ಹೊಸಪೇಟೆ(ಮೇ.03): ಇಲ್ಲಿ​ಯ ತಾಲೂಕು ಕಚೇರಿಯ ಹಳೇ ಕಟ್ಟಡಕ್ಕೆ ಶನಿವಾರ ಬೆಳಗ್ಗೆ 9-30ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಚೇರಿಯಲ್ಲಿದ್ದ ಕೆಲ ಹಳೇ ದಾಖಲೆಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಶನಿವಾರ ಬೆಳಗ್ಗೆ ಕಚೇರಿಯ ಕೋಣೆಯಿಂದ ದಟ್ಟವಾದ ಹೊಗೆ ಹೊರ ಬರುತ್ತಿತ್ತು. ನಂತರ ಕಚೇರಿಯಲ್ಲಿದ್ದ ಕೆಲ ಟೇಬಲ್‌, ಕುರ್ಚಿಗಳು ಸೇರಿದಂತೆ ಇತರ ಪೀಠೋಪಕರಣಗಳಿಗೆ ಬೆಂಕಿ ವ್ಯಾಪಿಸಿತು. ನಂತರ ಕಚೇರಿಯ ​ಚಾವಣಿಯ ಕಟ್ಟಿಗೆಯ ತೀರುಗಳಿಗೆ ಬೆಂಕಿ ತಗಲಿ ಎಲ್ಲ ಕೋಣೆಗಳಿಗೆ ಚಾಚಿಕೊಂಡಿತು. 2-3 ಕಂಪ್ಯೂಟರ್‌ಗಳು, ಸ್ಟೋರ್‌ ರೂಂನಲ್ಲಿಟ್ಟಿದ್ದ ಕೆಲ ಮಹತ್ವದ ದಾಖಲೆಗಳು ಬೆಂಕಿಗೆ ಆಹುತಿಯಾಗಿ ಸುಟ್ಟು ಹೋಗಿವೆ.

ರಿಫಿಲಿಂಗ್‌ ಮಾಡೋ ವೇಳೆ ಸಿಲಿಂಡರ್‌ ಸ್ಫೋಟ: ಪುರಸಭೆ ಸದಸ್ಯೆ ಸೇರಿ ಇಬ್ಬರಿಗೆ ಗಾಯ

ಘಟನಾ ಸ್ಥಳಕ್ಕೆ ಹೆಚ್ಚಿನ ಸಿಬ್ಬಂದಿಯು ಬಂದು ಕಚೇರಿಯ ಹಿಂಬಾಗಿಲಿನ ಮೂಲಕ ಕೆಲ ಮಹತ್ವದ ದಾಖಲೆಗಳ ಕಡತಗಳನ್ನು ಹೊರ ತೆಗೆದು ಸಾಗಿಸಿದರು. ಆದರೆ ಕೋಣೆಯಲ್ಲಿ ದಟ್ಟಹೊಗೆ ಹರಡಿಕೊಂಡಿದ್ದರಿಂದ ಸಿಬ್ಬಂದಿ ಸಾಹ​ಸ ಮಾಡಿ ಕೆಲ ಮಹತ್ವದ ದಾಖಲೆಗಳನ್ನು ಹೊರ ತೆಗೆದಿದ್ದಾ​ರೆ. ಕೆಲ ದಾಖಲೆಗಳು ಬೆಂಕಿಗೆ ಸುಟ್ಟು ಕರಕಲಾಗಿವೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ 15 ಸಿಬ್ಬಂದಿ ಬಂದು, ಪೊಲೀಸರ ನೆರವಿನೊಂದಿಗೆ ಸತತ ಎರಡು ತಾಸುಗಳ ಕಾಲ ಮೂರು ಅಗ್ನಿಶಾಮಕ ದಳ ವಾಹನಗಳ ಮೂಲಕ ಬೆಂಕಿ ನಂದಿಸಿದರು. ಘಟನಾ ಸ್ಥಳದಲ್ಲಿ ಸಹಾಯಕ ಆಯುಕ್ತ ಶೇಖ್‌ ತನ್ವೀರ್‌ ಆಸೀಫ್‌, ತಹಸೀಲ್ದಾರ ಎಚ್‌. ವಿಶ್ವನಾಥ, ಡಿವೈಎಸ್‌ಪಿ ವಿ. ರಘುಕುಮಾರ್‌, ಅಗ್ನಿಶಾಮಕದ ದಳದ ಅಧಿಕಾರಿ ಕೃಷ್ಣ ಸಿಂಗ್‌ ಸೇರಿದಂತೆ ಇತರ ಸ್ಥಳೀಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ಬೆಂಕಿ ನಂದಿಸುವಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.