ಮಂಗಳೂರು ಪಬ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 18 ವಿದ್ಯಾರ್ಥಿಗಳ ಪೈಕಿ 8 ಮಂದಿ ಅಬಕಾರಿ ನಿಯಮಗಳ ಪ್ರಕಾರ 21 ವರ್ಷದೊಳಗಿನವರಾಗಿರುವುದು ಕಂಡುಬಂದಿದ್ದು, ಕ್ರಮಕ್ಕಾಗಿ ಅಬಕಾರಿ ಇಲಾಖೆಗೆ ವರದಿ ನೀಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ತಿಳಿಸಿದ್ದಾರೆ

ಮಂಗಳೂರು (ಜು.27) : ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ಅಡ್ಡಿಪಡಿಸಿರುವ ನಗರದ ಬಲ್ಮಠ ರಸ್ತೆಯ ಪಬ್‌ಗೆ ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 18 ವಿದ್ಯಾರ್ಥಿಗಳ ಪೈಕಿ 8 ಮಂದಿ ಅಬಕಾರಿ ನಿಯಮಗಳ ಪ್ರಕಾರ 21 ವರ್ಷದೊಳಗಿನವರಾಗಿರುವುದು ಕಂಡುಬಂದಿದ್ದು, ಕ್ರಮಕ್ಕಾಗಿ ಅಬಕಾರಿ ಇಲಾಖೆಗೆ ವರದಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಇಡೀ ಘಟನೆಯ ಬಗ್ಗೆ ಪರಾಮರ್ಶೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಪಬ್‌ (Pub)ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಐದಾರು ಜನ ಯುವಕರು ಬಂದು ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುತ್ತಿರುವುದಾಗಿ ಆರೋಪಿಸಿ ಬೌನ್ಸರ್‌ ದಿನೇಶ್‌ ಬಳಿ ಆಕ್ಷೇಪಿಸಿದ್ದರು. ದಿನೇಶ್‌(Dinesh) ಅವರು ಪಬ್‌ನ ಮ್ಯಾನೇಜರ್‌ಗೆ ತಿಳಿಸಿದ ನಂತರ ಮ್ಯಾನೇಜರ್‌ ಒಳಗೆ ಹೋಗಿ ನೋಡಿದಾಗ ಕೆಲವು ಕಾಲೇಜು ವಿದ್ಯಾರ್ಥಿಗಳು ಅಲ್ಲಿದ್ದರು. ಅವರನ್ನು ಮ್ಯಾನೇಜರ್‌ ಹೊರಗೆ ಹೋಗಲು ಹೇಳಿದ ಬಳಿಕ ವಿದ್ಯಾರ್ಥಿಗಳು ಹೊರ ನಡೆದಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಭೇಟಿ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಿದ್ದಾರೆ ಎಂದು ಹೇಳಿದರು.

\ಕರಾವಳಿಯಲ್ಲಿ ಮತ್ತೊಮ್ಮೆ ಪಬ್ ದಾಳಿ: ವಿಹೆಚ್'ಪಿ ಎಚ್ಚರಿಕೆ

ಪಬ್‌ನ ಬೌನ್ಸರ್‌ ನೀಡಿದ ಮಾಹಿತಿ ಪ್ರಕಾರ ವಿದ್ಯಾರ್ಥಿಗಳ ಮೇಲೆ ದಾಳಿ ಆಗಿಲ್ಲ. ಸಂಘಟನೆಯವರು ಪಬ್‌ನ ಹೊರಭಾಗದಲ್ಲೇ ಮಾತನಾಡಿ ಹೋಗಿದ್ದಾರೆ. ಈ ಕುರಿತು ಪಬ್‌ನ ಬೌನ್ಸರ್‌ ಮತ್ತು ಮ್ಯಾನೇಜರ್‌ ಹೇಳಿಕೆ ಪಡೆಯಲಾಗಿದೆ. ಹೊರಗಿನ ವ್ಯಕ್ತಿಗಳು ಈ ರೀತಿ ವರ್ತನೆ ಮಾಡಲು, ಐಡಿ, ಲೈಸನ್ಸ್‌ ಕೇಳಲು ಅವಕಾಶವಿಲ್ಲ. ಈ ಬಗ್ಗೆ ಪರಾಮರ್ಶೆ ಮಾಡಿ, ಸಿಸಿಟಿವಿಯ ದೃಶ್ಯ ಪರಿಶೀಲಿಸಲಾಗುವುದು. ವಿದ್ಯಾರ್ಥಿಗಳ ಬಳಿಯೂ ಘಟನೆ ಬಗ್ಗೆ ಮಾಹಿತಿ ತೆಗೆದುಕೊಂಡು ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಶಿಕುಮಾರ್‌ ತಿಳಿಸಿದರು.

ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಕಿಸ್ಸಿಂಗ್‌ ಪ್ರಕರಣದ ವಿದ್ಯಾರ್ಥಿಗಳಿಗೂ ಈ ವಿದ್ಯಾರ್ಥಿಗಳಿಗೂ ಸಂಬಂಧ ಇಲ್ಲ. ಕಿಸ್ಸಿಂಗ್‌ ಪ್ರಕರಣದ ವಿದ್ಯಾರ್ಥಿಗಳು ಕಸ್ಟಡಿಗೆ ಹೋಗುವ ಕಾರಣ ಈ ಪಾರ್ಟಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಬಂಧ ಕಲ್ಪಿಸಲಾಗಿತ್ತು. ಆದರೆ ಅಂಥ ಲಿಂಕ್‌ ಕಂಡುಬಂದಿಲ್ಲ ಎಂದು ಹೇಳಿದರು.

ಮಂಗಳೂರು ಪಬ್ ದಾಳಿ: ಆರೋಪಿಗಳು ದೋಷಮುಕ್ತರಾಗಿದ್ದು ಈ ಕಾರಣಕ್ಕೆ..!

ಇದೇ ವಿಚಾರದ ಕುರಿತು ಮಂಗಳವಾರ ಶಾಸಕ ವೇದವ್ಯಾಸ ಕಾಮತ್‌ ಅವರನ್ನು ವಿಶ್ವ ಹಿಂದೂ ಪರಿಷತ್‌ ಮುಖಂಡರು ಭೇಟಿಯಾಗಿ ವಿವರಣೆ ನೀಡಿದ್ದಾರೆ. ಅವಧಿ ಮೀರಿ ಕಾರ್ಯಾಚರಿಸುತ್ತಿರುವ ಪಬ್‌ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗೂ ಡ್ರಗ್‌್ಸ ದಂಧೆ ಮೇಲೆ ಕಣ್ಣಿಡುವಂತೆ ಮನವಿ ಮಾಡಿದ್ದಾರೆ.

ಪಬ್‌ನಲ್ಲಿ ಫೇರ್‌ವೆಲ್‌ ಪಾರ್ಟಿ ನಡೆಯುತ್ತಿತ್ತು. ನಾವು ಪಬ್‌ ಒಳಗೆ ಹೋಗಿಲ್ಲ. ಈ ರೀತಿಯ ಘಟನೆ ನಡೆದಾಗ ನಾವು ರಿಯಾಕ್ಷನ್‌ ಮಾಡದೆ ಸುಮ್ಮನಿರಲ್ಲ. ಪಬ್‌ನಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಇರುವ ಬಗ್ಗೆ ತನಿಖೆ ಮಾಡಬೇಕು. ನಾವು ಪಬ್‌ ಮೇಲೆ ಯಾವುದೇ ರೀತಿಯ ದಾಳಿ ನಡೆಸಿಲ್ಲ. ಪೊಲೀಸ್‌ ಇಲಾಖೆಗೆ ಮಾಹಿತಿ ಕೊಟ್ಟು ಮಕ್ಕಳನ್ನ ಮನೆಗೆ ಕಳುಹಿಸಲಾಗಿದೆ. ಪೊಲೀಸರು ಬರುವ ಮೊದಲು ನಾವು ಆಕ್ಷನ್‌ ಮಾಡಿಲ್ಲ.

- ಪುನೀತ್‌ ಅತ್ತಾವರ, ಭಜರಂಗದಳ ಮುಖಂಡ

ಪಬ್‌ ದಾಳಿಯನ್ನು ಸಂಘಟನೆ ಮಾಡಿಲ್ಲ. ಪೊಲೀಸ್‌ ಇಲಾಖೆ ಮೂಲಕ ಅಪ್ರಾಪ್ತ ವಯಸ್ಸಿನವರಿಗೆ ಬುದ್ಧಿ ಹೇಳಿದ್ದಾರೆ. ಸಂಘಟನೆಯವರು ಈ ಮೂಲಕ ಪೊಲೀಸ್‌ ಇಲಾಖೆ ಜತೆ ಹೋಗಿದ್ದಾರೆ. ಅವರಿಗೆ ಅಹಿತಕರ ಘಟನೆ ಮಾಡಬೇಕಿದ್ದರೆ ಪೊಲೀಸರಿಗೆ ಮುಂಚಿತವಾಗಿ ತಿಳಿಸುತ್ತಿರಲಿಲ್ಲ. ವಿದ್ಯಾರ್ಥಿಗಳು ಕೂಡ ಮನೆಯವರ ಕಷ್ಟಅರಿಯಬೇಕು.

- ವೇದವ್ಯಾಸ ಕಾಮತ್‌, ಮಂಗಳೂರು ದಕ್ಷಿಣ ಶಾಸಕ