ವೀರಶೈವ ಲಿಂಗಾಯಿತ ಸಮುದಾಯದಲ್ಲಿ ವೃತ್ತಿ ಆಧಾರಿತವಾಗಿ ಒಳಪಂಗಡಗಳು ಸೃಷ್ಟಿಯಾಗಿದ್ದರೂ, ಆಚರಣೆಯಲ್ಲಿ ನಾವೆಲ್ಲ ಒಂದೇ ಆಗಿದ್ದು, ಲಿಂಗಾಯಿತ ಸಮುದಾಯ ಒಂದೇ ಆಗಿದೆ. ಹೀಗಾಗಿ, ನಾವೆಲ್ಲ ಒಂದಾಗಿ ಕೇಂದ್ರದ ಒಬಿಸಿ ಮೀಸಲಾತಿ ಪಡೆಯಲು ಹಕ್ಕೊತ್ತಾಯ ಮಂಡಿಸಬೇಕು ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿ​ದರು.

ಶಿವಮೊಗ್ಗ (ಜು.27) :  ವೀರಶೈವ ಲಿಂಗಾಯಿತ ಸಮುದಾಯದಲ್ಲಿ ವೃತ್ತಿ ಆಧಾರಿತವಾಗಿ ಒಳಪಂಗಡಗಳು ಸೃಷ್ಟಿಯಾಗಿದ್ದರೂ, ಆಚರಣೆಯಲ್ಲಿ ನಾವೆಲ್ಲ ಒಂದೇ ಆಗಿದ್ದು, ಲಿಂಗಾಯಿತ ಸಮುದಾಯ ಒಂದೇ ಆಗಿದೆ. ಹೀಗಾಗಿ, ನಾವೆಲ್ಲ ಒಂದಾಗಿ ಕೇಂದ್ರದ ಒಬಿಸಿ ಮೀಸಲಾತಿ ಪಡೆಯಲು ಹಕ್ಕೊತ್ತಾಯ ಮಂಡಿಸಬೇಕು ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿ​ದರು.

ನಗರದ ಜೆ.ಎಚ್‌.ಪಟೇಲ್‌ ಬಡಾವಣೆಯ ವೀರಶೈವ ಸಾಂಸ್ಕೃತಿಕ ಭವನದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ, ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್ತು, ಶ್ರೀ ಬಸವೇಶ್ವರ ವೀರಶೈವ ಸಮಾಜಸೇವಾ ಸಂಘ ವತಿಯಿಂದ ಸಮಗ್ರ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸುವ ಕುರಿತು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಂಬಂಧ ಆಯೋಜಿಸಲಾಗಿದ್ದ ವೀರಶೈವ ಲಿಂಗಾಯಿತ ಸಮಾಜದ ಜನಪ್ರತಿನಿಧಿಗಳು, ಸಮಾಜದ ಮುಖಂಡರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ-ಲಿಂಗಾಯತ ಮೀಸಲಾತಿ: ಕಲಬುರಗಿಯಲ್ಲಿ 100ಕ್ಕೂ ಹೆಚ್ಚು ಮಠಾಧೀಶರ ಸಭೆ

ಸಮಾ​ಜ​ಕ್ಕೆ ​ಹೋ​ರಾಟ ಫಲ ಸಿಗ​ಲಿ:

ಹಲವು ದಶಕಗಳಿಂದ ಒಬಿಸಿ ಮೀಸಲಾತಿಗೆ ಈ ಸಮಾಜವನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕೇಂದ್ರ ಒಬಿಸಿಯಲ್ಲಿ ಸಮಾಜದ 16 ಪಂಗಡಗಳು ಸೇರಿವೆ. ಆದರೆ ಇನ್ನಿತರ 70 ಕ್ಕೂ ಹೆಚ್ಚು ಉಪ ಪಂಗಡಗಳಿಗೆ ಅನ್ಯಾಯವಾಗಿದೆ. ಒಬಿಸಿ ಪಟ್ಟಿಸೇರ್ಪಡೆಗೆ ಪೂರಕವಾಗಿ ವೀರಶೈವ ಸಮಾಜ ಎಲ್ಲ ಅರ್ಹತೆ ಮತ್ತು ಮಾನದಂಡಗಳನ್ನು ಹೊಂದಿದ್ದರೂ ವಿವಿಧ ಕಾರಣಗಳಿಂದ ರಾಜಕೀಯ ಅನಾಸಕ್ತಿಯಿಂದಲು ಒಬಿಸಿ ಪಟ್ಟಿಗೆ ಇನ್ನೂ ಸೇರಿಲ್ಲ. ಈಗಾಗಲೇ ಬೆಂಗಳೂರು, ಹುಬ್ಬಳ್ಳಿ, ಕಲ್ಬುರ್ಗಿ ಮತ್ತು ನಾಲ್ಕನೆಯದಾಗಿ ಶಿವಮೊಗ್ಗದಲ್ಲಿ ಸಮಾವೇಶಗಳು ನಡೆದಿವೆ. ಸಸಿಯಾಗಿ ಪ್ರಾರಂಭವಾದ ಹೋರಾಟ ಈಗ ಶಿವಮೊಗ್ಗದಲ್ಲಿ ಮೊಗ್ಗಾಗಿದೆ. ಇನ್ನು ಹೂವಾಗಿ, ಕಾಯಾಗಿ, ಹಣ್ಣಾಗಿ ಸಮಾಜಕ್ಕೆ ಸಿಹಿ ಫಲ ಸಿಗುವವರೆಗೆ ಹೋರಾಟ ಮುಂದುವರಿಯಬೇಕು. ಉದ್ದೇಶ ಈ ಧರ್ಮದ ಎಲ್ಲ ಒಳಪಂಗಡಗಳುಹೊರಗೆ ಉಳಿಯದೇ ಒಂದಾಗಬೇಕು ಮತ್ತು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸೌಲಭ್ಯ ಸಿಗಬೇಕು ಎಂಬುದೇ ಆಗಿದೆ ಎಂದರು.

