2 ವರ್ಷದ ಬಳಿಕ ವಿಜೃಂಭಣೆಯಿಂದ ಜರುಗಿದ ರಥೋತ್ಸವ
ಚಾಮುಂಡಿಬೆಟ್ಟದ ಮೇಲಿನ ನಾಡದೇವಿಗೆ ಮಂಜು ಮುಸುಕಿನ ಸಿಂಚನದ ನಡುವೆ, ಸಾವಿರಾರು ಮಂದಿ ಭಕ್ತ ಸಾಗರದ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಮೈಸೂರು (ಅ.10): ಚಾಮುಂಡಿ ಬೆಟ್ಟದ ಮೇಲಿನ ನಾಡದೇವಿಗೆ ಮಂಜು ಮುಸುಕಿನ ಸಿಂಚನದ ನಡುವೆ, ಸಾವಿರಾರು ಮಂದಿ ಭಕ್ತ ಸಾಗರದ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಕೋವಿಡ್ (Covid) ಕಾರಣದಿಂದ ಕಳೆದೆರಡು ವರ್ಷಗಳಿಂದ ರಥೋತ್ಸವಕ್ಕೆ ನಿರ್ಬಂಧವಿತ್ತು. ಆದರೆ ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಯಿತು. ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪ್ರಮೋದಾ ದೇವಿ (Pramoda Devi ) ಒಡೆಯರ್ ಅವರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಅಶ್ವಯುಜ ಶುಕ್ಲ ಪೂರ್ಣಿಮೆಯ ಉತ್ತರ ಭಾದ್ರ ನಕ್ಷತ್ರದಲ್ಲಿ ಬೆಳಗ್ಗೆ 7.50 ರಿಂದ 8.10ರ ಒಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಸಿಡಿಮದ್ದು ಸಿಡಿಸಿ, ಜಯಘೋಷ ಮೊಳಗಿಸುತ್ತಲೇ ರಥೋತ್ಸವವು ಜರುಗಿತು. ಹೂವು, ಬಣ್ಣ ಬಣ್ಣದ ಬಟ್ಟೆಯಿಂದ ಅಲಂಕರಿಸಿದ್ದ ರಥಕ್ಕೆ ಮೊದಲು ಉತ್ಸವ ಮೂರ್ತಿಯನ್ನು ಕೂರಿಸಲಾಯಿತು. ಶುಭ ಮುಹೂರ್ತದಲ್ಲಿ ಮಹಾ ಮಂಗಳಾರತಿ ಸಲ್ಲಿಸಿದ ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಟಿ. ದೇವೇ ಗೌಡ, ಎಸ್.ಎ. ರಾಮದಾಸ್, ಎಲ್. ನಾಗೇಂದ್ರ ಅವರು ರಥವನ್ನು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಭಕ್ತರ ಜಯಘೋಷ, ಹರ್ಷೋದ್ಗಾರ ಬೆಟ್ಟದ ಮೂಲೆ ಮೂಲೆಯಲ್ಲೂ ಮೊಳಗಿತು. ‘ತಾಯಿ ಚಾಮುಂಡೇಶ್ವರಿಗೆ ಜಯವಾಗಲಿ’ ಎಂಬ ಘೋಷಣೆಯೊಂದಿಗೆ ಭಕ್ತರು ರಥ ಎಳೆದರು. ಸಿಎಆರ್ ಪೊಲೀಸರು ಪರಂಪರೆಯಂತೆ ಕುಶಾಲುತೋಪು ಸಿಡಿಸಿದರು. ಅರಮನೆ ಪೊಲೀಸ್ ಬ್ಯಾಂಡ್ ತಂಡದಿಂದ ಸಂಗೀತ ಮೊಳಗಿತು. ಬಳಿಕ ರಥ ಬೀದಿಯಲ್ಲಿ ತೇರು ಹೊರಟಿತು. ಭಕ್ತರು ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸಿದರು.
