Belagavi: ಸಂತೋಷ್ ಕುಟುಂಬಕ್ಕೆ ಕೆಪಿಸಿಸಿಯಿಂದ 11 ಲಕ್ಷ ಪರಿಹಾರ: ಡಿಕೆಶಿ
* ಸಂತೋಷ್ ಮನೆಗೆ ಸುರ್ಜೇವಾಲಾ, ಡಿಕೆಶಿ, ಸಿದ್ದು ಭೇಟಿ, ಕುಟುಂಬಕ್ಕೆ ಸಾಂತ್ವನ
* 1 ಕೋಟಿ ಪರಿಹಾರ, ಸಂತೋಷ ಪತ್ನಿಗೆ ಸರ್ಕಾರಿ ನೌಕರಿ ನೀಡಲು ಆಗ್ರಹ
* ಈಶ್ವರಪ್ಪ ಕರಪ್ಟ್ ಮಿನಿಸ್ಟರ್
ಬೆಳಗಾವಿ(ಏ.14): ಆತ್ಮಹತ್ಯೆಗೆ(Suicide) ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ(Santosh Patil) ಅವರ ಹಿಂಡಲಗಾದ ವಿಜಯನಗರದಲ್ಲಿರುವ ಮನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸೇರಿ ಕಾಂಗ್ರೆಸ್ ನಾಯಕರ ದಂಡು ಬುಧವಾರ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿತು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar), ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಿಪ ಸದಸ್ಯ ಸಲೀಂ ಅಹ್ಮದ್, ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ ಸೇರಿ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಈ ವೇಳೆ ಸಂತೋಷ್ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿದ ಕಾಂಗ್ರೆಸ್(Congress) ಮುಖಂಡರು, ತಾಯಿ ಮತ್ತು ಪತ್ನಿಗೆ ಸಾಂತ್ವನ ಹೇಳಿದರು.
40 ಗಂಟೆ ಹೋಟೆಲ್ ಕೋಣೆಯಲ್ಲೇ ಇದ್ದ ಸಂತೋಷ್ ಶವ, ಪೋಸ್ಟ್‌ಮಾರ್ಟಂಗೆ ಮನವೊಲಿಸಲು ಹರಸಾಹಸ
ಕಾಂಗ್ರೆಸ್ ಮುಖಂಡರನ್ನು ಕಾಣುತ್ತಿದ್ದಂತೆ ಸಂತೋಷ್ ಅವರ ತಾಯಿ ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಅವರ ಮುಂದೆ ತಮ್ಮ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿದರು. ಇದೆ ವೇಳೆ ಸಂತೋಷ್ ಸಂಬಂಧಿಕರು ಕೂಡಲೇ ಆರೋಪಿಗಳನ್ನು(Accused) ಜೈಲಿಗೆ ಹಾಕಬೇಕು ಎಂದು ಅಳಲು ತೋಡಿಕೊಂಡರು. ಆಗ ಸಿದ್ದರಾಮಯ್ಯ, ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಿಎಂ ಶಾಮೀಲು:
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ(KS Eshwarappa) ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸರ್ಕಾರ ನಿಲ್ಲುತ್ತಿದೆ. ಸಿಎಂ ಬೊಮ್ಮಾಯಿ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಸಚಿವರನ್ನು ಜೈಲಿಗೆ ಕಳಿಸುವ ಸಮಯ ಬಂದಿದೆ. ನಾವು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ. ಸಂತೋಷ್ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದರು.
ರಾಜಕೀಯ ಮಾಡಲು ನಾವು ಬಂದಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸಾವಿನ ಮನೆಯಲ್ಲಿ ರಾಜಕೀಯ ಮಾಡಲಿಕ್ಕೆ ನಾವು ಬಂದಿಲ್ಲ. ಸಂತೋಷ್ ಬುದ್ಧಿವಂತ. ತಮಗಾದ ಅನ್ಯಾಯದ ಕುರಿತು ಪ್ರಧಾನಮಂತ್ರಿ ಸೇರಿದಂತೆ ಬಿಜೆಪಿ ನಾಯಕರಿಗೆ ಪತ್ರ ಬರೆದು ನ್ಯಾಯ ಕೇಳಿದ್ದಾರೆ. ನಾವು ಅವರಿಗೆ ಒಂದು ಸೆಲ್ಯೂಟ್ ಹೊಡೆಯುತ್ತೇವೆ ಎಂದರು.
'ಕಾಂಗ್ರೆಸಿಗರ ಟೊಳ್ಳು ಬೆದರಿಕೆಗೆ ಹೆದರಲ್ಲ: ತನಿಖೆ ಆಗದೆ ಸಚಿವರ ರಾಜೀನಾಮೆ ಸರಿಯಲ್ಲ'
ಕೆಪಿಸಿಸಿಯಿಂದ .11ಲಕ್ಷ ಪರಿಹಾರ ಭರವಸೆ: ಸರ್ಕಾರ ಕೂಡಲೇ ಸಂತೋಷ್ ಕುಟುಂಬಕ್ಕೆ .1 ಕೋಟಿ ಪರಿಹಾರ ನೀಡಬೇಕು. ಅಲ್ಲದೆ, ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು. ಅವರಿಗೆ ಸರ್ಕಾರಿ ನೌಕರಿ ಸಿಗುವವರೆಗೆ ಕಾಂಗ್ರೆಸ್ ಪಕ್ಷ ನೌಕರಿ ಕೊಡಲಿದೆ. ಕೆಪಿಸಿಸಿ ವತಿಯಿಂದ ಸಂತೋಷ ಕುಟುಂಬಕ್ಕೆ .11 ಲಕ್ಷ ಪರಿಹಾರ ಕೊಡುತ್ತೇವೆ ಎಂದರು.
ಈಶ್ವರಪ್ಪ ಕರಪ್ಟ್ ಮಿನಿಸ್ಟರ್: ಸಿದ್ದು
ಸಚಿವ ಕೆ.ಎಸ್. ಈಶ್ವರಪ್ಪ ಲಂಚ ಡಿಮ್ಯಾಂಡ್ ಮಾಡಿದ್ದರಿಂದ ಗುತ್ತಿಗೆದಾರ ಸಂತೋಷ ಸಾವಿಗೀಡಾಗಿದ್ದಾನೆ. ಇದು ಅಮಾನವೀಯ. ಈಶ್ವರಪ್ಪ ಜವಾಬ್ದಾರಿಯುತ ಸಚಿವ ಅಲ್ಲ, ಕರಪ್ಟ್ ಮಿನಿಸ್ಟರ್ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಸಂತೋಷ್ ಆತ್ಮಹತ್ಯೆಗೆ ಈಶ್ವರಪ್ಪನೇ ಕಾರಣ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ. ಈ ಪ್ರಕರಣದ ಕುರಿತು ಸರಿಯಾಗಿ ತನಿಖೆ ಮಾಡಬೇಕು. ನಾವು ಇಲ್ಲಿ ರಾಜಕೀಯ ಮಾಡಲಿಕ್ಕೆ ಬಂದಿಲ್ಲ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಅಮಾನವೀಯ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ಪಕ್ಷದಿಂದ ಸಂತೋಷ ಕುಟುಂಬಕ್ಕೆ ಸಹಾಯ ಮಾಡುತ್ತೇವೆ ಎಂದರು.