Asianet Suvarna News Asianet Suvarna News

ಕೋವಿಡ್ ಲಸಿಕೆ ಪಡೆಯದೆ ಸಾವಿನ ಕದ ತಟ್ಟಿದ ಶೇ.99.5 ಮಂದಿ!

  •  ಕೊರೋನಾ ಲಸಿಕೆ ಪಡೆದವರಲ್ಲಿ ಸೋಂಕು ವಿಪರೀತಕ್ಕೆ ಹೋಗಿ ಸಾವು ಸಂಭವಿಸುವ ಪ್ರಮಾಣ ಅತ್ಯಂತ ಕಡಿಮೆ 
  •  ಕೊರೋನಾ   ಲಸಿಕೆ ಪಡೆದ ಕೇವಲ ಶೇ.0.5 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ.
99 percent of COVID deaths are   unvaccinated people in Dakshina kannada snr
Author
Bengaluru, First Published Oct 4, 2021, 3:55 PM IST
  • Facebook
  • Twitter
  • Whatsapp

ವರದಿ : ಸಂದೀಪ್‌ ವಾಗ್ಲೆ

 ಮಂಗಳೂರು (ಅ.04):  ಕೊರೋನಾ (Corona) ಲಸಿಕೆ ಪಡೆದವರಲ್ಲಿ ಸೋಂಕು ವಿಪರೀತಕ್ಕೆ ಹೋಗಿ ಸಾವು ಸಂಭವಿಸುವ ಪ್ರಮಾಣ ಅತ್ಯಂತ ಕಡಿಮೆ ಎನ್ನುವುದು ಇದೀಗ ಸಾಬೀತಾಗಿದೆ. ದಕ್ಷಿಣ ಕನ್ನಡ (Dakshinakannada) ಜಿಲ್ಲೆಯಲ್ಲಿ ಕೊರೋನಾ ಲಸಿಕೆ ನೀಡಿಕೆ ಆರಂಭವಾದ ಜ. 16ರಿಂದ ಇದುವರೆಗೆ (ಅ.2ರವರೆಗೆ) ಲಸಿಕೆ ಪಡೆದ ಕೇವಲ ಶೇ.0.5 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ. ಈ ಅವಧಿಯಲ್ಲಿ ಸಂಭವಿಸಿದ ಒಟ್ಟು ಕೊರೋನಾ ಸಾವಿನ (Death ) ಸಂಖ್ಯೆಯಲ್ಲಿ ಶೇ.99.5 ಮಂದಿ ಲಸಿಕೆ ಪಡೆಯದವರೇ ಆಗಿದ್ದಾರೆ!

ಲಸಿಕಾ ಕಾರ್ಯಕ್ರಮ (vaccination Programe) ಆರಂಭವಾದಾಗ ಲಸಿಕೆ ಬಗ್ಗೆ ಅನೇಕ ವದಂತಿಗಳು ಹರಡಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಈ ನಡುವೆ ಲಸಿಕೆಯ ಕೊರತೆಯೂ ಉಂಟಾಗಿತ್ತು. ಕ್ರಮೇಣ ಜನಜಾಗೃತಿ ಮೂಡಿ ಜನರು ಸ್ವಯಂ ಪ್ರೇರಿತವಾಗಿ ಲಸಿಕೆ (Vaccine) ಪಡೆಯತೊಡಗಿದ್ದಾರೆ. ಲಸಿಕೆಯೂ ಸಾಕಷ್ಟುಪ್ರಮಾಣದಲ್ಲಿ ವಿತರಣೆಯಾಗುತ್ತಿದೆ. ಲಸಿಕೆ ಪಡೆಯುವುದರಿಂದ ಸಾವಿನ ಕದ ತಟ್ಟುವ ಸಾಧ್ಯತೆ ತೀರ ವಿರಳ ಎನ್ನುವುದು ಕೂಡ ಈಗ ಅಧಿಕೃತವಾಗಿ ದೃಢಪಟ್ಟಿದೆ.

