ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನ ಮಾಡಿ ಐವರ ಜೀವ ಉಳಿಸಿದ ವೃದ್ಧೆ..!
* ಸ್ಟ್ರೋಕ್ ಅಟ್ಯಾಕ್‌ನಿಂದ ದಾಖಲಾಗಿ ಮೆದುಳು ನಿಷ್ಕ್ರೀಯ
* ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಲೀಲಾವತಿ
* ಅಂಗಾಂಗ ದಾನಕ್ಕೆ ಒಪ್ಪಿದ ಕುಟುಂಬಸ್ಥರು
ಮೈಸೂರು(ಮೇ.22): ನಗರದ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಸ್ಟ್ರೋಕ್ ಅಟ್ಯಾಕ್‌ನಿಂದ ದಾಖಲಾಗಿ ಮೆದುಳು ನಿಷ್ಕ್ರೀಯಗೊಂಡಿದ್ದ ಲೀಲಾವತಿ(66) ಅವರ ಅಂಗಾಂಗ ದಾನದಿಂದ ಐವರಿಗೆ ಜೀವದಾನ ಲಭಿಸಿದೆ.
ಲೀಲಾವತಿ ಅವರ ಯಕೃತ್ತು, ಎರಡು ಮೂತ್ರಪಿಂಡಗಳು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಯಕೃತ್ತು ಮೈಸೂರು ಅಪೋಲೊ ಆಸ್ಪತ್ರೆ, ಒಂದು ಮೂತ್ರಪಿಂಡ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಒಂದು ಮೂತ್ರಪಿಂಡ ಬೆಂಗಳೂರಿನ ಅಪೋಲೊ ಆಸ್ಪತ್ರೆ, ಹೃದಯ ಕವಾಟಗಳು ಬೆಂಗಳೂರಿನ ನಾರಾಯಣ ಹೃದಯಾಲಯ ಮತ್ತು ಕಾರ್ನಿಯಾಗಳು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ನೀಡಲಾಗಿದೆ.
Organ Donation: ಸಾವಿನಲ್ಲೂ 6 ಜನಕ್ಕೆ ಜೀವದಾನ ಮಾಡಿದ ಯುವಕ
ಲೀಲಾವತಿ ಅವರನ್ನು ಸ್ಟ್ರೋಕ್ ಅಟ್ಯಾಕ್ ಆಗಿದುದರಿಂದ ಅಪೋಲೊ ಆಸ್ಪತ್ರೆಗೆ ಮೇ. 9 ರಂದು ಅತ್ಯಂತ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿದ್ದು, ಸಿಟಿ ಸ್ಕ್ಯಾನ್‌ನಿಂದ ಅವರ ಮೆದುಳು ಕಾಂಡವು ಊದಿಕೊಂಡಿರುವುದು ಪತ್ತೆಯಾಯಿತು. ಐಸಿಯುನಲ್ಲಿ ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು.
ಮೇ 17ರ ಮಧ್ಯರಾತ್ರಿ 12:28 ಗೆ ಅವರ ಮೆದುಳು ನಿಷ್ಕ್ರೀಯವಾಗಿದೆ ಎಂದು ಮಾನವ ಅಂಗಾಂಗ ಕಸಿ ಕಾಯಿದೆ 1994ರ ಶಿಷ್ಟಾಚಾರದ ಅನುಸಾರ ಘೋಷಿಸಲಾಯಿತು. ಅಂಗಾಂಗ ದಾನಕ್ಕೆ ಒಪ್ಪಿದ್ದರಿಂದ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಲೀಲಾವತಿ ಅವರ ಅಂಗಾಂಗಗಳನ್ನು ಬೇರ್ಪಡಿಸಿ, ಮಧ್ಯಾಹ್ನ 1.10ರ ಹೊತ್ತಿಗೆ ಅಪೋಲೊ ಆಸ್ಪತ್ರೆಯಲ್ಲಿ ಕ್ರಾಸ್ ಕ್ಲಾಂಪ್ ಪ್ರಕ್ರಿಯೆ ಮೂಲಕ ಅಂಗಾಂಗ ಕಸಿಯನ್ನು ಪೂರ್ಣಗೊಳಿಸಲಾಯಿತು.