*  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ*  ದೇವಸ್ಥಾನಕ್ಕೆ ಭಿಕ್ಷೆಯ ಹಣ ದೇಣಿಗೆ ನೀಡಿದ ಆಶ್ವಥಮ್ಮ *  ಬಡವರ ಮತ್ತು ಅನ್ನದಾನದ ಸೇವೆಗೆ ವಿನಿಯೋಗಿಸುವ ಆಶ್ವಥಮ್ಮರ ನಡೆ ನಿಜಕ್ಕೂ ಮಾದರಿ  

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಏ.23):  ಭಿಕ್ಷೆ(Begging) ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂ. ಹಣವನ್ನು ವೃದ್ಧೆಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಅನ್ನದಾನದ ನಿಧಿಗೆ ನೀಡಿ ಮಾದರಿಯಾದ ಘಟನೆ ಮಂಗಳೂರಿನಲ್ಲಿ(Mangaluru) ನಡೆದಿದೆ.

ಉಡುಪಿ(Udupi) ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೋಡು ನಿವಾಸಿ 80ರ ಹರೆಯದ ಆಶ್ವಥಮ್ಮ ದೇವಸ್ಥಾನಕ್ಕೆ(Temple) ಭಿಕ್ಷೆಯ ಹಣ ದೇಣಿಗೆ(Donation) ನೀಡಿದವರು. ವರ್ಷದ ಬಹುತೇಕ ಸಮಯ ಅಯ್ಯಪ್ಪ ಮಾಲಾಧಾರಿಯಾಗಿಯೇ ಇರುವ ಆಶ್ವಥಮ್ಮ ಹಲವು ದೇವಸ್ಥಾನಗಳಲ್ಲಿ ಭಿಕ್ಷೆ ಬೇಡುತ್ತಾರೆ. ಅದೇ ರೀತಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಹಾಗೂ ಕರಾವಳಿಯ ಇತರೆ ದೇವಸ್ಥಾನಗಳಲ್ಲಿ ಭಿಕ್ಷೆ ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂ. ಹಣವನ್ನು ಪೊಳಲಿ ದೇವಸ್ಥಾನದ ಅನ್ನದಾನ ನಿಧಿಗೆ ಸಮರ್ಪಿಸಿ ಮಾದರಿಯಾಗಿದ್ದಾರೆ. ಇವರ ಮಕ್ಕಳು ಇಹಲೋಕ ತ್ಯಜಿಸಿದ್ದು, ಇಬ್ಬರು ಮೊಮ್ಮಕ್ಕಳು ಮೀನುಗಾರಿಕೆ ನಡೆಸುತ್ತಿದ್ದಾರೆ. ವಿಶೇಷವೆಂದ್ರೆ ಇವರು ಭಿಕ್ಷೆ ಬೇಡಿದ ಒಂದಷ್ಟು ಮೊತ್ತವನ್ನ ಕುಟುಂಬ ನಿರ್ವಹಣೆಗೆ ಬಳಸಿದ್ರೆ ಉಳಿದ ಹಣವನ್ನ ಸಂಗ್ರಹಿಸಿಟ್ಟು ದೇವಾಲಯಗಳಿಗೆ ದೇಣಿಗೆ ನೀಡುವುದು ಅಭ್ಯಾಸ. ಬೆಳಿಗ್ಗಿನಿಂದ ಸಂಜೆಯವರೆಗೆ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಪಿಗ್ಮಿಗೆ ಕಟ್ಟಿ ಅಲ್ಲಿ ಜಮೆಯಾದ ಹಣವನ್ನು ದೇವಸ್ಥಾನಗಳಿಗೆ ದೇಣಿಗೆ ನೀಡುತ್ತಿದ್ದಾರೆ. 

ತುಳುನಾಡಿನ ಧರ್ಮ ದಂಗಲ್ ಮಧ್ಯೆಯೂ ಮಸೀದಿಗೆ ದೈವಗಳ ಭೇಟಿ!