ಕೋವಿಡ್ ಇಳಿಕೆ : ಕಾಸರಗೋಡು - ದ.ಕ. ಪ್ರವೇಶಕ್ಕೆ ಟೆಸ್ಟ್‌ ವಿನಾಯ್ತಿಗೆ ಮನವಿ

929ರಲ್ಲಿ 5 ಮಾತ್ರ: ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಜ. 16ರಿಂದ ಲಸಿಕಾ ಕಾರ್ಯಕ್ರಮ ಆರಂಭವಾಗಿತ್ತು. ಅಲ್ಲಿಯವರೆಗೆ 733 ಮಂದಿ ಮೊದಲ ಅಲೆಯಲ್ಲಿ ಸಾವಿಗೀಡಾಗಿದ್ದರೆ, ಜ.16ರ ಬಳಿಕ 929 ಮಂದಿ ಸಾವಿಗೀಡಾಗಿದ್ದಾರೆ (ಒಟ್ಟು ಸಾವಿನ ಸಂಖ್ಯೆ 1662). ಈ 929 ಮಂದಿಯಲ್ಲಿ ಲಸಿಕೆ ಪಡೆದೂ ಸಾವಿಗೀಡಾದವರು ಕೇವಲ ಐವರು ಮಾತ್ರ. ಅದರಲ್ಲೂ ಎರಡೂ ಡೋಸ್‌ ಲಸಿಕೆ ಪಡೆದು ಸಾವಿನ ಕದ ತಟ್ಟಿದವರು ಕೇವಲ ಇಬ್ಬರು. ಉಳಿದ ಮೂವರು ತಲಾ ಒಂದು ಡೋಸ್‌ ಲಸಿಕೆ ಪಡೆದವರಾಗಿದ್ದಾರೆ.

ಎರಡೂ ಡೋಸ್‌ ಲಸಿಕೆ ಪಡೆದು ಮೃತಪಟ್ಟವರಲ್ಲಿ ಒಬ್ಬರು ಗಂಭೀರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಇನ್ನೊಬ್ಬರು ಹೃದಯ ಕಾಯಿಲೆ ಹೊಂದಿದ್ದರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌  (Dr.Kishor Kumar)ತಿಳಿಸಿದ್ದಾರೆ.

ಶೇ.87 ಮಂದಿಗೆ ಫಸ್ಟ್‌ ಡೋಸ್‌: ಜಿಲ್ಲೆಯಲ್ಲಿ ಜೂನ್‌, ಜುಲೈ ತಿಂಗಳಲ್ಲಿ ಲಸಿಕೆಯ ತೀವ್ರ ಕೊರತೆಯಾಗಿತ್ತು. ಮೊದಲ ಡೋಸ್‌ ಪಡೆದವರಿಗೆ 2ನೇ ಡೋಸ್‌ ಪಡೆಯುವ ಅವಧಿ ಮೀರಿದರೂ ಲಸಿಕೆ ಸಿಗಲು ಪ್ರಯಾಸಪಡಬೇಕಾಗಿತ್ತು. ಕ್ರಮೇಣ ಲಸಿಕೆ ಪೂರೈಕೆ ಸಲೀಸಾಗಿ ಪ್ರಸ್ತುತ ಲಸಿಕಾ ಕಾರ್ಯಕ್ರಮ ಚುರುಕಿನಲ್ಲಿ ನಡೆಯುತ್ತಿದ್ದು, ಒಟ್ಟು 21 ಲಕ್ಷಕ್ಕೂ ಅಧಿಕ ಡೋಸ್‌ ಲಸಿಕೆ ಹಾಕಲಾಗಿದೆ. ಜಿಲ್ಲೆಯಲ್ಲಿ 18 ವರ್ಷ ವಯಸ್ಸು ಮೇಲ್ಪಟ್ಟಒಟ್ಟು 18 ಲಕ್ಷದಷ್ಟುಜನರಲ್ಲಿ ಶೇ.87ರಷ್ಟುಮಂದಿಗೆ ಮೊದಲ ಡೋಸ್‌ ನೀಡಲಾಗಿದೆ. ಶೇ.40ರಷ್ಟುಜನರು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ.

