ಕೊಪ್ಪಳ: ಎಂಎಸ್‌ಪಿಎಲ್‌ ಕಂಪನಿಗಾಗಿ ಸ್ವಾಧೀನ ಮಾಡಿಕೊಂಡಿದ್ದ 1020 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಸರಿಯಿಲ್ಲ ಎಂದು ರೈತರು ಸುಮಾರು 17 ವರ್ಷಗಳ ಕಾಲ ನಡೆಸಿದ ಹೋರಾಟಕ್ಕೆ ಸೋಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ (ಅ.12) : ಕೊಪ್ಪಳ: ಎಂಎಸ್‌ಪಿಎಲ್‌ ಕಂಪನಿಗಾಗಿ ಸ್ವಾಧೀನ ಮಾಡಿಕೊಂಡಿದ್ದ 1020 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಸರಿಯಿಲ್ಲ ಎಂದು ರೈತರು ಸುಮಾರು 17 ವರ್ಷಗಳ ಕಾಲ ನಡೆಸಿದ ಹೋರಾಟಕ್ಕೆ ಸೋಲಾಗಿದೆ. ಮಂಗಳವಾರ ಸುಪ್ರೀಂ ಕೋರ್ಚ್‌ನ ದ್ವಿಸದಸ್ಯ ಪೀಠದಲ್ಲಿ ತೀರ್ಪು ಎಂಎಸ್‌ಪಿಎಲ್‌ ಕಂಪನಿ ಪರವಾಗಿ ಪ್ರಕಟವಾಗಿದೆ. ಧಾರವಾಡ ಹೈಕೋರ್ಚ್‌ನಲ್ಲಿ ಜಯಸಾಧಿಸಿದ್ದ ರೈತರು ಸುಪ್ರೀಂ ಕೋರ್ಚ್‌ನಲ್ಲಿ ಗೆಲ್ಲುವಲ್ಲಿ ವಿಫಲವಾಗಿದ್ದು, ಈಗ ಎಂಎಸ್‌ಪಿಎಲ್‌ ಕಂಪನಿಯ ಕಾರ್ಖಾನೆಗಾಗಿ ಸ್ವಾಧೀನ ಮಾಡಿಕೊಂಡಿರುವ 1020 ಎಕರೆ ಭೂಮಿ ಅಬಾಧಿತವಾಗಿದೆ.

ಕೊಪ್ಪಳ ಬಿಜೆಪಿ: ಟಿಕೆಟ್‌ಗಾಗಿ ಶುರುವಾಗಿದೆ ಶೀತಲ ಸಮರ

ಏನಿದು ವಿವಾದ?: 2005-06ನೇ ಸಾಲಿನಲ್ಲಿ ಕೆಐಡಿಬಿ ಮೂಲಕ ಎಂಎಸ್‌ಪಿಎಲ್‌ ಕಂಪನಿ ಉಕ್ಕಿನ ಕಾರ್ಖಾನೆ ಹಾಕಲು ಮೊದಲ ಹಂತದಲ್ಲಿ 1020 ಎಕರೆ ಭೂಮಿ ಸ್ವಾಧೀನ ಮಾಡಿಕೊಂಡಿತ್ತು. ಈ ಬಗ್ಗೆ ರೈತರು ತಗಾದೆ ತೆಗೆದು ಹೋರಾಟಕ್ಕಿಳಿದಿದ್ದರು. ಭೂಸ್ವಾಧೀನ ಪ್ರಶ್ನಿಸಿ ಧಾರವಾಡ ಹೈಕೋರ್ಚ್‌ ಪೀಠ ಮೆಟ್ಟಿಲು ಏರಿದ್ದರು. 2012ರ ಮಾ.22ರಂದು ಧಾರವಾಡ ಹೈಕೋರ್ಚ್‌ನ ತ್ರಿಸದಸ್ಯ ಪೂರ್ಣಪೀಠ, ಕೆಐಡಿಬಿ ಮೂಲಕ ಭೂ ಸ್ವಾಧೀನ ಪ್ರಕ್ರಿಯೆ ನಿಯಮಾನುಸಾರ ನಡೆದಿಲ್ಲ ಎಂದು ಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಿತ್ತು.

