ಸಂತೋಷ್ ಸೂಸೈಡ್ ಕೇಸ್: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನ
* ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ
* ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ
* ಸಚಿವ ಸಂಪುಟದಿಂದ ಈಶ್ವರಪ್ಪನವರನ್ನು ಹೊರಹಾಕಬೇಕು
ಬೆಂಗಳೂರು(ಏ.14): ಗುತ್ತಿಗೆದಾರ ಸಂತೋಷ್ ಪಾಟೀಲ್(Santosh Patil) ಆತ್ಮಹತ್ಯೆ(Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಬಂಧನಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಮುಂದಾದ ಆಮ್ ಆದ್ಮಿ(Aam Aadmi) ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಮಾರ್ಗಮಧ್ಯದಲ್ಲಿಯೇ ಬಂಧಿಸಿದರು.
ಬುಧವಾರ ನಗರದ ಶಿವಾನಂದ ವೃತ್ತದಿಂದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದವರೆಗೆ ಮೆರವಣಿಗೆ ನಡೆಸಿ ನಿವಾಸಕ್ಕೆ ಮುತ್ತಿಗೆ ಹಾಕಲು ಎಎಪಿ ಮುಖಂಡರು ಮತ್ತು ಕಾರ್ಯಕರ್ತರು ಮುಂದಾದರು. ಈ ವೇಳೆ ರಾಜ್ಯ ಸರ್ಕಾರ ಮತ್ತು ಸಚಿವ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ಚರಪ್ಪ ರಾಜೀನಾಮೆಗೆ ಪಕ್ಷದೊಳಗೆ ಒತ್ತಾಯ
ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದ ಸಚಿವ ಈಶ್ವರಪ್ಪ ಅವರನ್ನು ಬಂಧಿಸಬೇಕು ಮತ್ತು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಮುತ್ತಿಗೆ ಹಾಕಲು ಮುಂದಾದ ಎಎಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ದಾರಿ ಮಧ್ಯದಲ್ಲಿಯೇ ತಡೆದು ಬಂಧಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು. ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ(Mohan Dasari), ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರಿದ್ದ ಸಂತೋಷ್ ಪಾಟೀಲ್‌ಗೆ ನ್ಯಾಯ ಸಿಗಬೇಕೆಂದರೆ ತಕ್ಷಣವೇ ಸಚಿವ ಈಶ್ವರಪ್ಪ ಬಂಧನವಾಗಬೇಕು. ರಾಜ್ಯ ಸಚಿವ ಸಂಪುಟದಲ್ಲಿ ಈಶ್ವರಪ್ಪ ಪ್ರಭಾವಿ ಸಚಿವರಾಗಿದ್ದು, ಈ ಕೂಡಲೇ ಅವರನ್ನು ಬಂಧಿಸದಿದ್ದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಹೆಚ್ಚಿದೆ ಎಂದರು.
Belagavi: ಸಂತೋಷ್ ಕುಟುಂಬಕ್ಕೆ ಕೆಪಿಸಿಸಿಯಿಂದ 11 ಲಕ್ಷ ಪರಿಹಾರ: ಡಿಕೆಶಿ
ಈಶ್ವರಪ್ಪನವರೇ ಕಾರಣವೆಂದು ಡೆತ್‌ನೋಟ್‌ನಲ್ಲಿ(Deathnote) ಸ್ಪಷ್ಟವಾಗಿ ಉಲ್ಲೇಖಿಸಿದರೂ ಅವರ ಬಂಧನವಾಗಿಲ್ಲ. ಸಚಿವರನ್ನು ಬಂಧಿಸದಿದ್ದರೆ ಜನಸಾಮಾನ್ಯರಿಗೆ ಒಂದು ಕಾನೂನು, ಸಚಿವರಿಗೆ ಮತ್ತೊಂದು ಕಾನೂನು ಇದೆ ಎಂಬ ತಪ್ಪು ಸಂದೇಶ ಸಮಾಜಕ್ಕೆ ಹೋಗಲಿದೆ. ಸಚಿವ ಸಂಪುಟದಿಂದ ಈಶ್ವರಪ್ಪನವರನ್ನು ಹೊರಹಾಕಬೇಕು. ಅವರನ್ನು ಬಂಧಿಸದಿದ್ದರೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಈಶ್ವರಪ್ಪನವರನ್ನು ಬಂಧಿಸುವ ಬದಲು ಎಎಪಿ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸುವ ಪೊಲೀಸರ ನಡೆ ಖಂಡನೀಯ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ(Protest) ಎಎಪಿ ನಾಯಕರಾದ ಜಗದಿಶ್ ವಿ ಸದಂ, ಚನ್ನಪ್ಪಗೌಡ ನೆಲ್ಲೂರು, ಕುಶಾಲಸ್ವಾಮಿ, ಉಷಾ ಮೋಹನ್ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.