ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ನ.11 ರಿಂದ 15 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರುವಿನಿಂದ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌ ತಿಳಿಸಿದ್ದಾರೆ.

 ಮೈಸೂರು (ನ.11) : ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ನ.11 ರಿಂದ 15 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರುವಿನಿಂದ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌ ತಿಳಿಸಿದ್ದಾರೆ.

ರೈತರು (Farmer) ನವಂಬರ್‌ ತಿಂಗಳಿನಲ್ಲಿ ಬಿತ್ತನೆ ಮಾಡುಬಹುದಾದ ಬೆಳೆಗಳು ಮತ್ತು ತಳಿಗಳು. ಕಡಲೆ: ಅಣ್ಣೀಗೇರಿ-1, ಜೆಜಿ-11, ವಿಶಾಲ್‌, ಕೆಎಕೆ-2. ಸೋಯ ಅವರೆ: ಕೆಬಿ-79, ಕರುನೆ (ನೀರಾವರಿ). ಕಬ್ಬು (Sugar Cane) : ಸಿಒ-62175, ಸಿಒ-86032, ಸಿಒ-8371, ವಿಸಿಎಫ್‌-0517. ತೋಟಗಾರಿಕೆ ಬೆಳೆಗಳು: ಬೆಳ್ಳುಳ್ಳಿ, ಬಟಾಣಿ, ಕ್ಯಾರೇಟ್‌, ಟೊಮೆಟೋ, ಆಲೂಗಡ್ಡೆ, ಬದನೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಮೂಲಂಗಿ, ಗೆಡ್ಡೆಕೋಸು, ಬೀಟ್‌ ರೂಟ್‌, ತಿಂಗಳ ಹುರುಳಿಕಾಯಿ, ತೊಂಡೆ, ಕಲ್ಲಂಗಡಿ ಇತ್ಯಾದಿ.

ಕೃಷಿ ಸಲಹೆಗಳು: ಜಿಲ್ಲೆಯ ಕೆಲವು ಭಾಗಗಳಲ್ಲಿ ಜ್ಯೋತಿ ಭತ್ತದ ತಳಿಯಲ್ಲಿ ಊದುಭತ್ತಿ ರೋಗವು ಕಂಡುಬಂದಿದ್ದು, ಇದರ ಹತೋಟಿಗಾಗಿ ರೋಗಭಾದಿತ ಭತ್ತದ ತೆನೆಯನ್ನು ಕಿತ್ತು ನಾಶಪಡಿಸಬೇಕು. ನಂತರ ರೋಗವು ಮತ್ತಷÜು್ಟಹರಡುವುದನ್ನು ತಪ್ಪಿಸಲು ಮ್ಯಾಂಚೋಜೆಬ್‌ 75 ಡಬ್ಲ್ಯಪಿ ಎಂಬ ಔಷಧಿಯನ್ನು 2 ಗ್ರಾಂ / ಲೀಟರ್‌ ನೀರಿನಲ್ಲಿ ಸೇರಿಸಿ ಸಿಂಪಡಿಸಬೆಕು.

ತೊಗರಿ ಬೆಳೆಯಲ್ಲಿ ಕಾಯಿಕೊರಕ ಹುಳವು ಕಂಡು ಬಂದಿದ್ದು, ಇದರ ಹತೋಟಿಗಾಗಿ ಬೆಳೆ ಹೂ ಮೊಗ್ಗು ಮತ್ತು ಹೂವಿನ ಹಂತದಲ್ಲಿದ್ದಾಗ 0.5 ಮಿಲೀ. ಇಂಡೋಕ್ಸಾಕಾರ್ಬ್‌ 14.5 ಎಸ್‌ಸಿ ಅಥವಾ 0.5 ಮಿಲೀ ಕ್ಲೋರಂಟ್ರಾನಿಲಿಪ್ರೋಲ್‌ 18.5 ಎಸ್‌ಸಿ ಔಷಧಿಯನ್ನ ಒಂದು ಲೀ. ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.

ತೊಗರಿ ಬೆಳೆಯಲ್ಲಿ ಗೂಡು ಮಾರು ಹುಳು ಕಂಡುಬಂದಿದ್ದು, ಇದರ ಹತೋಟಿಗಾಗಿ ಲೀ. ನೀರಿಗೆ ಎರಡು ಮಿ.ಲೀ. ಪ್ರೊಫೆನೋಫಾಸ್‌ 50 ಇಸಿ ಅಥವಾ 0.5 ಮಿಲೀ ಕ್ಲೋರಂಟ್ರಾನಿಲಿಪ್ರೋಲ್‌ 18.5 ಎಸ್‌ಸಿ ಕೀಟನಾಶಕವನ್ನು ಸೇರಿಸಿ ಸಿಂಪಡಿಸುವುದು.

