ಬೆಂಗಳೂರು(ಮಾ.19): ಅನಿವಾಸಿ ಭಾರತೀಯ ಮಹಿಳೆ ಹೆಸರಿನಲ್ಲಿದ್ದ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಸಹಕಾರಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟು 75 ಲಕ್ಷ ಸಾಲ ಪಡೆದು ವಂಚಿಸಿದ್ದ ಚಾಲಾಕಿ ಮೋಸಗಾರರ ತಂಡವೊಂದು ಬಸವೇಶ್ವರ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

ಜೆಟ್‌ ಏರ್‌ವೇಸ್‌ನಲ್ಲಿ ಕೆಲಸ ಆಮಿಷ: 7 ಲಕ್ಷ ರು. ವಂಚನೆ

ಲಗ್ಗೆರೆಯ ಕೆಂಪೇಗೌಡ ಲೇಔಟ್‌ ನಿವಾಸಿ ವಿನಯ್‌ಕುಮಾರ್‌ ಅಲಿಯಾಸ್‌ ಸ್ಟಾಂಪ್‌ ವಿನಿ, ಜಯನಗರದ ವಿಶ್ವನಾಥ್‌, ಕುರುಬರಹಳ್ಳಿಯ ಸೈಯದ್‌ ಯೂಸೂಫ್‌, ನಾಗರಬಾವಿಯ ರಾಜ್‌ ಚಂದ್ರಶೇಖರ್‌, ಸುಂಕದಕಟ್ಟೆಯ ಶಿವಮ್ಮ, ಶಿವಲಿಂಗೇಗೌಡ ಬಂಧಿತರಾಗಿದ್ದು, ಆರೋಪಿಗಳಿಂದ ಹಲವು ನಿವೇಶನಗಳ ದಾಖಲೆಗಳು, 71 ಸರ್ಕಾರಿ ಸೀಲ್‌ಗಳು ಹಾಗೂ ಬ್ಯಾಂಕ್‌ ದಾಖಲೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಮಹಾಲಕ್ಷ್ಮೀ ಲೇಔಟ್‌ನ ಕುರುಬರಹಳ್ಳಿಯ ನಿವಾಸಿ, ಹಾಲಿ ಅಮೆರಿಕದಲ್ಲಿ ನೆಲೆಸಿರುವ ರೂಪಲಕ್ಷ್ಮಿ ಅವರ ನಿವೇಶನಕ್ಕೆ ವಿನಯ್‌ ಗ್ಯಾಂಗ್‌ ನಕಲಿ ದಾಖಲೆ ಸೃಷ್ಟಿಸಿತ್ತು.

ಯಾರದ್ದೋ ಸೈಟ್‌, ಯಾರಿಗೋ ದುಡ್ಡು:

ಭೂ ವ್ಯವಹಾರ ನಡೆಸುವ ವಿನಯ್‌, ಅನಿವಾಸಿ ಭಾರತೀಯರು ಸೇರಿದಂತೆ ಅಪರಿಚಿತರ ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಬಳಿಕ ಅವುಗಳನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸಾಲ ಪಡೆದು ವಂಚಿಸುತ್ತಿದ್ದ. ಕುರುಬರಹಳ್ಳಿಯ ಕರ್ನಾಟಕ ಲೇಔಟ್‌ನಲ್ಲಿ ಅಮೆರಿಕ ಸಂಜಾತೆ ರೂಪಲಕ್ಷ್ಮಿ ಎಂಬುವರಿಗೆ 42/62 ಅಳತೆಯ ನಿವೇಶನದ ಬಗ್ಗೆ ತಿಳಿದ ವಿನಯ್‌, ಅದಕ್ಕೆ ನಕಲಿ ದಾಖಲೆಗಳನ್ನು ತಯಾರಿಸಿದ್ದ. 2019ರಲ್ಲಿ ಶಿವಮ್ಮ ಅವರನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಕರೆದುಕೊಂಡು ಹೋದ ವಿನಯ್‌, ಆಕೆಯನ್ನೇ ರೂಪಲಕ್ಷ್ಮಿ ಎಂದು ತೋರಿಸಿ ಮತ್ತೊಬ್ಬ ಆರೋಪಿ ರಾಜ್‌ ಚಂದ್ರಶೇಖರ್‌ ಹೆಸರಿಗೆ ನೋಂದಣಿ ಮಾಡಿಸಿದ. ಆನಂತರ ನಿವೇಶನವು ಬಸವರಾಜ್‌ ಯರಗಲ್‌ ಹೆಸರಿಗೆ ನೋಂದಣಿ ಆಯಿತು. ಈ ದಾಖಲೆ ಮೂಲಕ ಬಸವರಾಜ್‌ ಹೆಸರಿನಲ್ಲಿ ಸಹಕಾರ ಬ್ಯಾಂಕ್‌ನಲ್ಲಿ 75 ಲಕ್ಷ ಸಾಲ ಎತ್ತಿದ್ದರು.

ಪ್ರೀತಿ ಮಾತಲ್ಲೇ ಖೆಡ್ಡಾಕ್ಕೆ ಕೆಡವೋ ಲವ್ ಬಾಂಬಿಂಗ್, ಏನಿದು?

