ಮಂಗಳೂರಿನಲ್ಲಿ ಆಸ್ತಿಗಾಗಿ ಹೆತ್ತ ತಂದೆ ಆಲ್ಬರ್ಟ್ ರೇಗೋ ಅವರನ್ನು ಮಗಳು ಮಾಯಾ ತನ್ನ ಪ್ರೇಮಿಯೊಂದಿಗೆ ಸೇರಿ ಕೊ*ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ದಫನ ಮಾಡಿದ್ದ ಶವವನ್ನು ಎರಡು ತಿಂಗಳ ಬಳಿಕ ಹೊರತೆಗೆದು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ.

ಮಂಗಳೂರು: ಆಸ್ತಿಗಾಗಿ ಹೆತ್ತ ತಂದೆಯನ್ನೇ ಮಗಳು ಪ್ರೇಮಿ ಜೊತೆ ಸೇರಿ ಮುಗಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ದಫನ ಮಾಡಲಾಗಿದ್ದ ಶವವನ್ನು ಬರೋಬ್ಬರಿ ಎರಡು ತಿಂಗಳ ಬಳಿಕ ಹೊರತೆಗೆದು ಮರುತನಿಖೆ ನಡೆಸುತ್ತಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನ ದೆರೆಬೈಲ್ ಚರ್ಚ್‌ನ ದಫನ ಭೂಮಿಯಿಂದ ಮೃತರ ದೇಹವನ್ನು ಹೊರತೆಗೆದಿರುವ ಉರ್ವ ಠಾಣೆ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ (FSL) ತನಿಖೆಗೆ ಹೈದರಾಬಾದ್‌ಗೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ.

ಸಾವಿನ ಬಗ್ಗೆ ಅನುಮಾನ ಬರಲು ಕಾರಣವೇನು?

ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿಯಾಗಿದ್ದ ಆಲ್ಬರ್ಟ್ ರೇಗೋ ಅವರು ಕಳೆದ ಜುಲೈ 19 ರಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಆಲ್ಬರ್ಟ್ ಅವರಿಗೆ ನಾಲ್ವರು ಮಕ್ಕಳಿದ್ದು, ಅವರಿಗಾಗಿ ಸಾಕಷ್ಟು ಆಸ್ತಿಪಾಸ್ತಿ ಮಾಡಿ ಇಟ್ಟಿದ್ದರು. ಅವರ ಪೈಕಿ ಇಬ್ಬರು ಮಕ್ಕಳು ಪ್ರಸ್ತುತ ದುಬೈನಲ್ಲಿ ನೆಲೆಸಿದ್ದರೆ, ಆಲ್ಬರ್ಟ್ ಅವರು ತಮ್ಮ ಮಗಳು ಮಾಯಾ ರೇಗೂ ಜೊತೆ ಮಂಗಳೂರಿನ ತನ್ನ ಮನೆಯಲ್ಲೇ ವಾಸಿಸುತ್ತಿದ್ದರು. ಆಲ್ಬರ್ಟ್ ರೇಗೋ ಮೃತಪಟ್ಟಾಗ ಮಗಳು ಮಾಯಾ ರೇಗೂ ಸಂಬಂಧಿಕರಿಗಾಗಲಿ ಇಲ್ಲವೇ ನೆರೆಹೊರೆಯವರಿಗಾಗಲಿ ಯಾವುದೇ ಮಾಹಿತಿ ನೀಡದೆ ಮೃತದೇಹವನ್ನು ಕ್ರೈಸ್ತ ಸಮುದಾಯದಂತೆ ದೇರೆಬೈಲ್ ಚರ್ಚ್‌ನಲ್ಲಿ ದಫನ ಮಾಡಿದ್ದಳು.

ಮಗಳ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು

ಆಲ್ಬರ್ಟ್ ರೇಗೋ ಅವರ ಸಾವಿನ ಕುರಿತು, ಮಗಳ ಇತ್ತೀಚಿನ ನಡವಳಿಕೆಯ ಬಗ್ಗೆ ಸಂಶಯಗೊಂಡ ಆಲ್ಬರ್ಟ್ ಅವರ ಆಪ್ತ ಸ್ನೇಹಿತರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾತ್ರವಲ್ಲ ತಾನು ಮಾಡಿದ ತಪ್ಪು ಹೊರಬರುವ ಲಕ್ಷಣ ಕಾಣಿಸಿದಾಗ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಳು. ಅದೇ ಮಾತ್ರೆ ಆಲ್ಬರ್ಟ್ ನೀಡಿರಬಹುದು ಎಂಬ ಅನುಮಾನ ಮೂಡಿದ್ದು, ಕುಟುಂಬದ ಸ್ನೇಹಿತ ಹೆರಾಲ್ಡ್ ಪೆರೇರಾ ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮಾಯಾ ರೇಗೂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಜೈ ಆನೆಗುಡ್ಡೆಯ ನಿವಾಸಿ ಮಾನವ ಹಕ್ಕುಗಳ ಕಾರ್ಯಕರ್ತ ಅಜಯ್ ಕ್ರಿಸ್ಟೋಫರ್ ಡಿ'ಸಿಲ್ವಾ, ಹೆರಾಲ್ಡ್ ಪೆರೇರಾ ಈ ಪ್ರಕರಣ ಮುನ್ನಲೆಗೆ ತಂದಿದ್ದಾರೆ.

