ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯಾದಗಿರಿ ಮೂಲದ ಯುವಕನೊಬ್ಬ ಧಾರವಾಡದಲ್ಲಿ ಹೃದಯಾಘಾತದಿಂದ ಮೃತಪಟ್ಟರೆ, ಮತ್ತೊಂದು ಘಟನೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕನಕಗಿರಿ ತಾಲೂಕಿನ ಯುವತಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿದ್ದಾಳೆ. ಈ ಎರಡೂ ದುರಂತ ಘಟನೆಗಳು ಕುಟುಂಬದಲ್ಲಿ ಶೋಕವನ್ನುಂಟು ಮಾಡಿವೆ.
ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಧಾರವಾಡಕ್ಕೆ ಬಂದಿದ್ದ, ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ಮೂಲದ 25 ವರ್ಷದ ಮಾರುತಿ ಕಲಬುರಗಿ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಾರುತಿ ಕಳೆದ ಮೂರು ವರ್ಷಗಳಿಂದ ಧಾರವಾಡದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಪಡೆಯುತ್ತಿದ್ದನು. ಉತ್ತಮ ಭವಿಷ್ಯದ ಕನಸು ಹೊತ್ತು ಸ್ವಗ್ರಾಮ ತೊರೆದು ಧಾರವಾಡಕ್ಕೆ ಬಂದಿದ್ದ ಆತ, ನಗರದಲ್ಲಿ ಬಾಡಿಗೆ ಕೊಠಡಿ ಮಾಡಿಕೊಂಡು ವಾಸಿಸುತ್ತಿದ್ದನು. ಕೊಠಡಿಯಲ್ಲಿದ್ದ ವೇಳೆ ಬುಧವಾರ ನಸುಕಿನಲ್ಲಿ ಮಾರುತಿಗೆ ಎದೆನೋವು ಕಾಣಿಸಿಕೊಂಡಿದೆ. ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ತೀವ್ರ ಹೃದಯಾಘಾತದಿಂದ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಮಾರುತಿ ಕುಟುಂಬದವರು ಧಾರವಾಡಕ್ಕೆ ಆಗಮಿಸಿದ್ದಾರೆ. ಮಗನ ಅಕಾಲಿಕ ನಿಧನದಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟ್ಟೆ ನೋವು ತಾಳದೆ ಅವಿವಾಹಿತೆ ನೇಣಿಗೆ ಶರಣು
ಕನಕಗಿರಿ: ಹೊಟ್ಟೆ ನೋವು ತಾಳಲಾರದೆ ಅವಿವಾಹಿತೆ ಮನನೊಂದು ನೇಣಿಗೆ ಶರಣಾದ ಘಟನೆ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಗೌರಮ್ಮ ಜೆಂಜೆರಿ(19) ನೇಣಿಗೆ ಶರಣಾದ ಯುವತಿ. 20 ದಿನಗಳ ಹಿಂದೆ ಮುರ್ಲಾನಹಳ್ಳಿ ಗ್ರಾಮದ ಯಮನೂರಸ್ವಾಮಿ ಜೊತೆ ಗೌರಮ್ಮಳ ವಿವಾಹ ನಿಶ್ಚಯ ಮಾಡಲಾಗಿತ್ತು.
ಗೌರಮ್ಮಳಿಗೆ ಸುಮಾರು 2-3 ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಕಡಿಮೆ ಆಗಿಲ್ಲ. ಇದರಿಂದ ಮಾನಸಿಕ ನೊಂದಿದ್ದ ಗೌರಮ್ಮ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಹುಲಿಗೆಮ್ಮ ಜಿಂಜೆರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


