ಜೈ ಶ್ರೀರಾಮ ಎನ್ನುತ್ತಿದೆ ಸಿದ್ದು ಸರ್ಕಾರ: ಸಿಎಂ ವಿರುದ್ಧ ಹರಿಹಾಯ್ದ ಚೇತನ್
ವೈಜ್ಞಾನಿಕತೆಯನ್ನು ಬಿಟ್ಟು ರಾಜ್ಯ ಸರಕಾರವೂ ಜೈ ಶ್ರೀರಾಮ್ ಎನ್ನುತ್ತಿದೆ. ಮಳೆ ಇಲ್ಲದೇ ಕಲಬುರಗಿ, ಬೆಂಗಳೂರು ಜನ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸುವುದು ಬಿಟ್ಟು ಮಳೆಗಾಗಿ ಸಿಎಂ ಮಲೆ ಮಹಾದೇವಪ್ಪ ದೇವಸ್ಥಾನಕ್ಕೆ ತೆರಳಿ 20 ನಿಮಿಷ ಪೂಜೆ ಮಾಡ್ತಾರೆ ಅಂದ್ರೆ ಎಲ್ಲಿದೆ ವೈಜ್ಞಾನಿಕತೆ ? ಎಲ್ಲಿದೆ ವೈಚಾರಿಕತೆ ಮನಸ್ಥಿತಿ ? ಎಂದು ಖಾರವಾಗಿ ಪ್ರಶ್ನಿಸಿದ ನಟ ಚೇತನ್
ಕಲಬುರಗಿ(ಏ.03): ವೈಚಾರಿಕೆಯ ಮಾತನಾಡುವ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಟೆಂಪಲ್ ರನ್ ಮಾಡೋದು ಅರ್ಥವಿಲ್ಲದ್ದು, ಬುದ್ಧ, ಬಸವ, ಅಂಬೇಡ್ಕರ್ ವಾದ ಮತ್ತು ವೈಚಾರಿಕತೆಯ ಬಗ್ಗೆ ಮಾತನಾಡುವ ಸತೀಶ ಜಾರಕಿಹೊಳಿ ಸೇರಿದಂತೆ ಅನೇಕರು ಇಲೆಕ್ಷನ್ ಸಮಯದಲ್ಲಿ ಟೆಂಪಲ್ ರನ್ ಮಾಡುತ್ತಿರುವುದು ದುರಂತ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿ ಪ್ರವಾಸದಲ್ಲಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ದ್ವಂದ್ವ ಬಿಟ್ಟು ಹೊರಬನ್ನಿ, ಮೌಢ್ಯ ತೊಡೆದು ಹಾಕಲು ಪ್ರಾಮಾಣಿಕರಾಗಿ ಕೈ ಜೋಡಿಸಿರಿ ಎಂದು ಕರೆ ನೀಡಿದರು.
ಇತ್ತ ವೈಚಾರಿಕತೆ ಮಾತು- ಅತ್ತ ಟೆಂಪಲ್ ರನ್:
ವೈಚಾರಿಕೆಯ ಮಾತನಾಡುವವರು ಚುನಾವಣೆ ಸಂದರ್ಭದಲ್ಲಿ ಟೆಂಪಲ್ ರನ್ ಮಾಡೋದು ಅರ್ಥವಿಲ್ಲದ್ದು, ಬುದ್ಧ, ಬಸವ, ಅಂಬೇಡ್ಕರ್ ವಾದ ಮತ್ತು ವೈಚಾರಿಕತೆಯ ಬಗ್ಗೆ ಮಾತನಾಡುವ ಸತೀಶ ಜಾರಕಿಹೊಳಿ ಅವರು ಟೆಂಪಲ್ ರನ್ ಮಾಡುತ್ತಿರುವುದು ದುರಂತ ಎಂದರು.
ರಜನೀಕಾಂತ್ ‘ಸಂಘಿ‘ ವಿವಾದ: ಅಪ್ಪ-ಅಮ್ಮಗಳ ಮಾತಿನ ಮಧ್ಯೆ ಬಂದ ನಟ ಅಹಿಂಸಾ ಚೇತನ್!
ರಾಮಮಂದಿರ ಸಂದರ್ಭದಲ್ಲಿ ವಾಲ್ಮೀಕಿ ಮಂದಿರ ಆಗಬೇಕು ಎಂದವರು ಸತೀಶ ಜಾರಕಿಹೊಳಿ. ಆದರೆ, ವಾಲ್ಮೀಕಿ ಮಂದಿರವೂ ಮೌಡ್ಯವೇ, ಚುನಾವಣೆಗೋಸ್ಕರ ಇವರೆಲ್ಲಾ ಯಾವ ಹಂತಕ್ಕೆ ಬೇಕಾದ್ರೂ ಹೋಗ್ತಾರೆ ಅನ್ನೋದಕ್ಕೆ ಇದು ಸಾಕ್ಷಿ ಎಂದರು.
