ಬಡ ಮಕ್ಕಳ ಆಶಾಕಿರಣವಾಗಿರುವ ಶಿಕ್ಷಕ ಶಂಕರ್... ಊರೂರು ಅಲೆದು ಮಕ್ಕಳಿಗೆ ಪಾಠ...
ಇಲ್ಲೊಬ್ಬರು ಶಿಕ್ಷಕರು ಮಕ್ಕಳಿಗಾಗಿಯೇ ಊರೂರು ಅಲೆದು ಪಾಠ ಮಾಡಿ ಅವರಲ್ಲಿ ಮತ್ತಷ್ಟು ಕಲಿಕಾಸಕ್ತಿ ಹೆಚ್ಚಿಸುವಂತೆ ಮಾಡ್ತಿದ್ದಾರೆ. ಈ ಮೂಲಕ ಆ ಬಡ ಶಿಕ್ಷಕ ಎಲೆಮರೆಯ ಕಾಯಂತೆ ಸದ್ದಿಲ್ಲದೆ ಅಕ್ಷರ ಯಾತ್ರೆ ಮಾಡ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ವರದಿ:ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ: ಸಾಮಾನ್ಯವಾಗಿ ಇಂದಿನ ದಿನಮಾನದಲ್ಲಿ ಶಿಕ್ಷಣ ಅನ್ನೋದು ಸಂಪೂರ್ಣ ವ್ಯಾಪಾರವಾಗಿ ಪರಿಣಮಿಸಿದ್ದು, ಶಾಲಾ ಕಾಲೇಜ್ ಇರಲಿ, ಕೋಚಿಂಗ್ ಇರಲಿ, ಮನೆಪಾಠ ಇರಲಿ, ಯಾವುದಕ್ಕೂ ಹಣ ಇಲ್ಲದೆ ನಡೆಯೋದಿಲ್ಲ. ಫೀಸ್ ಕಟ್ಟಿಯೇ ಮಕ್ಕಳು ಶಿಕ್ಷಣ ಪಡೆಯಬೇಕು ಆದರೆ ಇಲ್ಲೊಬ್ಬರು ಶಿಕ್ಷಕರು ಬಡಮಕ್ಕಳು ತಮ್ಮ ಬಳಿ ಬರೋದು ಇರಲಿ, ಮಕ್ಕಳಿಗಾಗಿಯೇ ಊರೂರು ಅಲೆದು ಪಾಠ ಮಾಡಿ ಅವರಲ್ಲಿ ಮತ್ತಷ್ಟು ಕಲಿಕಾಸಕ್ತಿ ಹೆಚ್ಚಿಸುವಂತೆ ಮಾಡ್ತಿದ್ದಾರೆ. ಈ ಮೂಲಕ ಆ ಬಡ ಶಿಕ್ಷಕ ಎಲೆಮರೆಯ ಕಾಯಂತೆ ಸದ್ದಿಲ್ಲದೆ ಅಕ್ಷರ ಯಾತ್ರೆ ಮಾಡ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಹೌದು, ಕಳೆದ ಎರಡ್ಮೂರು ವರ್ಷಗಳಿಂದ ನಿರಂತರವಾಗಿ ಅಕ್ಷರ ಯಾತ್ರೆ ಮಾಡುತ್ತಿರುವ ಈ ಶಿಕ್ಷಕನ ಹೆಸರು ಶಂಕರ ತೆಗ್ಗಿ (Shankar Teggi). ಮೂಲತಃ ಬಾಗಲಕೋಟೆ (Bagalkote) ಜಿಲ್ಲೆಯ ಬಾದಾಮಿ (Badami) ತಾಲೂಕಿ ಕುಳಗೇರಿ (Kulageri) ಗ್ರಾಮದ ನಿವಾಸಿ. ಮೊದಲು ಶಿಕ್ಷಣ ಕಲಿಯಲಾಗಲಿಲ್ಲ, ಬರುಬರುತ್ತ ಕಲಿಕೆ ಬಗ್ಗೆ ಅಸಕ್ತಿ ಹುಟ್ಟಿ ನಂತರ ಎಸ್.ಎಸ್.ಎಲ್.ಸಿ ಪಾಸಾಗಿ ಪಿಯುಸಿ ನಂತರ ಡಿಎಡ್(DEd), ಬಿಎಡ್ ಪದವಿ ಪಡೆದು ಶಿಕ್ಷಕನಾಗಿ ಬಳಿಕ ಎರಡು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನ(PG) ಪಡೆದು ಈಗ ಉಪನ್ಯಾಸಕರಾಗಿದ್ದಾರೆ. ಇಷ್ಟು ಕಲಿತರೂ ನನಗೆ ಯಾವುದೇ ಒಂದು ಸರ್ಕಾರಿ ಕೆಲಸ (Govt job)ಸಿಗಲಿಲ್ಲವಲ್ಲ ಎಂಬ ಕೊರಗು ಇವರನ್ನ ಕಾಡುತ್ತಿದೆ. ಈ ಮಧ್ಯೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಇವರು ಖಾಸಗಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಬಡ ಕುಟುಂಬದ ಮಕ್ಕಳಿಗಾಗಿ ಏನಾದ್ರೂ ಮಾಡಬೇಕೆಂಬ ಹಂಬಲದೊಂದಿಗೆ ಹೊಸ ಯೋಜನೆಯೊಂದನ್ನು ಶುರು ಮಾಡಿದರು.
ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ, 8 ಜನರ ಜೀವ ಉಳಿಸಿದ ಮಹಾತಾಯಿ
ಅಕ್ಷರ ಯಾತ್ರೆ ಆರಂಭಿಸಿದ ಶಿಕ್ಷಕ ಶಂಕರ್
ಗ್ರಾಮೀಣ ಭಾಗದ ಬಡ ಕುಟುಂಬದ ಮಕ್ಕಳಿಗಾಗಿ ಶಿಕ್ಷಕ ಶಂಕರ ತೆಗ್ಗಿ ಅಕ್ಷರ ಯಾತ್ರೆ ಎಂಬ ಶಿರ್ಷಿಕೆಯಡಿ ಉಚಿತ ಪಾಠ ಮಾಡಬೇಕೆನ್ನುವ ಉದ್ದೇಶವೊಂದನ್ನು ಹೊಂದಿ, ಬೆಳಗ್ಗೆ ಹಾಗೂ ಸಾಯಂಕಾಲ ಗ್ರಾಮೀಣ ಭಾಗದ (Rural Area) ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ತಮ್ಮ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ಅಲ್ಲಿನ ಪ್ರಮುಖರನ್ನ ಭೇಟಿ ಮಾಡಿ ಮನೆ-ಮನೆಗಳಿಗೆ ತೆರಳಿ ಮಕ್ಕಳನ್ನ ಒಗ್ಗೂಡಿಸಿ ಶಾಲೆ ಅಥವಾ ದೇವಸ್ಥಾನದ ಆವರಣದಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ಮಕ್ಕಳು (Student) ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಉಚಿತ ಶಿಕ್ಷಣ (Free education)ಸೌಲಭ್ಯ ಪಡೆಯುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಇದೆ. ಈ ಮಧ್ಯೆ ಹೆಚ್ಚಿನ ಹಣ ನೀಡಿ ಟ್ಯೂಶನ್ ಹೋಗಲು ವಿದ್ಯಾರ್ಥಿಗಳು ಪಟ್ಟಣ ಪ್ರದೇಶಕ್ಕೆ ಬರಬೇಕಾಗಿತ್ತು. ಆದರೆ ಶಂಕರ್ ಅವರ ಈ ಯೋಚನೆಯಿಂದ ಮಕ್ಕಳು ತಾವಿರುವಲ್ಲಿಯೇ ಉತ್ತಮವಾಗಿ ಟ್ಯೂಷನ್ ಪಡೆಯುತ್ತಿದ್ದಾರೆ ತಾನು ಕಲಿತ ವಿದ್ಯೆ ವ್ಯರ್ಥವಾಗಬಾರದು ಎಂಬ ಉದ್ಧೇಶದಿಂದ ಮೂರ್ನಾಲ್ಕು ವರ್ಷಗಳಿಂದ ಅಕ್ಷರ ಯಾತ್ರೆ ಎಂಬ ಹೆಸರಲ್ಲಿ ನಿತ್ಯ ನಾಲ್ಕೈದು ಗ್ರಾಮಗಳಿಗೆ ತೆರಳಿ ಅಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದಾರೆ.
ಸಮಾಜಕ್ಕೆ ಏನಾದ್ರೂ ಮಾಡಬೇಕೆಂಬ ಹಂಬಲ...
