಾತ್ರಿ ವೇಳೆ ಎಲ್ಲ ಬಗೆಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

All Vehicle Traffic Restricted at Night in Peenya Flyover in Bengaluru grg
Author
First Published Apr 3, 2024, 6:45 AM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಏ.03):  ಎಲ್ಲ ವಿಧದ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈ ಓವರ್‌ ಸದೃಢವಾಗಿದ್ದರೂ 1200 ಕೇಬಲ್‌ ಬದಲಾವಣೆ ಮಾಡಬೇಕಿದೆ. ಹಾಗಾಗಿ ಇನ್ನೂ ಒಂಬತ್ತು ತಿಂಗಳು ರಾತ್ರಿ ಸಮಯದಲ್ಲಿ ಎಲ್ಲ ಬಗೆಯ ವಾಹನಗಳಿಗೂ ಮೇಲ್ಸೇತುವೆ ಬಂದ್‌ ಆಗುವ ಸಾಧ್ಯತೆ ಹೆಚ್ಚಿದ್ದು, ಈಗಿನ ಪರಿಸ್ಥಿತಿಯೇ ಮುಂದುವರೆಯಲಿದೆ.

ಜ.16ರಿಂದ 19ರವರೆಗೂ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ತಜ್ಞರು ನಡೆಸಿದ್ದ ಭಾರ ಪರೀಕ್ಷೆಯಲ್ಲಿ ಮೇಲ್ಸೇತುವೆಯು ಸದೃಢವಾಗಿದೆ ಎಂಬುದು ಸಾಬೀತಾಗಿತ್ತು. ಈ ಬಗ್ಗೆ ತಜ್ಞರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ವರದಿ ಸಲ್ಲಿಸಿ ಎರಡು ತಿಂಗಳಾಗಿದೆ. ಆದರೆ 120 ಪಿಲ್ಲರ್‌ (ಸ್ಪ್ಯಾನ್‌) ನಡುವಿನ 1200 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಬೇಕಿದೆ. ಇದಕ್ಕೆ ಸುಮಾರು ಒಂಬತ್ತು ತಿಂಗಳು ರಾತ್ರಿ ವೇಳೆ ಎಲ್ಲ ಬಗೆಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

ಸಂಕ್ರಾಂತಿ ವೇಳೆಗೆ ಪೀಣ್ಯ ಫ್ಲೈಓವರ್‌ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತ?

120 ಪಿಲ್ಲರ್‌ ನಡುವೆ ತಲಾ ಎರಡರಂತೆ ಈಗಾಗಲೇ 240 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಎರಡನೇ ಹಂತದಲ್ಲಿ ಎರಡು ಪಿಲ್ಲರ್‌ ನಡುವೆ ಅಳವಡಿಸಿರುವ ತಲಾ 10ರಂತೆ 120 ಪಿಲ್ಲರ್‌ ನಡುವಿನ 1200 ಕೇಬಲ್‌ಗಳನ್ನೂ ಬದಲಾಯಿಸಬೇಕು. ಇದಕ್ಕೆ ಸುಮಾರು ಒಂಬತ್ತು ತಿಂಗಳಾಗಲಿದೆ. ಕೇಬಲ್‌ಗಳಿಗೆ ಸಿಮೆಂಟ್‌ ಹಾಕಿ ಭದ್ರಪಡಿಸಬೇಕಿದ್ದು ಈ ಸಮಯದಲ್ಲಿ ಐದಾರು ಗಂಟೆ ಮೇಲ್ಸೇತುವೆ ಮೇಲೆ ಯಾವ ವಾಹನಗಳೂ ಸಂಚರಿಸಬಾರದು ಎಂದು ತಿಳಿದು ಬಂದಿದೆ.

ಸಂದಿಗ್ಧ ಪರಿಸ್ಥಿತಿ:

ಪ್ರಸಕ್ತ ಮೇಲ್ಸೇತುವೆಯಲ್ಲಿ ಬೆಳಗ್ಗೆ 5ರಿಂದ ರಾತ್ರಿ 12ರವರೆಗೂ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ. ರಾತ್ರಿ ವೇಳೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಒಂದೊಮ್ಮೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆ ಮುಕ್ತ ಮಾಡಿದರೂ, 1200 ಕೇಬಲ್‌ ಬದಲಾಯಿಸಲು ಪುನಃ ಒಂಬತ್ತು ತಿಂಗಳು ರಾತ್ರಿ ಸಮಯದಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಹೆಚ್ಚಿದ್ದು, ಈ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿದೆ.

ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಗುರುವಾರ 50 ಗಂಟೆಗಳ ಕಾಲ ಕಾಂಕ್ರೀಟ್ ಸ್ಲ್ಯಾಬ್ ಕಾಮಗಾರಿ

120 ಪಿಲ್ಲರ್‌ ನಡುವೆ ಹೊಸದಾಗಿ ತಲಾ ಎರಡರಂತೆ 240 ಕೇಬಲ್‌ಗಳನ್ನು ಅಳವಡಿಸಿ ಮೇಲ್ಸೇತುವೆಯನ್ನು ಬಲಪಡಿಸಲಾಗಿತ್ತು. ಬಳಿಕ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಿ ಜ.16ರಿಂದ 19ರವರೆಗೂ ತಲಾ 30 ಟನ್‌ ಭಾರದ 16 ಟ್ರಕ್‌ಗಳನ್ನು ಗಂಟೆಗೆ ಎರಡರಂತೆ ಮೇಲ್ಸೇತುವೆ ಮೇಲೆ ನಿಲ್ಲಿಸಿ ಒಂದು ದಿನದ ಬಳಿಕ ಇದೇ ರೀತಿ ಗಂಟೆಗೆ ಎರಡರಂತೆ ಟ್ರಕ್‌ಗಳನ್ನು ತೆರವುಗೊಳಿಸಿ ‘ಲೋಡ್‌ ಟೆಸ್ಟಿಂಗ್‌’ ನಡೆಸಲಾಗಿತ್ತು. ಹಗಲು ಮತ್ತು ರಾತ್ರಿ ಸಮಯದ ಉಷ್ಣಾಂಶಕ್ಕೆ ಸೇತುವೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬ ಬಗ್ಗೆಯೂ ವಿಶ್ಲೇಷಣೆ ನಡೆಸಲಾಗಿತ್ತು. ನಂತರ ಎಲ್ಲ ವಿಧದ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆ ಸಮರ್ಥವಾಗಿದೆ ಎಂದು ತಜ್ಞರು ವರದಿ ನೀಡಿ ಎರಡು ತಿಂಗಳಾಗಿದೆ.

2 ವರ್ಷವಾದರೂ ಬಿಡದ ಗ್ರಹಣ

ತುಮಕೂರು ರಸ್ತೆಯಲ್ಲಿ ಗೊರಗುಂಟೆಪಾಳ್ಯ ಜಂಕ್ಷನ್‌ನಿಂದ ಪಾರ್ಲೆಜಿ ಫ್ಯಾಕ್ಟರಿವರೆಗೂ 5 ಕಿ.ಮೀ. ಉದ್ದವಿರುವ ಪೀಣ್ಯ ಮೇಲ್ಸೇತುವೆ ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೂ ಸಂಪರ್ಕ ಕೊಂಡಿಯಾಗಿದೆ. 8ನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103ನೇ ಪಿಲ್ಲರ್‌ ನಡುವಿನ 3 ಕೇಬಲ್‌ ಬಾಗಿದ್ದರಿಂದ 2021ರ ಡಿಸೆಂಬರ್‌ 25ರಲ್ಲಿ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಎನ್‌ಎಚ್‌ಎಐ ನಿಷೇಧಿಸಿತ್ತು. ಐಐಎಸ್‌ಸಿಯ ತಜ್ಞರು ಪರಿಶೀಲನೆ ನಡೆಸಿ ಭಾರೀ ವಾಹನಗಳು ಸಂಚರಿಸಿದ್ದರಿಂದ ಕೇಬಲ್‌ಗಳು ಬಾಗಿವೆ ಎಂದು ವರದಿ ನೀಡಿದ್ದರು. ಬಳಿಕ 2022 ರ ಫೆಬ್ರವರಿ 16ರಿಂದ ಲಘು ವಾಹನಗಳಿಗೆ ಮಾತ್ರ ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿತ್ತು. ಪ್ರಸಕ್ತ ಹಗಲಿನಲ್ಲಿ ಮಾತ್ರ ಲಘು ವಾಹನಗಳಿಗೆ ಸಂಚರಿಸಲು ಅವಕಾಶವಿದೆ. ಇದರಿಂದಾಗಿ ಎರಡು ವರ್ಷವಾದರೂ ಮೇಲ್ಸೇತುವೆಗೆ ಹಿಡಿದ ಗ್ರಹಣ ಸಧ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

Follow Us:
Download App:
  • android
  • ios