ರಾಜಕಾರಣದಲ್ಲಿ ಪ್ರಾಮಾಣಕ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಆದರೆ ರಾಜ್ಯದ ಪಕ್ಷಗಳಲ್ಲಿ ಮಕ್ಕಳು, ಅಳಿಯಂದಿರು, ಸೊಸೆಯಂದಿರಿಗೆ ಟಿಕೆಟ್ ಕೊಡಲಾಗುತ್ತಿದೆ. ಇದರಿಂದ ಆ ಪಕ್ಷಗಳಿಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ ಎಂದರು.
ಸತೀಶ ಜಾರಕಿಹೊಳಿ ಅವರು ಪ್ರಾಮಾಣಿಕರು ಅಂತ ತೋರಿಸೋಕೆ ನಮ್ಮ ಸಿದ್ದಾಂತ ಬೇಕು, ಆದ್ರೆ ಅವರಿಗೆ ಚುನಾವಣೆಯಲ್ಲಿ ಗೆಲ್ಲಲು ದೇವಸ್ಥಾನ ಬೇಕು. ಮನುವಾದದ ರಾಜ್ಯ ಸರಕಾರದ ಪಕ್ಷವನ್ನು, ಹಿಂದೂತ್ವದ ಕೇಂದ್ರ ಸರಕಾರದ ಪಕ್ಷವನ್ನು ಬಿಟ್ಟು ನಮ್ಮ ಜೊತೆ ಬನ್ನಿ ಎಂದು ಜಾರಕಿಹೊಳಿಗೆ ಆಹ್ವಾನಿಸಿದ ಚೇತನ್, ಆದಿವಾಸಿಗಳು, ಸಲಿಂಗಪ್ರೇಮಿಗಳು, ಶೂದ್ರರು, ಮಹಿಳೆಯರು, ಅಲ್ಪಸಂಖ್ಯಾತರ ಪರವಾಗಿ ನಿಂತು ಉತ್ತಮ ಸಮಾಜ ಕಟ್ಟಲು ಬನ್ನಿ. ಅದು ಬಿಟ್ಟು ಒಂದು ಕಡೆ ನಮ್ಮ ಸಿದ್ದಾಂತ ಹೈಜಾಕ್ ಮಾಡ್ತಿರಾ. ಇನ್ನೊಂದು ಕಡೆ ಜೈ ಶ್ರೀರಾಮ ಹೈಜಾಕ್ ಮಾಡಲು ಹೋಗೋದು ಅದೆಷ್ಟು ಸರಿ ಎಂದು ಪ್ರಶ್ನಿಸಿದರು.
ಜೈ ಶ್ರೀರಾಮ ಎನ್ನುತ್ತಿದೆ ಸಿದ್ದು ಸರ್ಕಾರ:
ಸಿಎಂ ಸಿದ್ರಾಮಯ್ಯ ನಡೆ ಬಗ್ಗೆಯೂ ನಟ ಚೇತನ್ ಆಕ್ಷೇಪಿಸಿದರಲ್ಲದೆ ವೈಜ್ಞಾನಿಕತೆಯನ್ನು ಬಿಟ್ಟು ರಾಜ್ಯ ಸರಕಾರವೂ ಜೈ ಶ್ರೀರಾಮ್ ಎನ್ನುತ್ತಿದೆ. ಮಳೆ ಇಲ್ಲದೇ ಕಲಬುರಗಿ, ಬೆಂಗಳೂರು ಜನ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸುವುದು ಬಿಟ್ಟು ಮಳೆಗಾಗಿ ಸಿಎಂ ಮಲೆ ಮಹಾದೇವಪ್ಪ ದೇವಸ್ಥಾನಕ್ಕೆ ತೆರಳಿ 20 ನಿಮಿಷ ಪೂಜೆ ಮಾಡ್ತಾರೆ ಅಂದ್ರೆ ಎಲ್ಲಿದೆ ವೈಜ್ಞಾನಿಕತೆ ? ಎಲ್ಲಿದೆ ವೈಚಾರಿಕತೆ ಮನಸ್ಥಿತಿ ? ಎಂದು ಖಾರವಾಗಿ ಪ್ರಶ್ನಿಸಿದರು.