50 ನಿಮಿಷಗಳವರೆಗೆ ಸಾಗಿ ಬಂದ ರಥ ಚಾಮುಂಡೇಶ್ವರಿ ದೇವಸ್ಥಾನದ ಪ್ರವೇಶ ದ್ವಾರ ತಲುಪುವಷ್ಟರಲ್ಲಿ 9 ಗಂಟೆ ಆಗಿತ್ತು. ಈ ವೇಳೆ ನೆರೆದಿದ್ದ ಭಕ್ತರು ರಥದ ಹಗ್ಗ ಮುಟ್ಟಿ ನಮಸ್ಕರಿಸಿದರು. ಮತ್ತೆ ಕೆಲವರು, ರಥಕ್ಕೆ ನಮಸ್ಕರಿಸಿದರು. ರಥಕ್ಕೆ ಚಕ್ರಕ್ಕೆ ತೆಂಗಿನ ಕಾಯಿ ಅರ್ಪಿಸಿ ಹೂವುಗಳನ್ನು ಪಡೆಯಲು ಮುಗಿಬಿದ್ದರು.
ಭಕ್ತ ಸಾಗರ, ನೂಕು ನುಗ್ಗಲು
ಕೋವಿಡ್ ಕಾರಣದಿಂದ ಕಳೆದೆರಡು ವರ್ಷದಿಂದ ಕಳೆಗುಂದಿದ್ದ ರಥೋತ್ಸವ ಈ ಬಾರಿ ಕಳೆಗಟ್ಟಿತ್ತು. ಅದ್ದೂರಿಯಾಗಿ ನಡೆದ ರಥೋತ್ಸವ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಹೀಗಾಗಿ, ಬೆಟ್ಟಕ್ಕೆ ಬೆಳಗ್ಗೆಯಿಂದಲೇ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದರು.
ಸಾರಿಗೆ ಬಸ್, ಸ್ವಂತ ವಾಹನ ಮಾತ್ರವಲ್ಲದೆ, ಬೆಟ್ಟದ ಮೆಟ್ಟಿಲುಗಳ ಮೂಲಕವೂ ಆಗಮಿಸಿ ಪೂಜೆ ಸಲ್ಲಿಸಿದರು. ಬೆಟ್ಟದ ಸುತ್ತಲಿನ ಗ್ರಾಮಗಳಾದ ಆಲನಹಳ್ಳಿ, ಲಲಿತಾದ್ರಿಪುರ, ಉತ್ತನಹಳ್ಳಿ, ಹೊಸಹುಂಡಿ, ಬಂಡಿಪಾಳ್ಯ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಚಾಮುಂಡಿಬೆಟ್ಟದಲ್ಲಿ ಸಂಭ್ರಮ ಮೇಳೈಸಿತ್ತು.
ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿತ್ತು. ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.
ರಥೋತ್ಸವ ಮುಗಿದರೂ ಭಕ್ತರು ದೇವಸ್ಥಾನದತ್ತ ಬರುತ್ತಿದ್ದರು. ಇದರಿಂದ, ವಾಹನ ದಟ್ಟಣೆ ಹೆಚ್ಚಾಯಿತು. ಪಾರ್ಕಿಂಗ್ ಸ್ಥಳವೂ ಭರ್ತಿಯಾಗಿ, ವಾಹನ ನಿಲ್ಲಿಸಲು ಜನರು ಪರದಾಡಿದರು. ಪೊಲೀಸರು ಸಂಚಾರ ನಿಯಂತ್ರಿಸು ಹರಸಾಹಸಪಟ್ಟರು.
ಹರಕೆ ಹೊತ್ತ ಭಕ್ತರು ಸಾವಿರ ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದರು. ಯುವತಿಯರು ಹಾಗೂ ಗೃಹಿಣಿಯರು ಮೆಟ್ಟಿಲುಗಳಿಗೆ ಅರಿಶಿಣ - ಕುಂಕುಮ ಹಚ್ಚಿ, ಹೂ ಹಾಕಿ ಕೈ ಮುಗಿದು ಭಕ್ತಿ ಸಮರ್ಪಿಸಿದರು.
ಅಪ್ಪು ಅಭಿಮಾನ
ರಥದ ಮುಂಭಾಗ ಪುನೀತ್ ರಾಜ್ ಕುಮಾರ್ ಚಿತ್ರವಿದ್ದ ಬಾವುಟ ಹಾರಿಸಿ ಅಭಿಮಾನಿಗಳು ಸಂಭ್ರಮಿಸಿದರು.