ಕೆಲ ತಿಂಗಳ ಬಳಿಕ ಸಾಲದ ನೋಟಿಸ್‌ಗಳು ರೂಪಲಕ್ಷ್ಮಿ ಅವರಿಗೆ ತಲುಪಿವೆ. ಇದರಿಂದ ಎಚ್ಚೆತ್ತ ಅವರು, ನಗರದಲ್ಲಿ ನೆಲೆಸಿದ್ದ ಸಂಬಂಧಿಕರ ಮೂಲಕ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ವಿಚಾರಿಸಿದಾಗ ನಿವೇಶನ ಮಾರಾಟದ ಸಂಗತಿ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಎರ್ರಿಸ್ವಾಮಿ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಪ್ರಭುಸ್ವಾಮಿ ನೇತೃತ್ವದ ತಂಡವು, ಶಿವಮ್ಮಳನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ವಿನಯ್‌ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಈ ಮಾಹಿತಿ ಆಧರಿಸಿ ವಿನಯ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ವಂಚನೆ ಕೃತ್ಯ ಕತೆ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಪಂ ರಸೀದಿಗಳು ಸಿಕ್ಕಿವೆ

ವಿನಯ್‌ ಮನೆ ಮೇಲೆ ದಾಳಿ ನಡೆಸಿದಾಗ ಭೂ ದಾಖಲೆಗಳು ಕಂಡು ಪೊಲೀಸರೇ ಅಚ್ಚರಿಗೊಂಡಿದ್ದಾರೆ. ವಿನಯ್‌ ಬಳಿ ಸರ್ಕಾರದ ವಿವಿಧ ಇಲಾಖೆಗಳ 71 ಸೀಲುಗಳು, ನಂಬರಿಂಗ್‌ ಮಿಷನ್‌, ಖಾಲಿ ಛಾಪಾ ಕಾಗದ, ಕಂದಾಯ ಇಲಾಖೆಯ ಫಾರಂ, ಖಾಲಿ ಮರಣ-ಜನನ ಪ್ರಮಾಣ ಪತ್ರಗಳು ಹಾಗೂ ವಾಸಸ್ಥಳ ಪ್ರಮಾಣ ಪತ್ರಗಳಿಗೆ ಸಲ್ಲಿಸುವ ಅರ್ಜಿಗಳು ಸಿಕ್ಕಿವೆ. ಅಲ್ಲದೆ, ಆಶ್ರಯ ಯೋಜನೆಯ ಖಾಲಿ ಸೈಟ್‌ಗಳ ನಿವೇಶನ ಹಕ್ಕು ಪತ್ರಗಳು, ಶಾಲಾ ಖಾಲಿ ವರ್ಗಾವಣೆ ಪ್ರಮಾಣ ಪತ್ರ, ಲಕ್ಷ್ಮಿಪುರ ಧರಿತ್ರಿ ಲೇಔಟ್‌ನ ವಿವಿಧ ಖಾತೆಗಳು, ಎಂಇಐ ಗೃಹ ನಿರ್ಮಾಣ ಸಹಕಾರಿ ಸಂಘದ ಸೈಟಿಗೆ ಸಂಬಂಧಿಸಿದ ದಾಖಲೆಗಳು, ಟ್ರೇಸಿಂಗ್‌ ಶೀಟುಗಳು ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ರಸೀದಿ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್‌ ಬಾನೋತ್‌ ತಿಳಿಸಿದ್ದಾರೆ.

ಅಕ್ರಮವಾಗಿ 9 ನಿವೇಶನ ಮಾರಾಟ?

ವಿನಯ್‌ ತಂಡವು, ನಕಲಿ ದಾಖಲೆ ಸೃಷ್ಟಿಸಿ ಸುಮಾರು 9 ನಿವೇಶನಗಳ ಮಾರಾಟಕ್ಕೆ ಯತ್ನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ನೈಸ್‌ ರಸ್ತೆ ಸಮೀಪದ ಲಕ್ಷ್ಮಿಪುರ ಗ್ರಾಮದ ಧರಿತ್ರಿ ಲೇಔಟ್‌ನಲ್ಲಿ 9 ಸೈಟುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಬಳಿಸಲು ಆರೋಪಿ ಬಿ.ಎನ್‌. ರಮೇಶ್‌ ಕಡೆಯಿಂದ ಸರ್ಕಾರದ ಸೀಲು ಹಾಗೂ ದಾಖಲೆಗಳನ್ನು ಆರೋಪಿಗಳು ಮಾಡಿಸಿದ್ದರು. ಆ ದಾಖಲೆಗಳನ್ನೇ ಮುಂದಿಟ್ಟುಕೊಂಡು 3 ಸೈಟುಗಳನ್ನು ವಿಲೇವಾರಿಗೆ ಸಿದ್ಧತೆ ನಡೆಸಿದ್ದರು. ಆದರೆ ಬಿ ಖಾತಾ ನೋಂದಣಿ ರದ್ದು ಹಿನ್ನೆಲೆಯಲ್ಲಿ ಮಾರಾಟ ಪ್ರಕ್ರಿಯೆ ಸ್ಥಗಿತವಾಗಿದೆ. ಇದೇ ರೀತಿ ಬಾಗಲಗುಂಟೆಯ ಎಂಇಐ ಲೇಔಟ್‌ನ 1 ಸೈಟ್‌ನ್ನು ಮಾಲೀಕ ಮರಣ ಹೊಂದಿರುವುದಾಗಿ ನಕಲಿ ಡೆತ್‌ ನೋಟ್‌ ಸೃಷ್ಟಿಸಿ ಬಿಕರಿಗೆ ಮುಂದಾಗಿದ್ದರು. ಆದರೆ ಮಾಲಿಕ ಬದುಕಿರುವ ಸಂಗತಿ ತಿಳಿದು ಅರ್ಧಕ್ಕೆ ಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.