ಕಬ್ಬು ಬೆಳೆಯಲ್ಲಿ ಶಲ್ಕ ಕೀಟಗಳು ಗರಿ ಮತ್ತು ಕಾಂಡದಿಂದ ರಸ ಹೀರುವುದರಿಂದ ಗರಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇವುಗಳು ಗೆಣ್ಣಿನ ಸುತ್ತ ಇರುತ್ತವೆ. ಹಿಟ್ಟು ತಿಗಣೆಗಳು ಗರಿಯ ಸೋಗೆಯಲ್ಲಿ ಮತ್ತು ಗಿಣ್ಣಿನ ಸುತ್ತ ಇದ್ದು ರಸ ಹೀರುತ್ತವೆ. ಇದರಿಂದ ಕಬ್ಬಿನ ಬೆಳವಣಿಗೆ ಹಾಗೂ ಸಕ್ಕರೆ/ ಬೆಲ್ಲದ ಇಳುವರಿಯಲ್ಲಿ ಕುಂಠಿತಗೊಳ್ಳುತ್ತದೆ. ಈ ಕೀಟಗಳ ಹಾವಳಿ ಕಂಡುಬಂದಾಗ ಕಬ್ಬಿನ ಸೋಗೆಯನ್ನು ಬಿಡಿಸಿ ಲೀ. ನೀರಿಗೆ 2.0 ಮಿ.ಲೀ. ಕ್ಲೋರೋಪೈರಿಪಾಸ್‌ - 20 ಇಸಿ ಅಥವಾ 1.7 ಮಿಲೀ ಡೈಮಿಥೋಯೇಟ್‌- 30 ಇಸಿ ಸೇರಿಸಿ ಸಿಂಪಡಿಸುವುದು. ಎಕರೆಗೆ 300 ರಿಂದ 400 ಲೀ. ಸಿಂಪರಣಾ ದ್ರಾವಣ ಬೇಕಾಗುತ್ತದೆ.

ಚರ್ಮ ಗಂಟು ರೋಗ:

ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗವು ಕಂಡುಬಂದಿದ್ದು, ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಇದೊಂದು ವೈರಾಣು ರೋಗವಾಗಿದ್ದು, ಈ ರೋಗವು ಸೊಳ್ಳೆ ಕಡಿತದಿಂದ ಹರಡುತ್ತದೆ. ಈ ರೋಗವನ್ನು ತಡೆಗಟ್ಟಲು ರೈತರು ರಾಸುಗಳ ಕೊಟ್ಟಿಗೆಯನ್ನು ಶುಚಿಯಾಗಿಡಬೇಕು. ಕೊಟ್ಟಿಗೆಗೆ ಸೊಳ್ಳೆ ಪರದೆ ಅಳವಡಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಸಾಕಣೆದಾರರು ಪ್ರಥಮ ಆದ್ಯತೆ ನೀಡಬೇಕಿದೆ. ಈ ರೋಗದ ಲಕ್ಷಣ ಕಂಡು ಬಂದಲ್ಲಿ ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸಿ, ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಮೈಮೇಲಿನ ಗಂಟುಗಳು ಒಡೆದಾಗ ಗಾಯಗಳು ನಂಜಾಗದಂತೆ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು.

ರೋಗನಿರೋಧಕ ಶಕ್ತಿಯನ್ನು ಬಲಗೊಳಿಸಲು ಉತ್ತಮವಾದ ಸಮತೋಲನ ಪಶು ಆಹಾರ, ಹಸಿಮೇವು, ಖನಿಜ ಮಿಶ್ರಣಗಳನ್ನು ನೀಡಿ ಶಾರೀರಿಕ ಸಧೃಡತೆಯನ್ನು ಕಾಪಾಡುವುದು ಅತೀ ಮುಖ್ಯವಾಗಿದೆ. ಸೋಂಕಿನಿಂದ ಮರಣ ಹೊಂದಿದ ಜಾನುವಾರುಗಳನ್ನು ಆಳವಾದ ಗುಂಡಿಗಳಲ್ಲಿ ಹೂಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 94498 69914, 0821- 2591267 ಸಂಪರ್ಕಿಸಬಹುದು.