ಧಾರವಾಡ ಐಐಟಿ ಪ್ರಾಧ್ಯಾಪಕರ ಅಧ್ಯಯನದ ಪ್ರಕಾರ, ಪಶ್ಚಿಮ ಘಟ್ಟಗಳಲ್ಲಿ ಕಳೆದ ಎರಡು ದಶಕಗಳಲ್ಲಿ 1200ಕ್ಕೂ ಹೆಚ್ಚು ಭೂಕುಸಿತಗಳಾಗಿದ್ದು, ಭವಿಷ್ಯದಲ್ಲಿ ಶೇ. 60.7ರಷ್ಟು ಭೂಕುಸಿತದ ಅಪಾಯವಿದೆ.
ಧಾರವಾಡ: ಕರ್ನಾಟಕದ ಏಳು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಶಕಗಳಲ್ಲಿ 1200ಕ್ಕೂ ಹೆಚ್ಚು ಭೂಕುಸಿತಗಳಾಗಿವೆ. ಇದೀಗ ಧಾರವಾಡ ಐಐಟಿ ಪ್ರಾಧ್ಯಾಪಕರು ನಡೆಸಿದ ಅಧ್ಯಯನ, ಬರುವ ದಿನಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುಮಾರು ಶೇ. 60.7ರಷ್ಟು ಸಂಭಾವ್ಯ ಭೂಕುಸಿತದ ಆತಂಕವನ್ನೂ ಬಿಚ್ಚಿಟ್ಟಿದೆ.
ಜಿಯೋಹಝಾರ್ಡಸ್ ಮೆಕ್ಯಾನಿಕ್ಸ್ ಎಂಬ ಜರ್ನಲ್‌ನಲ್ಲಿ ಪ್ರಕಟ
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ ವಿನಾಶಕಾರಿ ಭೂಕುಸಿತದ ಆನಂತರ ಧಾರವಾಡ ಐಐಟಿ ಸಿವಿಲ್ ಮತ್ತು ಮೂಲಸೌಕರ್ಯ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಮರನಾಥ್ ಹೆಗಡೆ ಮತ್ತು ಸಂಶೋಧನಾ ವಿದ್ಯಾರ್ಥಿ ಮಲಯ್ ಪ್ರಾಮಾಣಿಕ್ ಮಹತ್ವದ ಅಧ್ಯಯನ ನಡೆಸಿದ್ದಾರೆ. ಇದರ ವರದಿಯು ಜಿಯೋಹಝಾರ್ಡಸ್ ಮೆಕ್ಯಾನಿಕ್ಸ್ ಎಂಬ ಜರ್ನಲ್‌ದಲ್ಲಿ ವಾರದ ಹಿಂದಷ್ಟೇ ಪ್ರಕಟವಾಗಿದೆ.
ಈ ಅಧ್ಯಯನವನ್ನು ಶಿರೂರು ಗುಡ್ಡದ ಉಪಗ್ರಹಗಳ ಚಿತ್ರಗಳು, ಈ ಹಿಂದಿನ ಆ ಪ್ರದೇಶಲ್ಲಾದ ಭೂಕುಸಿತದ ದಾಖಲೆಗಳು, ಮಣ್ಣಿನ ರಚನೆ, ಮಳೆ ಪ್ರಮಾಣ ಸೇರಿದಂತೆ ದತ್ತಾಂಶ ಸಂಗ್ರಹಿಸಿ, ಅದನ್ನು ವಿಶ್ಲೇಷಿಸಿ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಭವಿಷ್ಯದಲ್ಲಾಗುವ ಅಪಾಯದ ಅಚ್ಚರಿಯ ಅಂಶಗಳನ್ನು ವರದಿಯು ಸ್ಪಷ್ಟವಾಗಿ ದಾಖಲಿಸಿದೆ.
ಅಪಾಯದಲ್ಲಿ ಉತ್ತರ ಕನ್ನಡಈ ವರೆಗೆ ಪಶ್ಚಿಮ ಘಟ್ಟ ಹೊಂದಿರುವ ಜಿಲ್ಲೆಗಳಲ್ಲಿ ಆಗಿರುವ ಭೂಕುಸಿತಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ ಅತಿ ಹೆಚ್ಚು ಶೇ. 30ರಷ್ಟು ಭೂಕುಸಿತಗಳು ದಾಖಲಾಗಿವೆ ಎಂದು ವರದಿ ಹೇಳಿದ್ದು, ಕಳೆದ ಎರಡು ದಶಕಗಳಲ್ಲಿ 500ಕ್ಕೂ ಹೆಚ್ಚು ಘಟನೆಗಳು ಇಲ್ಲಿ ಸಂಭವಿಸಿವೆ. ತದನಂತರ ಸ್ಥಾನವನ್ನು ಶಿವಮೊಗ್ಗ (ಶೇ.17.8), ಚಿಕ್ಕಮಗಳೂರು (ಶೇ.17), ಕೊಡಗು (ಶೇ.13.88), ದಕ್ಷಿಣ ಕನ್ನಡ (ಶೇ.9.63), ಹಾಸನ (ಶೇ.8.26) ಮತ್ತು ಉಡುಪಿ (ಶೇ.4) ತುಂಬಿವೆ.
ಭೂಕುಸಿತಕ್ಕೆ ಪ್ರಮುಖ ಕಾರಣ ಏನು?
ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಗಳಿಗೆ ಮೂರು ಪ್ರಮುಖ ಅಂಶಗಳನ್ನು ಈ ಅಧ್ಯಯನ ಕಂಡುಕೊಂಡಿದೆ. ವಾರ್ಷಿಕವಾಗಿ 3,000 ಮಿಮೀಗಿಂತ ಹೆಚ್ಚಿನ ಮಳೆ, ಮಣ್ಣಿನ ರಚನೆ ಮತ್ತು 28 ಡಿಗ್ರಿಗಿಂತ ಹೆಚ್ಚಿನ ಕಡಿದಾದ ಇಳಿಜಾರು ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಶಿರೂರು ಭೂಕುಸಿತ ಪ್ರಕರಣ ಬಳಸಿಕೊಂಡು ಈ ಸಂಶೋಧನೆ ನಡೆದಿದ್ದು, ಆ ಭೂಕುಸಿತದ ಸಂದರ್ಭದಲ್ಲಿ 3,000 ಮಿಮೀಗಿಂತ ಹೆಚ್ಚು ಮಳೆ ದಾಖಲಾಗಿದೆ. ಅಲ್ಲಿ ಜೇಡಿಮಣ್ಣಿರುವುದು ಮತ್ತು 31 ಡಿಗ್ರಿಗಳ ಇಳಿಜಾರಿನ ಪ್ರದೇಶವಿದೆ ಎನ್ನುವುದು ಮಹತ್ವದ ಸಂಗತಿ.
ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ನೈಸರ್ಗಿಕ ಮಳೆ ನೀರಿನ ಹರಿವಿಗೆ ಅಡ್ಡಿಯಾಗಿರುವುದು, ರಾಷ್ಟ್ರೀಯ ಹೆದ್ದಾರಿ-52ರ ವಿಸ್ತರಣೆ ಸೇರಿದಂತೆ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಅಲ್ಲಿ ಕಾರ್ಯಗತಗೊಳಿಸಿರುವುದೇ ಭೂಕುಸಿತಕ್ಕೆ ಕಾರಣವಾಗಿದೆ. ಹಲವು ರಸ್ತೆ ಯೋಜನೆಗಳಲ್ಲಿ ವೈಜ್ಞಾನಿಕ ಗೋಡೆಗಳನ್ನು ನಿರ್ಮಿಸದೆ ಇಳಿಜಾರಿನ ತುದಿಯನ್ನು ಕತ್ತರಿಸಲಾಗಿದೆ. ಹೀಗಾಗಿ ನೀರಿನ ಸೋರಿಕೆಯಾಗಿ ಭೂಕುಸಿತಗಳಾಗುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ತೀವ್ರ ಇಳಿಜಾರು ಗುಡ್ಡಗಳು, ಗುಡ್ಡಗಳ ಬಳಕೆ ಮತ್ತು ಹೆದ್ದಾರಿಗಳ ಬಳಿ ಅವೈಜ್ಞಾನಿಕ ಮಾನವ ಚಟುವಟಿಕೆ ಭೂಕುಸಿತದ ಅಪಾಯವನ್ನು ಮತ್ತಷ್ಟು ಹೆಚ್ಚಿಸಿದ್ದು, ಈಗಲೇ ಎಚ್ಚೆತ್ತುಕೊಂಡು ವೈಜ್ಞಾನಿಕ ಅಭಿವೃದ್ಧಿ ಚಿಂತನೆ ನಡೆಯಬೇಕಿದೆ. ಇಲ್ಲದೇ ಹೋದಲ್ಲಿ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ.
ಇದನ್ನೂ ಓದಿ: ಒಂದೇ ಗ್ರಾಮದ 7 ಕೆರೆಗಳಿಗೆ ನೀರು ತುಂಬಿಸುವ 140 ಕೋಟಿಯ ಯೋಜನೆಗೆ ಸಿಕ್ತು ಚಾಲನೆ: ಅಂತರ್ಜಲಕ್ಕೆ 25 ಕೋಟಿ
ಶಿರೂರು ಗುಡ್ಡ ಕುಸಿತದ ಅಧ್ಯಯನದಿಂದ ಪಶ್ಚಿಮ ಘಟ್ಟಗಳಲ್ಲಿ ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭಾವ್ಯ ಅಪಾಯಗಳನ್ನು ತಿಳಿಸಲಾಗಿದ್ದು, ತಮ್ಮ ತಂಡವು 2050 ಮತ್ತು 2100 ವರ್ಷಗಳ ವರೆಗೆ ಈ ಪ್ರದೇಶದಲ್ಲಿ ಆಗುವ ಅಪಾಯದ ಭೂಕುಸಿತ ವಲಯಗಳನ್ನು ಊಹಿಸಲು ಮಶಿನ್ ಲರ್ನಿಂಗ್ ತಂತ್ರಗಳನ್ನು ಬಳಸಿಕೊಂಡು ಸುಧಾರಿತ ಸಂಶೋಧನೆ ಕೈಗೊಳ್ಳಲು ಯೋಜಿಸಿದೆ. ಮುಂದಿನ ಎರಡು ತಿಂಗಳೊಳಗೆ ಈ ಸಂಶೋಧನೆ ಸಹ ಪೂರ್ಣಗೊಳ್ಳಲಿದೆ ಎಂದು ಐಐಟಿ ಪ್ರಾಧ್ಯಾಪಕ ಪ್ರೊ. ಅಮರನಾಥ ಹೆಗಡೆ ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಹಕ್ಕೆ ಕೊಚ್ಚಿ ಹೋದ ಮನಾಲಿಯ ಐತಿಹಾಸಿಕ ಹೊಟೇಲ್: ಉಳಿದಿದ್ದು ಮುಂಭಾಗದ ಗೋಡೆ ಮಾತ್ರ