ನಾಡಿಗಾಗಿ ಸಮಾಜಕ್ಕಾಗಿ ಸಾಕಷ್ಟು ಮಹನೀಯರು ದುಡಿದಿದ್ದಾರೆ, ಕೆಲವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಇಂಥ ಮಹನಿಯರ ಮುಂದೆ ಈ ತನ್ನ ಕಾರ್ಯ ದೊಡ್ಡದಲ್ಲ. ಸಮಾಜಕ್ಕಾಗಿ ತಾನು ಏನನ್ನಾದರೂ ಮಾಡಬೇಕೆಂಬ ಛಲವಿತ್ತು. ಹೀಗಾಗಿ ತನಗೆ ಯಾವುದೇ ಸರ್ಕಾರಿ ಕೆಲಸ ಸಿಗದಿದ್ದರೂ ಪರವಾಗಿಲ್ಲ ತಾನು ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಸಂಸ್ಕಾರ ಹೇಳಿಕೊಡಬೇಕೆಂಬ ಉದ್ದೇಶದಿಂದ ಈ ಅಕ್ಷರ ಯಾತ್ರೆ ಆರಂಭಿಸಿದ್ದು, ಇದಕ್ಕೆ ಗ್ರಾಮೀಣ ಭಾಗದಲ್ಲಿ ಹೋದ ಕಡೆಗೆಲ್ಲಾ ಶಾಲಾ ಮಕ್ಕಳು-ಪಾಲಕರು ಸಹ ಆಸಕ್ತಿ ತೋರುತ್ತಿದ್ದಾರೆ. ಇದೆಲ್ಲಾ ತಮಗೆ ತುಂಬಾ ಖುಷಿ ತಂದಿದೆ ಎನ್ನುತ್ತಾರೆ ಉಪನ್ಯಾಸಕ ಶಂಕರ ತೆಗ್ಗಿ.
ಪರೀಕ್ಷೆ ವೇಳೆ ಬಲವಂತವಾಗಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ: ಮನನೊಂದು ಬೆಂಕಿ ಹಚ್ಚಿಕೊಂಡ ಬಾಲಕಿ
ಮನೆ ಬಾಗಿಲಿಗೆ ಬಂದು ಶಿಕ್ಷಣ, ವಿದ್ಯಾರ್ಥಿಗಳ ಹರ್ಷ
ಇನ್ನು ಶಿಕ್ಷಕ ಶಂಕರ್ ಅವರ ಉಚಿತ ಶಿಕ್ಷಣಕ್ಕೆ ಸುತ್ತಮುತ್ತಲಿನ ಗ್ರಾಮದ ಮಕ್ಕಳೆಲ್ಲಾ ಸಂತಸಗೊಂಡಿದ್ದು, ಅದರಲ್ಲೂ ಹೆಣ್ಣು ಮಕ್ಕಳಂತೂ ತಮ್ಮ ಗ್ರಾಮಕ್ಕೆ ಬಂದು ಶಿಕ್ಷಕರೊಬ್ಬರು ಪಾಠ ಮಾಡಿ ಹೋಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇತ್ತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಶಂಕರ ತೆಗ್ಗಿ ಶಿಕ್ಷಕನ ಕಾರ್ಯ ಶ್ಲಾಘನೀಯ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರ ಶಿಕ್ಷಣದ ಸೇವೆಯನ್ನ ಗ್ರಾಮೀಣ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂಥ ವ್ಯಕ್ತಿಗಳನ್ನ ಗುರುತಿಸಿ ಪ್ರೋತ್ಸಾಹಿಸಬೇಕು ಇದರಿಂದ ಕಟ್ಟ ಕಡೆಯ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ದೊರೆಯುತ್ತದೆ ಅಂತಾರೆ ಗ್ರಾಮಸ್ಥ ಬೀರಪ್ಪ.
ಒಟ್ಟಿನಲ್ಲಿ ತಮ್ಮ ಅತಂತ್ರ ಬದುಕಿನ ಮಧ್ಯೆಯೂ ಶಿಕ್ಷಕರೊಬ್ಬರು ಊರೂರಿಗೆ ತೆರಳಿ ಮಕ್ಕಳಿಗೆ ಉಚಿತ ಪಾಠ ಮಾಡುವ ಮೂಲಕ ನಿಸ್ವಾರ್ಥ ಸೇವೆಗೆ ಮುಂದಾಗಿದ್ದು, ಮಾದರಿ ಶಿಕ್ಷಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.