- Home
- Karnataka Districts
- ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ದಾವಣಗರ ತಾಲೂಕಿನಲ್ಲಿ ರಾತ್ರಿ ವೇಳೆ ಒಂಟಿಯಾಗಿ ನಡೆದು ಹೋಗುತ್ತಿದ್ದ ಮಹಿಳೆಯ ಮೇಲೆ ರಾಟ್ ವೀಲರ್ ನಾಯಿಗಳು ಮಾರಣಾಂತಿಕ ದಾಳಿ ನಡೆಸಿವೆ. ಈ ಘಟನೆಯಲ್ಲಿ ಅನಿತಾ ಎಂಬ ಮಹಿಳೆ ಗಾಯಗೊಂಡು ಸಾವನ್ನಪ್ಪಿದ್ದಾರೆ.

ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ
ದಾವಣಗೆರೆ ತಾಲೂಕಿನಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಕಾಳಜಿ ವಹಿಸದೆ ರಸ್ತೆಯಲ್ಲಿ ಬಿಡಲಾಗಿದ್ದ ರಾಟ್‌ವೀಲರ್ (Rottweiler) ನಾಯಿಗಳ ದಾಳಿಗೆ ವಿವಾಹಿತೆಯೊಬ್ಬರು ಗಂಭೀರವಾಗಿ ಗಾಯಗೊಂಡು ದುರ್ಮರಣಕ್ಕೀಡಾಗಿದ್ದಾರೆ. ಈ ಭೀಕರ ದಾಳಿಯಿಂದ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು, ದಾಳಿ ಮಾಡಿದ ನಾಯಿಗಳನ್ನು ಹಗ್ಗದಿಂದ ಕಟ್ಟಿ ಬೀದಿಯಲ್ಲಿ ಎಳೆದುಕೊಂಡು ಹೋಗಿದ್ದಾರೆ.
ಅನಿತಾ ಮೃತ ಮಹಿಳೆ
ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಅನಿತಾ (38) ಮೃತ ದುರ್ದೈವಿ. ಘಟನೆ ದಾವಣಗೆರೆ ತಾಲೂಕಿನ ವನ್ನೂರು ಹೊರವಲಯ ಮತ್ತು ಹೊನ್ನೂರು ಗೊಲ್ಲರಹಟ್ಟಿ ಬಳಿ ಕಳೆದ ರಾತ್ರಿ 11:30 ರ ಸುಮಾರಿಗೆ ನಡೆದಿದೆ.
ರಸ್ತೆಯಲ್ಲಿ ಹೋಗ್ತಿದ್ದ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್
ಅನಿತಾ ಅವರು ಕಳೆದ ರಾತ್ರಿ ತಮ್ಮ ಮಕ್ಕಳೊಂದಿಗೆ ಜಗಳವಾಡಿ ಬೇಸರಗೊಂಡು, ತಮ್ಮ ಮಲ್ಲಶೆಟ್ಟಿಹಳ್ಳಿ ಗ್ರಾಮದ ಮನೆಯಿಂದ ನಡೆದುಕೊಂಡು ತವರು ಮನೆ ವಡ್ಡನಹಳ್ಳಿಗೆ ಹೊರಟಿದ್ದರು. ವನ್ನೂರು ಹೊರವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾರೋ ಆಗುಂತಕರು ಬಿಟ್ಟು ಹೋಗಿದ್ದ ರಾಟ್‌ವೀಲರ್ ನಾಯಿಗಳು ಏಕಾಏಕಿ ಅವರ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿವೆ.
50ಕ್ಕೂ ಹೆಚ್ಚು ಕಡೆ ಕಚ್ಚಿದ ನಾಯಿ
ವರದಿಗಳ ಪ್ರಕಾರ, ಈ ನಾಯಿಗಳು ಅನಿತಾ ಅವರ ದೇಹದ ಮೇಲೆ ಸುಮಾರು 50ಕ್ಕೂ ಹೆಚ್ಚು ಕಡೆ ಕಚ್ಚಿ ವಿಕೃತವಾಗಿ ಗಾಯಗೊಳಿಸಿವೆ. ರಕ್ತಸ್ರಾವದಿಂದಾಗಿ ತೀವ್ರ ಅಸ್ವಸ್ಥರಾದ ಅನಿತಾ ಅವರು ಸ್ಥಳದಲ್ಲೇ ಬಿದ್ದು ಒದ್ದಾಡುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಸಾವು
ರಾತ್ರಿ 11:30ರ ಸುಮಾರಿಗೆ ಘಟನೆ ನಡೆದಿದ್ದರೂ, ವಿಷಯ ಗ್ರಾಮಸ್ಥರಿಗೆ ತಿಳಿದಿದ್ದು ಬೆಳಗಿನ ಜಾವ 3:30ರ ಸುಮಾರಿಗೆ. ತಕ್ಷಣವೇ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಅನಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲು ಹೊರಟರು. ಆದರೆ, ದಾರಿಯಲ್ಲಿ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಳಿ ಅನಿತಾ ಕೊನೆಯುಸಿರೆಳೆದರು.
ಶಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರ
ಪ್ರಸ್ತುತ ಮೃತ ಮಹಿಳೆಯ ಶವವು ತುಮಕೂರು ಜಿಲ್ಲೆ ಶಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ. ಅಲ್ಲಿ ಮರಣೋತ್ತರ ಪರೀಕ್ಷೆ (Post Mortem) ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.
ನಾಯಿಗಳನ್ನು ಎಳೆದುತಂದ ಗ್ರಾಮಸ್ಥರು
ಈ ಭೀಕರ ದಾಳಿಯಿಂದ ತೀವ್ರ ಆಕ್ರೋಶಗೊಂಡ ಹೊನ್ನೂರು ಗೊಲ್ಲರಹಟ್ಟಿ ಮತ್ತು ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರು, ದಾಳಿಗೆ ಕಾರಣವಾದ ರಾಟ್‌ವೀಲರ್ ನಾಯಿಗಳನ್ನು ಹಿಡಿದು, ಹಗ್ಗ ಕಟ್ಟಿ ಕೋಲಿಗೆ ಬಿಗಿದು ಗ್ರಾಮದ ಬೀದಿಗಳಲ್ಲಿ ಎಳೆದುಕೊಂಡು ಹೋಗಿ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಅಪಾಯಕಾರಿ ನಾಯಿಗಳನ್ನು ರಸ್ತೆಯಲ್ಲಿ ಬಿಟ್ಟು ಹೋದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಾಯಿಗಳನ್ನು ರಸ್ತೆಯಲ್ಲಿ ಬಿಟ್ಟು ಹೋದ ಆಗುಂತಕರು
ಈ ಘಟನೆ ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಯಿಗಳನ್ನು ರಸ್ತೆಯಲ್ಲಿ ಬಿಟ್ಟು ಹೋದ ಆಗುಂತಕರನ್ನು ಮತ್ತು ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.