ಕರ್ನಾಟಕ: ಸೆಪ್ಟೆಂಬರಲ್ಲಿ ದಾಖಲೆ ಜನಕ್ಕೆ ಲಸಿಕೆ

60 ಪ್ಲಸ್‌ ಎಲ್ಲರಿಗೂ ಲಸಿಕೆ: ಜಿಲ್ಲೆಯಲ್ಲಿ 18-44 ವರ್ಷ ವಯಸ್ಸಿನವರಲ್ಲಿ ಶೇ.71ರಷ್ಟುಜನರಿಗೆ ಮೊದಲ ಡೋಸ್‌ ನೀಡಲಾಗಿದ್ದರೆ, ಶೇ.30ರಷ್ಟುಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. 45-60 ವರ್ಷ ವಯಸ್ಸಿನ ವಿಭಾಗದಲ್ಲಿ ಶೇ.97.5 ಮೊದಲ ಡೋಸ್‌, ಶೇ.56ರಷ್ಟುಮಂದಿ ಎರಡೂ ಡೋಸ್‌ ಪಡೆದಿದ್ದಾರೆ. ಗಮನಾರ್ಹವಾಗಿ 60 ವರ್ಷ ವಯಸ್ಸು ಮೇಲ್ಪಟ್ಟಎಲ್ಲರಿಗೂ ಮೊದಲ ಡೋಸ್‌ ನೀಡಲಾಗಿದ್ದರೆ, ಶೇ.66ರಷ್ಟುಮಂದಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ.

ಆರೋಗ್ಯ ವಾರಿಯರ್‌ಗಳಲ್ಲೂ ಸೋಂಕು ಕಡಿಮೆ

ಕೊರೋನಾ ಮೊದಲ ಅಲೆಯಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಿಬ್ಬಂದಿಯಲ್ಲಿ ಶೇ.40-50ರಷ್ಟುಮಂದಿಗೆ ಸೋಂಕು ತಗುಲಿದ್ದರೆ, 2ನೇ ಅಲೆಯಲ್ಲಿ ಈ ಪ್ರಮಾಣ ಭಾರಿ ಇಳಿಕೆಯಾಗಿದ್ದು, ಕೇವಲ ಶೇ.4ರಿಂದ 5ರಷ್ಟುಮಂದಿ ಸೋಂಕಿಗೀಡಾಗಿದ್ದಾರೆ. ಮೊದಲ ಅಲೆಯಲ್ಲಿ ಅನೇಕ ವೈದ್ಯರು, ದಾದಿಯರು ತೀವ್ರ ಸಮಸ್ಯೆಗೆ ಒಳಗಾಗಿದ್ದರು. ಆದರೆ 2ನೇ ಅಲೆಯಲ್ಲಿ ಅಂತಹ ಸಮಸ್ಯೆಯಾಗಿಲ್ಲ. ಆರೋಗ್ಯ ಕ್ಷೇತ್ರದವರಿಗೆ ಆರಂಭದಲ್ಲೇ ಲಸಿಕೆ ನೀಡಿದ್ದು ಹಾಗೂ ಸೋಂಕಿನಿಂದ ಬಂದ ಸಹಜ ರೋಗ ನಿರೋಧಕ ಶಕ್ತಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಲಸಿಕೆ ಪಡೆಯುವುದು ಸೋಂಕಿನ ಹರಡುವಿಕೆಯನ್ನು ಸ್ಥಗಿತಗೊಳಿಸುವುದು ಮಾತ್ರವಲ್ಲ, ಸೋಂಕು ಗಂಭೀರಾವಸ್ಥೆಗೆ ಹೋಗಿ ಮರಣ ಸಂಭವಿಸುವುದನ್ನು ಬಹುತೇಕವಾಗಿ ತಡೆಯುತ್ತದೆ. ಕೊರೋನಾ ಮೊದಲ ಅಲೆಗೆ ಹೋಲಿಸಿದರೆ 2ನೇ ಅಲೆಯಲ್ಲಿ ಮರಣ ಪ್ರಮಾಣ ಜಾಸ್ತಿ ಇದೆ. ಆದರೂ ಲಸಿಕೆ ಪಡೆದವರಲ್ಲಿ ಸಾವು ಸಂಭವಿಸಿದ್ದು ಅತ್ಯಂತ ಕಡಿಮೆ. ಲಸಿಕೆ ರೂಪದಲ್ಲಿ ರೋಗ ರಕ್ಷಣೆ ಒದಗಿಸುವುದರಿಂದ ಸೋಂಕಿಗೆ ಒಳಗಾದರೂ ಆರಂಭಿಕ ಹಂತದಲ್ಲೇ ದೇಹದ ರೋಗ ರಕ್ಷಣಾ ವ್ಯವಸ್ಥೆ ವೈರಸ್‌ನ್ನು ಸಾಯಿಸುತ್ತದೆ. ಮಾತ್ರವಲ್ಲ, ಅವರಿಂದ ಬೇರೆಯವರಿಗೂ ಸೋಂಕು ಹರಡುವುದಿಲ್ಲ.

- ಡಾ.ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ.

Follow Us:
Download App:
  • android
  • ios