ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖ..!
ಎಕ್ಸ್ ಪ್ರೆಸ್ ವೇನಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೆ ಮೇ ತಿಂಗಳಲ್ಲಿ ಸಂಭವಿಸಿದ ಅಪಘಾತದಲ್ಲಿ 29 ಮಂದಿ ಸಾವನ್ನಪ್ಪಿದರೆ, ಜೂನ್ ತಿಂಗಳಲ್ಲಿ 28 ಮಂದಿ ಕೊನೆಯುಸಿರೆಳೆದಿದ್ದರು. ಜುಲೈ ತಿಂಗಳಲ್ಲಿ ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಅಪಘಾತಗಳ ಪ್ರಮಾಣ ಕುಸಿದು ಸಾವಿನ ಸಂಖ್ಯೆ 8ಕ್ಕೆ ಇಳಿದಿದೆ. ಇದರಲ್ಲಿ ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
-ಎಂ.ಅಫ್ರೋಜ್ ಖಾನ್
ರಾಮನಗರ(ಆ.05): ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಅಪಘಾತ ಸಂಖ್ಯೆ ಇಳಿಮುಖಗೊಂಡು ಒಂದಂಕಿಗೆ ತಲುಪಿದೆ. ಈ ಮೊದಲು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸಿ ಸಾವು ನೋವು ಸಂಭವಿಸುತ್ತಿತ್ತು. ಆದರೀಗ ಸುರಕ್ಷತೆ ಮತ್ತು ಅಪಘಾತ ತಡೆಗೆ ಕೆಲವು ಕ್ರಮಗಳನ್ನು ಕೈಗೊಂಡ ಪರಿಣಾಮ ಅಪಘಾತಗಳ ಸಂಖ್ಯೆ ಕ್ಷೀಣಿಸಿದೆ.
ಎಕ್ಸ್ ಪ್ರೆಸ್ ವೇನಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೆ ಮೇ ತಿಂಗಳಲ್ಲಿ ಸಂಭವಿಸಿದ ಅಪಘಾತದಲ್ಲಿ 29 ಮಂದಿ ಸಾವನ್ನಪ್ಪಿದರೆ, ಜೂನ್ ತಿಂಗಳಲ್ಲಿ 28 ಮಂದಿ ಕೊನೆಯುಸಿರೆಳೆದಿದ್ದರು. ಜುಲೈ ತಿಂಗಳಲ್ಲಿ ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಅಪಘಾತಗಳ ಪ್ರಮಾಣ ಕುಸಿದು ಸಾವಿನ ಸಂಖ್ಯೆ 8ಕ್ಕೆ ಇಳಿದಿದೆ. ಇದರಲ್ಲಿ ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಸಾವಿನ ಹೆದ್ದಾರಿಯಂತಾಗಿದ್ದ ಎಕ್ಸ್ ಪ್ರೆಸ್ ವೇ - ರಾಜ್ಯದ ಮೊದಲ ಎಕ್ಸ್ ಪ್ರೆಸ್ ವೇ ಆದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿರವರು ಕಳೆದ ಮಾಚ್‌ರ್ ತಿಂಗಳಲ್ಲಿ ಲೋಕಾರ್ಪಣೆ ಮಾಡಿದ್ದರು. ಆನಂತರ ಪ್ರತಿನಿತ್ಯ ಸಂಭವಿಸುತ್ತಿದ್ದ ಅಪಘಾತಗಳಂತಹ ದುರ್ಘಟನೆ ಹಾಗೂ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಕ್ರಮಗಳಿಂದಾಗಿ ಸದಾ ಸುದ್ದಿಯಲ್ಲಿದ್ದ ಎಕ್ಸ್‌ಪ್ರೆಸ್ ವೇ ಸಾವಿನ ಹೆದ್ದಾರಿಯಂತಾಗಿತ್ತು.
ಈ ವರ್ಷ ಜನವರಿಯಿಂದ ಜುಲೈವರೆಗೆ ಕೇವಲ 7 ತಿಂಗಳಲ್ಲಿ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 398 ಅಪಘಾತಗಳು ಸಂಭವಿಸಿ 121 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಬೆಂಗಳೂರು - ಮದ್ದೂರು ವಿಭಾಗದಲ್ಲಿ 59 ಜನ ಸಾವನ್ನಪ್ಪಿದ್ದರೆ, ಮದ್ದೂರು - ಮೈಸೂರು ವಿಭಾಗದಲ್ಲಿ 62 ಜನ ಮೃತಪಟ್ಟಿದ್ದರು.
ಅಪಘಾತಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಜೂನ್ ತಿಂಗಳಲ್ಲಿ ಎಕ್ಸ್ ಪ್ರೆಸ್ ವೇ ಅನ್ನು ವೀಕ್ಷಣೆ ಮಾಡಿದ್ದರು. ಅಲ್ಲದೆ, ಹೆದ್ದಾರಿ ನಿರ್ವಹಣೆ ಮತ್ತು ಅಪಘಾತ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಧಿಕಾರದ ಅಧಿಕಾರಿಗಳಿಗೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದರು. ಅದರಲ್ಲಿ ಕೆಲವೊಂದು ಸುರಕ್ಷತಾ ಕ್ರಮಗಳು ಜಾರಿಯಾದ ಹಿನ್ನೆಲೆಯಲ್ಲಿ ಅಪಘಾತಗಳ ಸಂಖ್ಯೆಯೂ ಕ್ಷೀಣಿಸಲು ಕಾರಣವಾಗಿದೆ.
ಕೈಗೊಂಡ ಕ್ರಮಗಳು ಏನೇನು?
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್ ವೇನಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ. ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಗಳಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಪ್ರವೇಶ ಮತ್ತು ನಿರ್ಗಮನ ಪಾಯಿಂಟ್ಸ್‌ಗಳಲ್ಲಿ ಮಾಹಿತಿ ಫಲಕಗಳನ್ನು ಹಾಕಲಾಗಿದೆ. ನಾಲ್ಕು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದ್ದು, ಎರಡು ವಿಭಾಗದಲ್ಲಿ ತಲಾ ಎರಡು ಗಸ್ತು ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಅದಲ್ಲದೇ ನಿಗಾವಹಿಸಲು ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದ್ದು, ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಟ್ರಾಕ್ಟರ್ ಸೇರಿ ಮೋಟಾರು ರಹಿತ ವಾಹನಗಳ ಸಂಚಾರವನ್ನು ನಿಷೇಧಿಸುವ ಮೂಲಕ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ, ರಸ್ತೆ ಸುರಕ್ಷತಾ ಸಮಿತಿಯನ್ನು ನೇಮಿಸಲಾಗಿದೆ.
ಇನ್ನು ಕರ್ನಾಟಕ ಪೊಲೀಸ್ ಇಲಾಖೆ ಕೂಡ ಇಂಟರ್ ಸೆಪ್ಟರ್‌ಗಳ ಮೂಲಕ ವೇಗದ ಮಿತಿಯನ್ನು ಜಾರಿಗೆ ತರಲು ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ. ತುರ್ತು ಸೇವೆಗಾಗಿ ಬೇಸಿಕ್ ಲೈಫ್ ಸಪೋರ್ಚ್ ಸಿಸ್ಟಮ್ ಹೊಂದಿರುವ ನಾಲ್ಕು ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಪ್ಯಾರಾಮೆಡಿಕಲ್ ಸಿಬ್ಬಂದಿ ಕೂಡ ಹೆದ್ದಾರಿಯಲ್ಲಿ ಇದ್ದಾರೆ. ಎಲ್ಲ ಟೋಲ್ ಪ್ಲಾಜಾಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಇಡಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿಷೇಧದ ಮೊದಲ ದಿನವೇ 137 ಕೇಸ್, 68,500 ರು.ದಂಡ ವಸೂಲಿ
ಇಷ್ಟೇ ಅಲ್ಲದೆ, ರಸ್ತೆ ಸುರಕ್ಷತೆ ಸಮಿತಿ ವರದಿ ಕೈ ಸೇರಿದ ತರುವಾಯ ಐದು ಸ್ಪೀಡ್ ರೆಡಾರ್ ಗನ್‌ಗಳು ಹಾಗೂ 10 ಹೆಚ್ಚುವರಿ ಗಸ್ತು ವಾಹನಗಳನ್ನು ನಿಯೋಜಿಸಿ ಅಪಘಾತಗಳಿಗೆ ಕಡಿವಾಣ ಹಾಕಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಮತ್ತಷ್ಟುಇಳಿಮುಖವಾದಲ್ಲಿ ವೇಗ ಮಿತಿಯನ್ನು ಪ್ರತಿ ಗಂಟೆಗೆ 100ರಿಂದ 120ಕ್ಕೆ ಹೆಚ್ಚಳ ಮಾಡಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಅಪಘಾತ ಇಳಿಮುಖ: ಎಡಿಜಿಪಿ ಪ್ರಶಂಸೆ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಲೋಕ್ ಕುಮಾರ್ ರವರು, ಪೊಲೀಸರ ಪರಿಶ್ರಮದಿಂದಾಗಿ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತದಲ್ಲಿ ಸಾವಿರ ಸಂಖ್ಯೆ 8ಕ್ಕೆ ಇಳಿದಿದೆ. ಮೇ - 29, ಜೂನ್ - 28 ಸಾವುಗಳು ಸಂಭವಿಸಿವೆ. ಅತಿವೇಗ ಮತ್ತು ಅಜಾಗರುಕತೆ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ಅಪಘಾತ ಸಂಭವಿಸುವುದನ್ನು ತಪ್ಪಿಸಿ, ಸಾವಿನ ಸಂಖ್ಯೆಯನ್ನು ಒಂದಂಕಿಗೆ ತಂದಿರುವ ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದಿದ್ದಾರೆ.