ಬಿಎಸ್‌ಎಫ್ ಶಿಬಿರದಲ್ಲಿ ಕೊರೋನಾ ಸ್ಫೋಟ: ಮತ್ತೆ 14 ಯೋಧರಿಗೆ ಸೋಂಕು
* ಮತ್ತೆ 14 ಜನರಲ್ಲಿ ಸೋಂಕು ಪತ್ತೆ
* ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆ
* ತರಬೇತಿ ಶಿಬಿರ ಸ್ಥಗಿತ
ಬೆಂಗಳೂರು(ಸೆ.26): ದೇವನಹಳ್ಳಿ ತಾಲೂಕಿನ ಕಾರಹಳ್ಳಿಯಲ್ಲಿ ಇರುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ತರಬೇತಿ ಶಿಬಿರದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದ್ದು, ಶನಿವಾರ 14 ಯೋಧರಿಗೆ(Soldiers) ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಶಿಬಿರದಲ್ಲಿ ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
94 ಸೋಂಕಿತರ ಪೈಕಿ ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಯೋಧರು ಮತ್ತು ಆಕಾಶ್ ಆಸ್ಪತ್ರೆಯಲ್ಲಿ 20 ಯೋಧರನ್ನು ದಾಖಲಿಸಿ ಆರೈಕೆ ಮಾಡಲಾಗುತ್ತಿದೆ. ಉಳಿದ 14 ಯೋಧರನ್ನು ಯಲಹಂಕದ ಬಿಎಸ್‌ಎಫ್‌ನ(BSF) ಕೋವಿಡ್ ಆರೈಕೆ ಕೇಂದ್ರದಲ್ಲಿ ಇರಿಸಿ ಆರೈಕೆ ಮಾಡಲಾಗುತ್ತಿದೆ. ಸದ್ಯಕ್ಕೆ ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ.
ಬಿಎಸ್‌ಎಫ್ ಶಿಬಿರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚನೆ ಮೇರೆಗೆ ದೇವನಹಳ್ಳಿ ಪುರಸಭೆ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿ ಶನಿವಾರ ಕಾರಹಳ್ಳಿ ಬಿಎಸ್‌ಫ್ ತರಬೇತಿ ಶಿಬಿರ ಹಾಗೂ ಶಿಬಿರದ ಆವರಣವನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಿದ್ದಾರೆ.
ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರಲ್ಲಿ 83 ಮಂದಿಗೆ ಕೊರೋನಾ ಸೋಂಕು ದೃಢ
ಕಾರಹಳ್ಳಿ ಬಿಎಸ್‌ಎಫ್ ಶಿಬಿರದಲ್ಲಿ ಭಯೋತ್ಪಾದನೆ ನಿಗ್ರಹ ಸಂಬಂಧ ಯೋಧರಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 800 ಬಿಎಸ್‌ಎಫ್ ಯೋಧರು ಶಿಬಿರಕ್ಕೆ ಬಂದಿದ್ದರು. ಸೆ.15ರಂದು ಮೇಘಾಲಯದ ಶಿಲ್ಲಾಂಗ್‌ನಿಂದ 150 ಯೋಧರು ತರಬೇತಿ ಶಿಬಿರಕ್ಕೆ ಆಗಮಿಸಿದ್ದರು. ಈ ವೇಳೆ ಕೋವಿಡ್ (Covid 19) ಮಾರ್ಗಸೂಚಿಯಂತೆ ಎಲ್ಲರನ್ನೂ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಿದಾಗ 34 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.
ಶಿಬಿರದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಶಿಬಿರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಯೋಧರ ವಾಸ್ತವ್ಯಕ್ಕೆ ಶಿಬಿರದಲ್ಲೇ ವ್ಯವಸ್ಥೆ ಮಾಡಿದ್ದು, ಎಲ್ಲರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.