ಸುಮಾರು 18 ವರ್ಷಗಳಿಂದ ಆಶ್ವಥಮ್ಮ ದಕ್ಷಿಣ ಕನ್ನಡ(Dakshina Kannada), ಉಡುಪಿ ಸೇರಿ ಹಲವು ದೇವಸ್ಥಾನಗಳಿಗೆ ಈ ರೀತಿ ಹಣವನ್ನು ದೇಣಿಗೆ ನೀಡಿದ್ದಾರೆ. ಈವರೆಗೆ ಇವರು ದೇಣಿಗೆ ನೀಡಿದ ಹಣ ಲಕ್ಷಾಂತರ ರೂ. ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ದೇವಸ್ಥಾನದ ಬಳಿ ಬೇಡಿದ ಹಣವನ್ನು ಹಸಿದ ಹೊಟ್ಟೆಯಲ್ಲಿ ಯಾರೂ ಇರಬಾರದು ಅನ್ನೋ ಉದ್ದೇಶದಿಂದ ದೇವಸ್ಥಾನದ ಅನ್ನದಾನಕ್ಕೆ ನೀಡುತ್ತಿದ್ದಾರೆ. 

ಈವರೆಗೆ ನೀಡಿದ್ದು 6 ಲಕ್ಷ ರೂ ಹಣ!

ಆಶ್ವಥಮ್ಮರ ಈ ಸಮಾಜಮುಖಿ ಕಾರ್ಯದ ಲೆಕ್ಕ ಹಾಕಿದ್ರೆ ಅದರ ಪಾಲು ದೊಡ್ಡದಿದೆ. 80ರ ಇಳಿ ವಯಸ್ಸಿನಲ್ಲೂ ಈ ವೃದ್ದೆ ಭಿಕ್ಷಾಟನೆ ಮೂಲಕ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬಂತೆ ಬದುಕುತ್ತಿದ್ದಾರೆ. ಹೀಗೆ ಆಶ್ವಥಮ್ಮ ಭಿಕ್ಷೆ ಬೇಡಿದ ಹಣವನ್ನ ದೇವಸ್ಥಾನಗಳ ಧಾರ್ಮಿಕ ಕಾರ್ಯ, ದೇಗುಲಗಳ ಸಾಮಾಜಿಕ ಕಾರ್ಯಗಳಿಗೆ ಅರ್ಪಿಸಿದ್ದಾರೆ. ಹೀಗೆ ದಾನವಾಗಿ ನೀಡಿದ ಹಣವೇ ಬರೋಬ್ಬರಿ 6 ಲಕ್ಷ ರೂಪಾಯಿಗಳು. ಇವರ ಪತಿ 18 ವರ್ಷಗಳ ಹಿಂದೆ ನಿಧನರಾಗಿದ್ದು, ಆ ಬಳಿಕ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

17 ವರ್ಷಗಳ ಹಿಂದೆ ತನ್ನ ಮೊಮ್ಮಗಳಿಗೆ ಮಾಲೆ ಹಾಕಿಸಿ ಶಬರಿಮಲೆಗೆ ತೆರಳಿ ಪಂದಳ, ಎರಿಮಲೆ, ಪಂಪೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾನ ನೀಡಿದ್ದಾರೆ. ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಸ್ಥಾನದ ಅನ್ನದಾನಕ್ಕೆ 1 ಲಕ್ಷ, ಪೊಳಲಿ ಅಖಿಲೇಶ್ವರ ದೇವಸ್ಥಾನದ ಅಯ್ಯಪ್ಪ ವೃತಧಾರಿಗಳಿಗೆ 1.50 ಲಕ್ಷ ಸೇರಿ ಗಂಗೊಳ್ಳಿ ದೇವಾಲಯದಲ್ಲೂ ಅನ್ನದಾನ ಕೊಡಿಸಿದ್ದಾರೆ. ಇದರ ಜೊತೆ ಕರಾವಳಿ ಜಿಲ್ಲೆಗಳ ಹಲವು ಅನಾಥಾಶ್ರಮಗಳಿಗೂ(Orphanage) ದೇಣಿಗೆ ನೀಡಿದ್ದಾರೆ. ಸಮಾಜದ ದುಡ್ಡನ್ನ ಭಿಕ್ಷಾಟನೆ ಮೂಲಕ ಪಡೆದುಕೊಂಡು ಮತ್ತೆ ಅದನ್ನೇ ಬಡವರ ಮತ್ತು ಅನ್ನದಾನದ ಸೇವೆಗೆ ವಿನಿಯೋಗಿಸುವ ಆಶ್ವಥಮ್ಮರ ನಡೆ ನಿಜಕ್ಕೂ ಮಾದರಿ.