Asianet Suvarna News Asianet Suvarna News

ಬೆಳಗಾವಿ: ಕಳಸಾ ಬಂಡೂರಿ ತಿರುವು ಯೋಜನೆಗೆ ಮತ್ತೆ ಗೋವಾ ಅಡ್ಡಗಾಲು?

ಮಹಾದಾಯಿ ನದಿಯ ನೀರನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿ ಮಲಪ್ರಭಾ ನದಿಗೆ ತಿರುಗಿಸಲು ಕರ್ನಾಟಕವು ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿದೆ. 

Again Goa Apposed to Kalasa Banduri Plan in Belagavi grg
Author
First Published Nov 20, 2022, 8:30 PM IST

ಬೆಳಗಾವಿ(ನ.20):  ಕಳೆದ ಇಪ್ಪತ್ತು ವರ್ಷಗಳಿಂದ ಜಾರಿಯಾಗದೇ ನೆನೆಗುದಿಗೆ ಬಿದ್ದಿರುವ ಕಿತ್ತೂರು ಕರ್ನಾಟಕದ ಜನತೆಯ ಪ್ರತಿಷ್ಠೆಯ ಯೋಜನೆಯಾಗಿರುವ ಕಳಸಾ ಬಂಡೂರಿ ತಿರುವು ಯೋಜನೆಗೆ ನೆರೆಯ ಗೋವೆಯು ಮತ್ತೆ ಮತ್ತೆ ಅಡ್ಡಗಾಲು ಹಾಕುವದನ್ನು ಮುಂದುವರೆಸಿದೆ.

2018 ರ ಅಗಷ್ಟ14 ರಂದು ನ್ಯಾ.ಮೂ.ಪಾಂಚಾಲ ನೇತೃತ್ವದ ನ್ಯಾಯಮಂಡಳಿ ತೀರ್ಪು ನೀಡಿ ಕಳಸಾದಿಂದ 1.72 ಮತ್ತು ಬಂಡೂರಿಯಿಂದ 2.18 ಟಿಎಮ್‌ಸಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿದ ನಂತರ ಗೋವೆಯು ಸರ್ವೋನ್ನತ ನ್ಯಾಯಾಲಯದ ಕದ ತಟ್ಟಿತು. ಅಲ್ಲಿ ವಿಚಾರಣೆ ನಡೆದ ನಂತರ 2019 ರ ಫೆಬ್ರುವರಿ 20 ರಂದು ತೀರ್ಪು ನೀಡಿ ಪಾಂಚಾಲ ನ್ಯಾಯಮಂಡಳಿಯ ತೀರ್ಪನ್ನು ಗೆಝೆಚ್‌ನಲ್ಲಿ ಪ್ರಕಟಿಸಲು ಹಾಗೂ ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ಕರ್ನಾಟಕಕ್ಕೆ ಅನುಮತಿ ನೀಡಿತು.

ಬಿಜೆಪಿ ತೊರೀತಾರಾ ರಮೇಶ ಜಾರಕಿಹೊಳಿ..?

ಮಹಾದಾಯಿ ನದಿಯ ನೀರನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿ ಮಲಪ್ರಭಾ ನದಿಗೆ ತಿರುಗಿಸಲು ಕರ್ನಾಟಕವು ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿದೆ. 500 ಹೆಕ್ಟೇರ್‌ ಅರಣ್ಯ ಭೂಮಿಯ ಬದಲಾಗಿ ಕೇವಲ 50 ಹೆಕ್ಟೇರ್‌ ಭೂಮಿಯನ್ನು ಬಳಸಿಕೊಳ್ಳಲು ಯೋಜನಾ ವರದಿಯನ್ನು ಬದಲಿಸಲಾಗುತ್ತಿದೆ.ಯೋಜನಾ ವೆಚ್ಚವನ್ನು . 1670 ಕೋಟಿಯಿಂದ 1000 ಕೋಟಿಗೆ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರವೇ ಕಾಮಗಾರಿಯನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸುಕರಾಗಿದ್ದಾರೆ.

