ಹಾಸನದ ವಿದ್ಯಾನಗರದಲ್ಲಿ ನಿರ್ಮಾಪಕಿ ಪುಷ್ಪ ಮತ್ತು ಜಿಪಿಎ ಹೋಲ್ಡರ್ ದೇವರಾಜ್ ನಡುವಿನ ನಿವೇಶನ ವಿವಾದ ಮತ್ತೆ ಭುಗಿಲೆದ್ದಿದೆ. ಪುಷ್ಪ ಅವರು ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದಾಗ ದೇವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.

ಹಾಸನ (ಫೆ.01): ನಿರ್ಮಾಪಕಿ ಪುಷ್ಪ ಮತ್ತು ಜಿಪಿಎ ಹೋಲ್ಡರ್ ದೇವರಾಜ್ ನಡುವಿನ ನಿವೇಶನ ವಿವಾದ ಮತ್ತೆ ತಾರಕಕ್ಕೇರಿದೆ. ಹಾಸನ ನಗರದ ವಿದ್ಯಾನಗರದಲ್ಲಿರುವ ಮನೆಯ ಪಕ್ಕದ ನಿವೇಶನಕ್ಕೆ ಸಂಬಂಧಿಸಿದಂತೆ ಹೈಡ್ರಾಮಾ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ಹಾಸನದ ವಿದ್ಯಾನಗರದಲ್ಲಿರುವ ಮನೆಯ ಪಕ್ಕದ ಖಾಲಿ ನಿವೇಶನದ ವಿಚಾರವಾಗಿ ಕಳೆದ ಕೆಲ ಸಮಯದಿಂದ ಜಟಾಪಟಿ ನಡೆಯುತ್ತಿದೆ. ಈ ಹಿಂದೆ ಜನವರಿ 04ರಂದು ಜಿಪಿಎ ಹೋಲ್ಡರ್ ಎಂದು ಹೇಳಿಕೊಳ್ಳುವ ದೇವರಾಜ್, ತಮಗೆ ಕೋರ್ಟ್ ಆದೇಶವಿದೆ ಎಂದು ಹೇಳಿ ನಿರ್ಮಾಪಕಿ ಪುಷ್ಪ ಅವರು ನಿರ್ಮಿಸಿದ್ದ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಒಡೆದು ಹಾಕಿ ತಂತಿಬೇಲಿ ಅಳವಡಿಸಿದ್ದರು. ಈ ಸಂಬಂಧ ನಿರ್ಮಾಪಕಿ ಪುಷ್ಪ ಅವರು ದೇವರಾಜ್ ವಿರುದ್ಧ ಅತಿಕ್ರಮ ಪ್ರವೇಶ (Trespass) ದೂರು ದಾಖಲಿಸಿದ್ದರು.

ಇದೀಗ ಮತ್ತೆ ರೊಚ್ಚಿಗೆದ್ದಿರುವ ಪುಷ್ಪ ಅವರು, ನಿನ್ನೆ (ಶನಿವಾರ) ದೇವರಾಜ್ ಹಾಕಿದ್ದ ತಂತಿಬೇಲಿಯನ್ನು ಕಿತ್ತುಹಾಕಿ, ಇಂದು (ಭಾನುವಾರ) ಬೆಳಿಗ್ಗೆಯಿಂದಲೇ ಮತ್ತೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದೇವರಾಜ್ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ಜೋರಾದ ವಾಗ್ವಾದ ನಡೆದಿದೆ.

ನಾನು ಇದೇ ಊರ ಮಗಳು, ಹೆದರಲ್ಲ:

ಸ್ಥಳಕ್ಕೆ ಬಂದ ದೇವರಾಜ್ ಅವರನ್ನು ತರಾಟೆಗೆ ತೆಗೆದುಕೊಂಡ ನಿರ್ಮಾಪಕಿ ಪುಷ್ಪ, 'ಯಾವುದೋ ಜಾಗಕ್ಕೆ ಸಂಬಂಧಿಸಿದ ದಾಖಲಾತಿ ತಂದು ಇಲ್ಲಿ ತೋರಿಸಬೇಡ. ನೀನು ಬಂದು ಇಲ್ಲಿ ರೌಡಿಸಂ ಮಾಡುತ್ತಿದ್ದೀಯಾ? ನಾನು ಇದೇ ಊರ ಮಗಳು, ನಿನ್ನ ಬೆದರಿಕೆಗಳಿಗೆಲ್ಲ ಹೆದರುವುದಿಲ್ಲ. ಈ ಜಾಗವನ್ನು ಆರು ವರ್ಷಗಳ ಹಿಂದೆಯೇ ನಾವು ಖರೀದಿಸಿದ್ದೇವೆ ಮತ್ತು ನಮ್ಮ ಅನುಭವದಲ್ಲಿದೆ. ಕೋರ್ಟ್ ಆದೇಶವಿದ್ದರೆ ನ್ಯಾಯಾಲಯದ ಮೂಲಕ ಬಾ, ಅದನ್ನು ಬಿಟ್ಟು ದೌರ್ಜನ್ಯ ಮಾಡಬೇಡ' ಎಂದು ಆವಾಜ್ ಹಾಕಿದ್ದಾರೆ. ಅಲ್ಲದೆ, ದೇವರಾಜ್ ಹಾಕಿದ್ದ ಬೋರ್ಡ್ ಅನ್ನೂ ಸಹ ಕಿತ್ತು ಹಾಕಿದ್ದಾರೆ.

ಪೊಲೀಸರ ಎಂಟ್ರಿ, ಕಾಮಗಾರಿ ಸ್ಥಗಿತ:

ಇಬ್ಬರ ನಡುವಿನ ಮಾತಿನ ಚಕಮಕಿ ಜೋರಾಗುತ್ತಿದ್ದಂತೆ, ಇತ್ತೀಚೆಗೆ ಸ್ಥಳದಲ್ಲಿ ಹತ್ತಾರು ಜನರು ಜಮಾಯಿಸಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದ ಕೆಲಸಗಾರರನ್ನು ಪೊಲೀಸರು ವಾಪಸ್ ಕಳುಹಿಸಿದ್ದು, ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವಾಗ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂದು ತಾಕೀತು ಮಾಡಿದ ಪೊಲೀಸರು, ಇಬ್ಬರೂ ಪೊಲೀಸ್ ಠಾಣೆಗೆ ಬಂದು ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ.

ಪೊಲೀಸರು ಕಾಮಗಾರಿ ನಿಲ್ಲಿಸುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಿರ್ಮಾಪಕಿ ಪುಷ್ಪ ಅವರು, ಕೋಪದಿಂದಲೇ ಮನೆ ಒಳಗೆ ತೆರಳಿದ್ದಾರೆ. ಒಟ್ಟಾರೆಯಾಗಿ ವಿದ್ಯಾನಗರದಲ್ಲಿ ನಡೆಯುತ್ತಿರುವ ಈ 'ರಿಯಲ್' ಡ್ರಾಮಾ ಹಾಸನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.