ಸುತ್ತೂರು ಜಾತ್ರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ
ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಕಳೆದ ಆರು ದಿನಗಳ ಕಾಲ ನಡೆಯುತ್ತಿದ್ದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಭಾನುವಾರ ತೆರೆ ಬಿದ್ದಿತು.
ಮಹೇಂದ್ರ ದೇವನೂರು
ಮೈಸೂರು : ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಕಳೆದ ಆರು ದಿನಗಳ ಕಾಲ ನಡೆಯುತ್ತಿದ್ದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಭಾನುವಾರ ತೆರೆ ಬಿದ್ದಿತು.
ಸುತ್ತೂರು ಮಠದ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಆರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಮಠಗಳ ಮಠಾಧೀಶರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು, ನೆರೆಯ ರಾಜ್ಯಗಳ ಉದ್ಯಮಿಗಳು, ರಾಜಕೀಯ ಪ್ರಮುಖರು ಸೇರಿದಂತೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಹಲವು ಧಾರ್ಮಿಕ ಕಾರ್ಯಕ್ರಮ, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಫೆ.6 ರಿಂದ 11ರವರೆಗೆ ಮೇಳೈಸಿದವು.
ಫೆ. 6ರಂದು ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, 7ರಂದು ಸಾಮೂಹಿಕ ವಿವಾಹ, ಹಾಲರವಿ ಉತ್ಸವ, 8 ರಂದು ರಥೋತ್ಸವ, 9 ರಂದು ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷದೀಪೋತ್ಸವ, 10 ರಂದು ಪಾರ್ವತಮ್ಮ ಮತ್ತು ಡಾ. ಶ್ರೀ ಶಾಮನೂರು ಶಿವಶಂಕರಪ್ಪ ಅತಿಥಿಗೃಹದ ಉದ್ಘಾಟನೆ ಮತ್ತು ತೆಪ್ಪೋತ್ಸವ ಹಾಗೂ 11 ರಂದು ಅನ್ನಬ್ರಹೋತ್ಸವ ಸೇರಿದಂತೆ ನಾನಾ ಬಗೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧೆಡೆ ಹಲವು ಸ್ಪರ್ಧೆಗಳು, ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ರೈತರು ಮತ್ತು ಮಕ್ಕಳಿಗಾಗಿ ಕೃಷಿ ಮೇಳ, ಜಾನುವಾರ ಮೇಳ, ಕರಕುಶಲ ಮೇಳ, ಭಜನೆ ಸ್ಪರ್ಧೆ, ಸೋಬಾನೆ ಸ್ಪರ್ಧೆ, ಕೈಮಗ್ಗ, ಜವಳಿ, ಗ್ರಾಮೀಣ ಕರಕುಶಲ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ನೋಡುಗರ ಮನ ಸೆಳೆಯಿತು.
ಜೆಎಸ್ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳು, ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು, ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನ ಮಾಹಿತಿಯ ಕಣಜವಾಗಿತ್ತು.
ಫೆ. 7ರಂದು ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ಜಾತಿ-ಮತ ಭೇದವಿಲ್ಲದೆ ಸರ್ವಧರ್ಮಗಳ 118 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ಕಾಲುಂಗುರ, ವರನಿಗೆ ಪಂಚೆ, ವಲ್ಲಿ, ಷರ್ಟ್ ನೀಡಲಾಯಿತು.
ಹನಿ ಹನಿಗೂ ಭರಪೂರ ತೆನೆ:
ಹನಿ ಹನಿಗೂ ಭರಪೂರ ತೆನೆ ಹೆಸರಿನಲ್ಲಿ ಆಯೋಜಿಸಿದ್ದ ಕೃಷಿ ಬ್ರಹ್ಮಾಂಡದಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನಾಧಾರಿತ ಕೃಷಿಮೇಳ ಆಕರ್ಷಿಸಿತು. ಒಂದು ಎಕರೆ ಪ್ರದೇಶದಲ್ಲಿನ ಈ ಕೃಷಿ ಬ್ರಹ್ಮಾಂಡ, ನೆರಳುಮನೆಯಲ್ಲಿ ಬೆಳೆದ ಹಲವು ದೇಸಿ ಹಾಗೂ ವಿದೇಶಿ ತರಕಾರಿ, ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆ, ಮೇವಿನ ಬೆಳೆ, ವಿವಿಧ ಫಲಪುಷ್ಪ, ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಬಳಸಿ ಬೆಳೆದ ಸುಮಾರು 300 ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆಯ ಪ್ರದರ್ಶನ ರೈತರ ಬದುಕಿಗೆ ಹೊಸ ಚೈತನ್ಯ ಮೂಡಿಸಿತು.