ದೂರಿನಲ್ಲಿ ವ್ಯಕ್ತವಾಗಿರುವ ಪ್ರಮುಖ ಆರೋಪಗಳು:

ಆಲ್ಬರ್ಟ್ ಅವರು ಸಾವಿಗೂ ಮುನ್ನ ತಮ್ಮ ನಾಲ್ಕು ಮಕ್ಕಳಿಗೆ ಸಮನಾಗಿ ಆಸ್ತಿಯನ್ನು ಹಂಚಿ ವಿಲ್ ಮಾಡಿಸಿದ್ದರು. ಆದರೆ ಅದನ್ನು ಹರಿದು ಹಾಕಿ ತಂದೆ ಸಾವನ್ನಪ್ಪುವ ಮುನ್ನ ಅವರ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಮಾಯಾ ಬಲವಂತವಾಗಿ ವಿಲ್ ಬರೆಸಿಕೊಂಡಿದ್ದಾಳೆ. ಅದಕ್ಕಾಗಿ ಮಾನಸಿಕ ದೈಹಿಕ ಹಿಂಸೆ ನೀಡಿದ್ದಾಳೆ. ಆಸ್ತಿ ಸಂಪೂರ್ಣ ತನಗೇ ಬರುವಂತೆ ತನ್ನ ಬಾಯ್‌ಫ್ರೆಂಡ್ ಜೊತೆಗೂಡಿ ತಂದೆಯನ್ನೇ ಕೊಂ**ದಿರುವ ಬಲವಾದ ಶಂಕೆ ಇದೆ ಎಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು ತಂದೆ ಅಸ್ವಸ್ಥಗೊಂಡಾಗ ಮನೆಗಿಂತ ಕೇವಲ 500 ಮೀಟರ್ ಅಂತರದ ಸಮೀಪದಲ್ಲಿ ದೊಡ್ಡ ಆಸ್ಪತ್ರೆಯಿದ್ದರೂ, ಅಲ್ಲಿಗೆ ಕರೆದೊಯ್ಯದೆ ಸುಮಾರು 4 ರಿಂದ 5 ಕಿಲೋಮೀಟರ್ ದೂರದಲ್ಲಿದ್ದ ಬೊಂದೇಲ್‌ನ ಖಾಸಗಿ ವೈದ್ಯರ ಬಳಿ ಕರೆದೊಯ್ದು ಸಾವು ಖಚಿತಪಡಿಸಿಕೊಂಡಿದ್ದಾಳೆ. ತಂದೆಯ ಮರಣದ ಬಳಿಕ ಸ್ಥಳೀಯ ಕೆಲ ಪೊಲೀಸರ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪವಿದೆ.

ಮರುತನಿಖೆ ಮತ್ತು ಎಫ್‌ಎಸ್‌ಎಲ್ ಪರೀಕ್ಷೆ

ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಆಲ್ಬರ್ಟ್ ರೇಗೋ ಅವರ ಸಾವಿನ ಸುತ್ತ ಅಕ್ಕಪಕ್ಕದ ಮನೆಯವರಿಗೂ ಅನುಮಾನಗಳ ತೀವ್ರವಾಗಿದೆ, ನ್ಯಾಯಾಲಯ ಹಾಗೂ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ದೆರೆಬೈಲ್ ಚರ್ಚ್‌ನ ದಫನ ಭೂಮಿಯಲ್ಲಿ ಹೂತುಹಾಕಲಾಗಿದ್ದ ಶವವನ್ನು ಬುಧವಾರ ಹೊರತೆಗೆಯಲಾಯಿತು.

ಸ್ಥಳೀಯ ತಹಸೀಲ್ದಾರ್ ಹಾಗೂ ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ದೇಹದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಎಫ್‌ಎಸ್‌ಎಲ್ (FSL) ವರದಿ ಬಂದ ನಂತರವೇ ಆಲ್ಬರ್ಟ್ ರೇಗೋ ಅವರದ್ದು ನೈಸರ್ಗಿಕ ಸಾವೇ ಅಥವಾ ಮಗಳೇ ಮುಗಿಸಿದ್ದಾಳ ಎಂಬ ಸತ್ಯಾಂಶ ಹೊರಬರಲಿದೆ. ಈ ಘಟನೆಯು ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.