ಇದರಿಂದ ರೈತರು ಮತ್ತೆ ಭೂಮಿ ವಾಪಸು ಪಡೆಯುವಂತಾಗಿತ್ತು. ಆದರೆ, ಎಂಎಸ್‌ಪಿಎಲ್‌ ಕಂಪನಿ ಹೈಕೋರ್ಚ್‌ ಆದೇಶಕ್ಕೆ ಸುಪ್ರೀಂ ಕೋರ್ಚ್‌ ಮೂಲಕ ತಡೆಯಾಜ್ಞೆ ತಂದಿತ್ತು. ಹೀಗಾಗಿ ರೈತರು ಮರಳಿ ತಮ್ಮ ಭೂಮಿಯನ್ನು ವಾಪಸು ಪಡೆಯುವ ಪ್ರಕ್ರಿಯೆಗೆ ಹಿನ್ನಡೆಯಾಯಿತು. ಈ ಮಧ್ಯೆ ಎಂಎಸ್‌ಪಿಎಲ್‌ ಕಂಪನಿ, ಸರ್ಕಾರ ಮತ್ತು ಕೆಐಡಿಬಿ ಜಂಟಿಯಾಗಿ ರೈತರ ವಿರುದ್ಧ ಸುಪ್ರೀಂ ಕೋರ್ಚ್‌ನಲ್ಲಿ ದಾವೆ ಹೂಡಲಾಗಿತ್ತು.

ಈಗ ಸುಪ್ರೀಂ ಕೋರ್ಚ್‌ ಧಾರವಾಡ ಹೈಕೋರ್ಚ್‌ ತ್ರಿಸದಸ್ಯ ಪೀಠ ನೀಡಿದ್ದ ಆದೇಶ ರದ್ದುಗೊಳಿಸಿ, ಕೆಐಡಿಬಿ ಭೂ ಸ್ವಾಧೀನ ಪ್ರಕ್ರಿಯೆ ಸರಿ ಇದೆ ಎಂದು ಕ್ರಮ ಎತ್ತಿ ಹಿಡಿದಿದೆ. ಇದರಿಂದ ರೈತರ ಸುದೀರ್ಘ ಹೋರಾಟಕ್ಕೆ ಸೋಲಾಗಿದೆ. ಎಂಎಸ್‌ಪಿಎಲ್‌ ಕೊಪ್ಪಳ ಬಳಿ ಕಾರ್ಖಾನೆ ವಿಸ್ತರಣೆಗೆ ಇದ್ದ ಸಮಸ್ಯೆ ನಿವಾರಣೆಯಾಗಿದೆ.

ಕೋಡಿ ಬಿತ್ತು ಯಶ್‌ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆ: ರೈತರ ಮುಖದಲ್ಲಿ ಮಂದಹಾಸ

ತಲೆ ಎತ್ತಲಿದೆ ಬೃಹತ್‌ ಕೈಗಾರಿಕೆ

ಕೊಪ್ಪಳಕ್ಕೆ ಹೊಂದಿಕೊಂಡೇ ಬೃಹತ್‌ ಕೈಗಾರಿಕೆ ತಲೆ ಎತ್ತಲಿದೆ. ಎಂಎಸ್‌ಪಿಎಲ್‌ ಕಂಪನಿ ಈಗಾಗಲೇ ನಡೆಸುತ್ತಿರುವ ಕಾರ್ಖಾನೆ ಜತೆಗೆ 1020 ಎಕರೆ ವಿಸ್ತಾರವಾದ ಜಾಗ ಇರುವುದರಿಂದ ಕಂಪನಿಯ ಸಾಮರ್ಥ್ಯ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಚ್‌ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಸುಮಾರು ವರ್ಷಗಳ ರೈತರ ಹೋರಾಟಕ್ಕೆ ಹಿನ್ನಡೆಯಾಗಿರುವುದರಿಂದ ಸಹಜವಾಗಿ ನೋವಾಗಿದೆ. ಆದರೂ ನಮ್ಮ ಬಳಿ ಇರುವ ಮುಂದಿನ ದಾರಿಗಳನ್ನು ಪರಿಶೀಲಿಸಿಕೊಂಡು, ಮುಂದೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ.

- ರಾಜು ಬಾಕಳೆ, ಹೋರಾಟಗಾರ ಮತ್ತು ನ್ಯಾಯವಾದಿ