ಕೃಷಿ ಅಭಿವೃದ್ಧಿ ಇಲಾಖೆ, ವಿಶ್ವವಿದ್ಯಾನಿಲಯಗಳು ಹಾಗೂ ಖಾಸಗಿ ಉಪಕರಣಗಳ ಮಾರಾಟಗಾರರು ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಇದರ ನಡುವೆ ದೇಸಿ ತಳಿಗಳ ಹಸು, ಕುರಿ, ಮೇಕೆ, ಕೋಳಿಗಳ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು.
ಕೃಷಿ ಜಮೀನಿನಲ್ಲಿ ನೀರಿನ ಸದ್ಬಳಕೆ ವಿಚಾರಸಂಕಿರಣ, ರೈತರು ಹಾಗೂ ಅವರ ಮಕ್ಕಳಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ, 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬೇರೆ ಬೇರೆ ವಿಭಾಗಗಳಲ್ಲಿ, ಸ್ಥಳದಲ್ಲೇ ವಿವಿಧ ವಿಷಯ ಕುರಿತು ಚಿತ್ರ ರಚಿಸುವ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿತ್ತು.
ಜಾತ್ರೆಯ ಅಂಗವಾಗಿ ಫೆ.9ರಂದು ರಾಷ್ಟ್ರಮಟ್ಟದ ನಾಡ ಕುಸ್ತಿ ಪಂದ್ಯ ನಡೆದವು. ಈ ಬಾರಿ ಎರಡು ಮಾರ್ಪಿಟ್ ಕುಸ್ತಿಗಳಿದ್ದು, ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ‘ಸುತ್ತೂರು ಕೇಸರಿ’ ಪ್ರಶಸ್ತಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ‘ಸುತ್ತೂರು ಕುಮಾರ’ ಪ್ರಶಸ್ತಿಗಳನ್ನು ನೀಡಲಾಯಿತು.
ಜೆಎಸ್ಎಸ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, 5 ದಿನಗಳ ಕಾಲ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಸಲಹೆ, ಸೂಚನೆ ಹಾಗೂ ವಿವಿಧ ರೀತಿಯ ಕ್ಯಾನ್ಸರ್‌ಗಳ ಬಗ್ಗೆ ಪರೀಕ್ಷೆಗಳನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.
ಶ್ರೀಕ್ಷೇತ್ರದಲ್ಲಿರುವ ಮೂಲ ಮಠದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಪಾರ್ವತಮ್ಮ ಮತ್ತು ಶಾಮನೂರು ಶಿವಶಂಕರಪ್ಪ ಅತಿಥಿಗೃಹವು ಕೇಂದ್ರ ಸಚಿವ ಅಮಿತ್ ಶಾ ಉದ್ಘಾಟಿಸಿದರು. ನಾಲ್ಕು ಮಹಡಿಗಳ ಈ ಅತಿಥಿಗೃಹವು ಐವತ್ತು ಕೊಠಡಿಗಳನ್ನು ಹೊಂದಿದ್ದು ಸುಮಾರು 700 ಜನರಿಗೆ ವಸತಿ ಸೌಲಭ್ಯ ಕಲ್ಪಿಸುತ್ತದೆ.
ಸಾರ್ವಜನಿಕರ ಮನೋರಂಜನೆಗಾಗಿ ಜಾತ್ರೆಯ ಎಲ್ಲ ದಿನಗಳಲ್ಲಿ ದೋಣಿ ವಿಹಾರವನ್ನು ಏರ್ಪಡಿಸಲಾಗಿತ್ತು. ಮಾತ್ರವಲ್ಲ, ಗ್ರಾಮೀಣ ಜನತೆಗಾಗಿ ದೇಸಿ ಆಟಗಳನ್ನು ಆಯೋಜಿಸಲಾಗಿದ್ದು, ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಕುಂಟೆಬಿಲ್ಲೆ, ಅಳಿಗುಳಿಮನೆ, ಆಣೆಕಲ್ಲು, ಚದುರಂಗ, ಬುಗುರಿ, ಚೌಕಬಾರ ಜೊತೆಗೆ 50 ಕೆಜಿ ಭಾರದ ಚೀಲ ಹೊತ್ತುಕೊಂಡು ಓಡುವುದು, ಕಲ್ಲುಗುಂಡು ಎತ್ತುವುದು, ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ಓಡುವುದು ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಗಳ ಗದ್ದುಗೆಯ ಆವರಣದಲ್ಲಿ ನಗರಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕ ಪ್ರದರ್ಶನ ನಡೆದರೆ, ಗ್ರಾಮಾಂತರ ಪ್ರದೇಶದ ನಾಟಕ ತಂಡಗಳಿಂದ ಇಪ್ಪತ್ತಕ್ಕೂ ಹೆಚ್ಚು ಪೌರಾಣಿಕ ನಾಟಕಗಳು ಏಕಕಾಲದಲ್ಲಿ ನಾಲ್ಕು ವೇದಿಕೆಗಳಲ್ಲಿ ಪ್ರದರ್ಶನಗೊಂಡವು.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.