ಆ.14ರಂದು ಗದ​ಗ​ದಲ್ಲಿ ಮತ್ತೊಂದು ಸಮಾ​ವೇ​ಶ:

ಬೇಡ ಜಂಗಮ ಸಮಾಜಕ್ಕೆ ಈ ಹೋರಾಟದಿಂದ ಯಾವುದೇ ನಷ್ಟವಿಲ್ಲ. ಸಮಾಜದ ಹಿತದೃಷ್ಟಿಯಿಂದ ಮಠಾಧೀಶರೆಲ್ಲ ಒಗ್ಗಟ್ಟಾಗಿ ಬಂದಿದ್ದೇವೆ. ಸ್ವಾಮಿಗಳಿಗೆ ಇದರಿಂದ ಏನೂ ಲಾಭವಿಲ್ಲ. ಲಾಭ ಆಗುವುದಿದ್ದರೆ ಅದು ಸಮಾಜಕ್ಕೆ ಎಂಬುದನ್ನು ಮನಗಂಡು ಬಿಡಿಬಿಡಿಯಾಗಿ ಹೋರಾಟ ಮಾಡುವ ಬದಲು, ಎಲ್ಲರೂ ಒಟ್ಟಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ ಮಾಡೋಣ ಎಂದರಲ್ಲದೆ, ಗದಗ ನಗರದಲ್ಲಿ ಆ.14 ರಂದು ಮತ್ತೊಂದು ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

ದಡ್ಡ ಸಮಾ​ಜ​ವಾ​ಗ​ಬಾ​ರ​ದು:

ಅಧ್ಯಕ್ಷತೆ ವಹಿಸಿದ್ದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಇದು ಒಂದು ಪಂಗಡಕ್ಕೆ ಸೀಮಿತವಾಗಿಲ್ಲ. ನಮ್ಮದು ಕಾಯಕ ಮತ್ತು ದಾಸೋಹ ಸಂಸ್ಕೃತಿ. ಹಲವರು ಸರ್ಕಾರದ ಕಾರಣಗಳಿಂದ ತಮ್ಮ ವೃತ್ತಿಗಳನ್ನು ಬಿಟ್ಟಿದ್ದಾರೆ. ನಮ್ಮದು ದೊಡ್ಡ ಸಮಾಜ. ಆದರೆ ದಡ್ಡ ಸಮಾಜವಾಗಬಾರದು. ಸಮಾಜ ಮತ್ತು ಭಕ್ತರು ಶ್ರೀಮಂತರಾಗಬೇಕೆಂದು ಮಠ ಬಯಸುತ್ತದೆ. ಮನೆ, ಮಠ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ನಮ್ಮ ಅಸ್ಮಿತೆ ಕಳೆದುಕೊಳ್ಳುತ್ತಿರುವುದು ದುರಂತವಾಗಿದೆ. ಒಮ್ಮನಸ್ಸಿನಿಂದ ಹೋರಾಡೋಣ ಎಂದರು.

ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ. ಇಡೀ ದೇಶಕ್ಕೆ ಬೆಳಕು ಕೊಟ್ಟಸಮಾಜ ಈ ದುಸ್ಥಿತಿಗೆ ಬಂದಿದೆ. ನಮ್ಮ ಸ್ವಾರ್ಥಕ್ಕಾಗಿ ಹೆಚ್ಚಿನ ಚಿಂತನೆ ಮಾಡಿದ್ದರಿಂದ ಈ ಸ್ಥಿತಿಗೆ ತಲುಪಲು ಕಾರಣರಾಗಿದ್ದೇವೆ. ನಮ್ಮಲ್ಲೂ ಕಡು ಬಡವರು, ಕೃಷಿಕರು ದೊಡ್ಡ ಸಂಖ್ಯೆಯಲ್ಲಿದ್ದು, ಜವಾಬ್ದಾರಿ ಮರೆತ ಈ ಸಂದರ್ಭದಲ್ಲಿ ಜಗದ್ಗುರುಗಳು ನೇತೃತ್ವ ವಹಿಸಿ ಈ ಹೋರಾಟಕ್ಕೆ ಬೆಂಬಲ ನೀಡಿ ಎಚ್ಚರಿಸಿದ್ದಾರೆ ಎಂದು ಹೇಳಿದರು.

ಪೊ›. ನಂದೀಶ್‌ ಮತ್ತು ಡಾ. ಶೇಖರ್‌ ಸಜ್ಜನ್‌ ಸಮಾವೇಶದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಬಿಳಕಿ ಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಶ್ರೀಗಳು, ಎಡೆಯೂರಿನ ರೇಣುಕಾ ಶಿವಾಚಾರ್ಯ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು, ಅಖಿಲ ಭಾರತ ವೀರಶೈವ ಸಮಾಜದ ರಾಜ್ಯಾಧ್ಯಕ್ಷರು, ವೀರಶೈವ ಸಮಾಜದ ಪ್ರಮುಖರಾದ ಎಸ್‌. ಜ್ಯೋತಿಪ್ರಕಾಶ್‌, ಎನ್‌.ಜೆ. ರಾಜಶೇಖರ್‌, ಶಾಸಕ ಎಸ್‌.ಎನ್‌. ಚನ್ನಬಸಪ್ಪ, ಭದ್ರಾವತಿ ಮೋಹನ್‌, ವೀರಶೈವ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಮತ್ತೆ ಮುನ್ನಲೆಗೆ ಮೀಸಲಾತಿ ಹೋರಾಟ, ವೀರಶೈವ ಲಿಂಗಾಯತರ ಮೀಸಲಾತಿಗಾಗಿ ಮೋದಿ, ಶಾ ಭೇಟಿಗೂ ರೆಡಿ ಎಂದ ಶ್ರೀಗಳು

ನಿಖರ ಜಾತಿ​ವಾರು ಗಣನೆಯಾಗ​ಲಿ: ಆಯ​ನೂರು

ಮಾಜಿ ಶಾಸಕ ಆಯನೂರು ಮಂಜುನಾಥ್‌ ಮಾತನಾಡಿ, ಎಲ್ಲ ಆಯೋಗಗಳು ವರದಿ ನೀಡಿದರೂ ಸಹ ಸಮಾಜಕ್ಕೇನೂ ಲಾಭವಾಗಲಿಲ್ಲ. ಎಲ್ಲ ಆಯೋಗಗಳ ರಚನೆ ಮಾಡಿ ವರದಿ ಕೇಳುವುದು ರಾಜಕೀಯ ಕಾರಣಕ್ಕೆ ಮಾತ್ರ. ಕಾಂತರಾಜ್‌ ಆಯೋಗ ವರದಿ ನೀಡಿದರೂ ಸರ್ಕಾರಗಳು ಅದನ್ನು ಸ್ವೀಕರಿಸಿಲ್ಲ. ಮತ್ತೊಮ್ಮೆ ನಿಖರವಾಗಿ ಜಾತಿವಾರು ಗಣನೆ ಆಗಬೇಕಿದೆ. ಮಠಾಧೀಶರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ಸಮಾಜದ ಒಬ್ಬೊಬ್ಬ ಸ್ವಾಮೀಜಿಗಳು ಒಂದೊಂದು ಆಂದೋಲನ ಮಾಡಿದರೆ ಒಂದೊಂದು ನಿಲುವು ಪ್ರಕಟಿಸಿದರೆ ಸಮಾಜದಲ್ಲಿ ಗೊಂದಲ ಉಂಟಾಗುತ್ತದೆ ಎಂದರಲ್ಲದೆ, ಪೀಠಾಧಿಪತಿಗಳಲ್ಲೇ ಭಿನ್ನಮತ ಕಾಣಿಸುತ್ತಿರುವುದು ವಿಷಾದದ ಸಂಗತಿ. ಎಲ್ಲ ಮಠಾಧೀಶರನ್ನು ಒಟ್ಟಾಗಿರುವುದನ್ನು ನೋಡಲು ಸಮಾಜ ಬಯಸುತ್ತದೆ. ನಾವೇನಾಗಬೇಕು ಎಂಬ ಸಂದೇಶವನ್ನು ಈ ಸಮಾವೇಶದ ಮೂಲಕ ಕೊಡಿ ಎಂದರು.