ಆಳುದ್ದ ಹೂಳು ತುಂಬಿ ಗಬ್ಬುನಾರುತ್ತಿರುವ ಕಾಲುವೆ
ಕಾಲುವೆಗೆ ನೀರು ಹರಿಸಿದರೂ ಹೂಳು ತೆಗೆಯದಿರುವುದರಿಂದ ಕಾಲುವೆಯಲ್ಲಿ ಆಳುದ್ದ ಹೂಳು ತುಂಬಿ ಗಬ್ಬುನಾರುತ್ತಿದ್ದು, ಸಂಬಂಧಪಟ್ಟಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ತಾಲೂಕಿನ ಹಂಪಾಪುರ ಗ್ರಾಮಸ್ಥರು ಪ್ರತಿಭಟಿಸಿ, ನೀರಾವರಿ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಕೆ.ಆರ್. ನಗರ : ಕಾಲುವೆಗೆ ನೀರು ಹರಿಸಿದರೂ ಹೂಳು ತೆಗೆಯದಿರುವುದರಿಂದ ಕಾಲುವೆಯಲ್ಲಿ ಆಳುದ್ದ ಹೂಳು ತುಂಬಿ ಗಬ್ಬುನಾರುತ್ತಿದ್ದು, ಸಂಬಂಧಪಟ್ಟಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ತಾಲೂಕಿನ ಹಂಪಾಪುರ ಗ್ರಾಮಸ್ಥರು ಪ್ರತಿಭಟಿಸಿ, ನೀರಾವರಿ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಗುರುವಾರ ಬೆಳಗ್ಗೆ ನಾಲೆಯ ಬಳಿ ಮಹಿಳೆಯರು ಹಾಗೂ ಗ್ರಾಮಸ್ಥರು ಚಾಮರಾಜ ಎಡದಂಡೆಗೆ ಸೇರಿದ ಹಂಪಾಪುರ ನಾಲೆಯ ದುಸ್ಥಿತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಪ್ರತಿ ವರ್ಷ ನಾಲೆಗೆ ನೀರು ಬಿಟ್ಟನಂತರ ಒಂದಷ್ಟುದೂರ ಹಸಿರು ತೆಗೆದು ನಂತರ ಹಾಗೇ ಬಿಡುತ್ತಾರೆ, ಆದ್ದರಿಂದ ನಾಲೆಯಲ್ಲಿ ಪ್ರತಿವರ್ಷ ಎಷ್ಟೆಹೂಳು ತೆಗೆದರೂ ಮತ್ತೆ ಹೂಳು ತುಂಬಿಕೊಳ್ಳುತ್ತದೆ ಎಂದು ಆರೋಪಿಸಿದರು.
ನಾಲೆಗೆ ನೀರು ಬಿಡಲಾಗಿದ್ದರೂ ಸಂಬಂಧಪಟ್ಟಅಧಿಕಾರಿಗಳು ಗ್ರಾಮದ ಸುತ್ತ ಹಾಗೂ ಅಗತ್ಯವಿರುವಕಡೆ ಹೂಳು ತೆಗೆಯದೇ ಬೇಡವಾದ ಜಾಗದಲ್ಲಿ ಅನಗತ್ಯ ಕಾಮಗಾರಿ ಮಾಡುವುದರಿಂದ ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಯದಾಗಿದೆ ಎಂದು ಕಿಡಿಕಾರಿದರು.
ಗ್ರಾಮದ ಪಕ್ಕದಲ್ಲೆ ಒಂದು ಕಿ.ಮೀ ನಷ್ಟು ಹಾದು ಹೋಗಿರುವ ನಾಲೆಯಲ್ಲಿ ಪ್ರತಿವರ್ಷ ನೀರುಬಿಟ್ಟನಂತರ ಹೂಳು ತೆಗೆಯುತ್ತಾರೆ, ಆದರೆ ಮತ್ತೆ ಕೆಲವೆ ದಿನಗಳಲ್ಲಿ ಹೂಳು ಹಾಗೆ ಇರುತ್ತದೆ, ಆದರೆ ಯಾವ ತಂತ್ರಜ್ಞಾನ ಉಪಯೋಗಿಸಿ ಅಧಿಕಾರಿಗಳು ಹೂಳು ತೆಗೆಯುತ್ತಾರೆ ಎಂಬ ಹಿಂದಿನ ಮರ್ಮ ತಿಳಿಯದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಂಬಂಧಪಟ್ಟಅಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ಹೂಳು ತೆಗೆಸಿ ಸ್ವಚ್ಛಗೊಳಿಸುವುದಲ್ಲದೆ ಏರಿಮೇಲೆ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಿ ರೈತರು ನೆಮ್ಮದಿಯಿಂದ ತಮ್ಮ ಅಚ್ಚುಕಟ್ಟು ಪ್ರದೇಶಗಳಿಗೆ ತೆರಳಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು. ತಪ್ಪಿದಲ್ಲಿ ಗ್ರಾಮದ ಎಲ್ಲ ಮಹಿಳೆಯರೊಂದಿಗೆ ಸಂಬಂಧಪಟ್ಟಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದ ಜಯಮ್ಮ, ಸಾವಿತ್ರಮ್ಮ, ಸಣ್ಣಪುಟ್ಟಮ್ಮ, ಯಶೋಧಮ್ಮ, ಸಾಕಮ್ಮ, ಮೀನಾಕ್ಷಮ್ಮ, ಗಂಗಮ್ಮ, ಕೀರ್ತಿ, ಯೋಗಾನಂದ, ಪ್ರಕಾಶ್, ಕರಿಯಣ್ಣ, ಸಿದೇಶ್, ಯೋಗಣ್ಣ, ಪ್ರತಾಪ್, ದಿನೇಶ್ ಇದ್ದರು.
ಇದು ಸೀಪೇಜ್ ಬೀಳು ನಾಲೆಯಾಗಿದ್ದು, ಈ ತರಹ 26 ಕಿ.ಮೀ ನಾಲೆ ಇದ್ದು, ಹೂಳು ತೆಗೆಯಲು ಸರ್ಕಾರ ಕೇವಲ 3 ಲಕ್ಷ ನೀಡಿದೆ. ಕೆಲಸ ಹೇಗೆ ಮಾಡುವುದು ಆದರೂ ನಾಳೆಯೆ ಹಂಪಾಪುರ ಗ್ರಾಮದ ಬಳಿಯ ನಾಲೆಯ ಹೂಳು ತೆಗೆಯಲು ಜೆಸಿಬಿ ಬಿಡಲಾಗುವುದು. ನಾಲಾ ಏರಿಯ ದುರಸ್ತಿಗೆ ಗ್ರ್ಯಾಂಟ್ ಬಂದಿಲ್ಲ, ಬಂದಾಗ ಮಾಡಲಾಗುವುದು.
- ಕಿರಣ್, ಕಿರಿಯ ಇಂಜಿನಿಯರ್, ಹಾರಂಗಿ ನೀರಾವರಿ ಉಪವಿಭಾಗ, ಕೆ.ಆರ್. ನಗರ.