2013ರಲ್ಲಿ ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಸಿಎಂ, 2023 ರಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ . ಇದು ಸಂಪೂರ್ಣ ಅವೈಜ್ಞಾನಿಕತೆ, ಓಟಿಗೋಸ್ಕರ ಮೌಡ್ಯತೆ ಮೆರೆಯುತ್ತಿರುವುದು ದಿಕ್ಕು ತಪ್ಪಿಸುವ ಕೆಲಸ ಎಂದು ಚೇತನ್ ಟೀಕಿಸಿದರು.
ಕೇಂದ್ರೀಯ ವಿವಿ ಸರಸ್ವತಿ ಪೂಜೆ ವಿರೋಧಿಸಿದ ಸಂಶೋಧನಾರ್ಥಿಗೆ ಬಂಬಲ:
ಇಲ್ಲಿನ ಆಳಂದ ರಸ್ತೆಯ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಸರಸ್ವತಿ ಪ್ರತಿಮೆ ಪೂಜೆಗೆ ಅಡ್ಡಿ ಪಡಿಸಿದ್ದ ಸಂಶೋಧನಾ ವಿದ್ಯಾರ್ಥಿ ನಂದಪ್ಪನಿಗೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಚೇತನ್ ಹೇಳಿದರು.
ನಂದಕುಮಾರ ಒಬ್ಬ ಹೋರಾಟ ಮನಸ್ಥಿತಿಯ ಯುವಕ. ಆತನನ್ನು ವಿವಿಯಿಂದ ಸಸ್ಪೆಂಡ್ ಮಾಡಲಾಗಿದೆ. ಕೂಡಲೇ ಮರಳಿ ಸಂಶೋಧನೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
'ವಿವೇಕಾನಂದರು ಸಮಾನತಾವಾದಿಯಲ್ಲ, ಅವರು ನಮ್ಮವರಲ್ಲ..' ಚೇತನ್ ಅಹಿಂಸಾ ಟ್ವೀಟ್!
ಸಾರ್ವಜನಿಕ ಸ್ಥಳ, ಶಾಲೆ, ಕಾಲೇಜು, ವಿವಿಗಳು ಸೇರಿ ಎಲ್ಲಾ ಸರಕಾರಿ ಕಛೇರಿಗಳಲ್ಲಿಯೂ ಯಾವುದೇ ಒಂದು ಧರ್ಮದ ದೇವರ ಪೂಜೆ ಸಲ್ಲದು, ಸಂವಿಧಾನದಲ್ಲಿ ಧರ್ಮ ನಿರಪೇಕ್ಷಿತ ಅಂತಿದೆ. ನಿಮ್ಮ ಮನೆಯಲ್ಲಿ 33 ಕೋಟಿ ದೇವರ ಪೂಜೆ ಬೇಕಾದ್ರೂ ಮಾಡಿಕೊಳ್ಳಿ, ಅದಕ್ಕೆ ವಿರೋಧ ಇಲ್ಲ . ಆದರೆ ಶಾಲೆ , ವಿವಿಗಳಲ್ಲಿ ಸರಸ್ವತಿ ಪೂಜೆ ಬೇಡ ಎಂದರು.
ವಿದ್ಯಾರ್ಥಿಗಳು ವೈಜ್ಞಾನಿಕ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಿಮ್ಮ ಹಾಸ್ಟೇಲನ ರೂಮನಲ್ಲಿ ಪೂಜೆ ಮಾಡಿ ತಪ್ಪೇನಿಲ್ಲ. ಆದರೆ ಸಾರ್ವಜನಿಕ ಜಾಗದಲ್ಲಿ ಪೂಜೆ ಮಾಡುವುದು ಒಪ್ಪಿಗೆ ಕಾಣಲ್ಲ. ಸರಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು. ಸರಕಾರದ ಆದೇಶ ಇಲ್ಲ ಅಂತ ದೇವರ ಪೂಜೆ ಮಾಡುವುದು ಸರಿಯಲ್ಲ. ಇದನ್ನು ವಿರೋಧಿಸುವ ಮನಸ್ಥಿತಿ ಪ್ರಜ್ಞಾವಂತರು ಬೆಳೆಸಿಕೊಳ್ಳಬೇಕು ಎಂದರು. ಕಲಬುರಗಿಯಲ್ಲಿರುವ ಕೇಂದ್ರೀಯ ವಿವಿಯಲ್ಲಿನ ನಂದಕುಮಾರನಂತಹ ವಿದ್ಯಾರ್ಥಿಗೆ ತಾವು ನೈತಿಕ ಬೆಂಬಲದ ಜೊತೆಗೆ ಕಾನೂನು ಹೋರಾಟಕ್ಕೆ ನೆರವು ನೀಡುತ್ತೇನೆಂದು ಚೇತನ್ ಹೇಳಿದರು.