ಬೆಂಗಳೂರು [ಸೆ.08]:  ಏಳು ಮಕ್ಕಳು ಒಂದು ದಿನದ ಮಟ್ಟಿಗೆ ನಗರ ಪೊಲೀಸ್‌ ಆಯುಕ್ತರ ಸ್ಥಾನದಲ್ಲಿ ಕುಳಿತು ಅಧಿಕಾರ ಚಲಾಯಿಸುವ ಅವಕಾಶ ಪಡೆಯಲಿದ್ದಾರೆ.

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಏಳು ಮಕ್ಕಳು ಪೊಲೀಸ್‌ ಅಧಿಕಾರಿಗಳಾಗಬೇಕೆಂಬ ಕನಸು ಕಂಡಿದ್ದರು. ಇಂತಹ ಮಕ್ಕಳ ಕನಸು ಈಡೇರಿಸಲು ಬೆಂಗಳೂರು ನಗರ ಪೊಲೀಸರು ಮತ್ತು ‘ಮೇಕ್‌ ಎ ವಿಶ್‌ ಫೌಂಡೇಷನ್‌’ ಮುಂದಾಗಿದೆ.

ಪೊಲೀಸ್‌ ಆಯುಕ್ತರ ಕಚೇರಿಯ ಆವರಣದಲ್ಲಿ ಸೋಮವಾರ ಬೆಳಗ್ಗೆ 11ರ ಸುಮಾರಿಗೆ ಮಕ್ಕಳಿಗೆ ಪೊಲೀಸ್‌ ಗೌರವ ವಂದನೆ ನೀಡಲಾಗುತ್ತದೆ. ಬಳಿಕ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಮಕ್ಕಳನ್ನು ತಮ್ಮ ಅಧಿಕೃತ ಸ್ಥಾನದಲ್ಲಿ ಕೂರಿಸಿ ಬೆಂಗಳೂರು ನಗರ ಪೊಲೀಸ್‌ ಕರ್ತವ್ಯ ನಿರ್ವಹಿಸುವ ಅವಕಾಶ ಮಾಡಿಕೊಡಲಿದ್ದಾರೆ. 

ಪ್ರತಿಯೊಬ್ಬರಿಗೂ ಇಂತಿಷ್ಟುಸಮಯ ನೀಡಿ ಅವರಿಗೆ ಅಧಿಕಾರ ಚಲಾಯಿಸಲು ಅಧಿಕಾರ ನೀಡಲಾಗುತ್ತದೆ. ಇದರಿಂದ ಮಕ್ಕಳಿಗೆ ನವಚೈತನ್ಯ ಮತ್ತು ಉತ್ಸಾಹ ತುಂಬುವ ಕೆಲಸ ಮಾಡಲಾಗುತ್ತಿದೆ.