ಈ ಮಧ್ಯೆ ಗೋವೆಯ ಪರಿಸರವಾದಿಗಳು ಯೋಜನೆಯ ಜಾರಿಯನ್ನು ತಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದಾರೆ. ಅಲ್ಲದೇ ಗೋವೆಯ ಮಾಜಿ ಉಪ ಮುಖ್ಯಮಂತ್ರಿ ವಿಜಯ್‌ ಸರದೇಸಾಯಿ ಅವರು ಕಳೆದ ನ. 17 ರಂದು ಕಳಸಾ ಯೋಜನಾ ಪ್ರದೇಶಕ್ಕೆ ರಹಸ್ಯವಾಗಿ, ಕರ್ನಾಟಕದ ನೀರಾವರಿ ಅಧಿಕಾರಿಗಳ ಪೂರ್ವಾನುಮತಿಯಿಲ್ಲದೇ ಭೇಟಿ ನೀಡಿದ್ದಾರೆ. ಕರ್ನಾಟಕವು ಮತ್ತೆ ಹೊಸದಾಗಿ ಕಾಮಗಾರಿ ಆರಂಭಿಸಿದ್ದು ಗೋವೆ ಸರಕಾರ ಯಾವದೇ ಕ್ರಮ ಕೈಕೊಳ್ಳದೇ ಮಲಗಿ ನಿದ್ದೆ ಮಾಡುತ್ತಿದೆ. ಹೀಗಾದರೆ ಮಹಾದಾಯಿ ನೀರು ಸಂಪೂರ್ಣವಾಗಿ ಕರ್ನಾಟಕದ ಪಾಲಾಗುತ್ತದೆ ಎಂದು ಸಾವಂತ ಸರಕಾರದ ವಿರುದ್ಧ ಗುಡುಗಿದ್ದಾರೆ. ತಾವು ರಹಸ್ಯವಾಗಿ ಭೇಟಿ ನೀಡಿದ ಫೋಟೊಗಳನ್ನು ಪಣಜಿಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ .

ಮಾರನೇ ದಿನವೇ ಶುಕ್ರವಾರ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಹೇಳಿಕೆ ನೀಡಿ ಹೊಸ ಬಾಂಬ… ಹಾಕಿದ್ದಾರೆ. ಗೋವೆಯ ಮನವಿಯ ಮೇರೆಗೆ ಕೇಂದ್ರವು ಮಹಾದಾಯಿ ಪ್ರಾಧಿಕಾರ ರಚನೆಗೆ ಮುಂದಾಗಿದೆ. ಪಾಂಚಾಲ ನ್ಯಾಯ ಮಂಡಳಿಯು ನೀಡಿದ ಆದೇಶವನ್ನೂ ಸಹ ಪ್ರಾಧಿಕಾರವು ಮಾನಿಟರ್‌ ಮಾಡಲಿದೆ.ಪ್ರಾಧಿಕಾರ ರಚನೆಯ ಬಗ್ಗೆ ಕೇಂದ್ರವು ತುಂಬಾ ಗಂಭೀರವಾಗಿದೆ ಎಂದು ಸಾವಂತ ಹೇಳಿದ್ದಾರೆ.

Belagavi : ಯಲ್ಲಮ್ಮನ ಕ್ಷೇತ್ರದಲ್ಲಿ ಹೋಮ್‌ ಸ್ಟೇಗೆ ಪ್ರೋತ್ಸಾಹ

ಗೋವೆಯ ಮನವಿಯ ಮೇರೆಗೆ ಕೇಂದ್ರವು ಹೊಸ ಹೆಜ್ಜೆಯನ್ನು ಇರಿಸಿದ್ದೇ ನಿಜವಾದರೆ ಕಳಸಾ ಬಂಡೂರಿ ತಿರುವು ಯೋಜನೆಯ ಅನುಷ್ಠಾನದ ಗತಿಯೇನು? ಉದ್ದೇಶಿತ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಲ್ಲಿ ಅದು ಕರ್ನಾಟಕದ ತಲೆಯ ಮೇಲಿನ ತೂಗುಗತ್ತಿ ಆಗಬಹುದೆ? ಗೋವೆಯ ಹೆಜ್ಜೆಗಳಿಗೆ ಕರ್ನಾಟಕದ ಉತ್ತರವೇನು? ಈ ಯೋಜನೆಯ ಸಂಬಂಧ ಗೋವೆಯ ಸರ್ವ ಪಕ್ಷಗಳು ಒಂದೇ ಧ್ವನಿಯಲ್ಲಿ ಮಾತನಾಡುವಾಗ ಕರ್ನಾಟಕದ ರಾಜಕೀಯ ಪಕ್ಷಗಳು ಏನು ಮಾಡುತ್ತಿವೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಪ್ರಶ್ನಿಸಿದ್ದಾರೆ.

ಕೇಂದ್ರವು ಮಹಾದಾಯಿ ಪ್ರಾಧಿಕಾರ ರಚಿಸಿದರೆ ಅದರ ಪರಿಣಾಮಗಳ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ತಿಳಿಸಬೇಕಾಗುತ್ತದೆ. ತಮ್ಮ ಸರಕಾರ ಇಡಬೇಕಾದ ಹೆಜ್ಜೆಗಳ ಬಗೆಗೂ ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios