- Home
- Karnataka Districts
- ಶಿವಮೊಗ್ಗ ಶಾದಿ ಮಹಲ್‌ಗಳಲ್ಲಿ ಚಿನ್ನ ಕದಿಯುತ್ತಿದ್ದ ಮಹಿಳೆ ಅರೆಸ್ಟ್; ₹18 ಲಕ್ಷದ ಬಂಗಾರ ಜಪ್ತಿ!
ಶಿವಮೊಗ್ಗ ಶಾದಿ ಮಹಲ್‌ಗಳಲ್ಲಿ ಚಿನ್ನ ಕದಿಯುತ್ತಿದ್ದ ಮಹಿಳೆ ಅರೆಸ್ಟ್; ₹18 ಲಕ್ಷದ ಬಂಗಾರ ಜಪ್ತಿ!
ಶಿವಮೊಗ್ಗದಲ್ಲಿ ಮದುವೆ ಸಮಾರಂಭಗಳಲ್ಲಿ ಅತಿಥಿಗಳ ಸೋಗಿನಲ್ಲಿ ಚಿನ್ನಾಭರಣ ಕದಿಯುತ್ತಿದ್ದ ರುಕ್ಸಾರ್ ಫಿರ್ದೋಸ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಬಂಧನದಿಂದ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ಕು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ರುಕ್ಸಾರ್ ಫಿರ್ದೋಸ್ (30) ಬಂಧನ
ಮದುವೆ ಸಮಾರಂಭಗಳ ಗದ್ದಲವನ್ನೇ ಬಂಡವಾಳ ಮಾಡಿಕೊಂಡು, ಅತಿಥಿಗಳ ಸೋಗಿನಲ್ಲಿ ಬಂದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಚಾಲಾಕಿ ಮಹಿಳೆಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ ಬರೊಬ್ಬರಿ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ನಗರದ ಹೊರವಲಯದ ಸೂಳೆಬೈಲ್ ನಿವಾಸಿ ರುಕ್ಸಾರ್ ಫಿರ್ದೋಸ್ (30) ಬಂಧಿತ ಆರೋಪಿ. ಈಕೆ ನಗರದ ವಿವಿಧ ಶಾದಿ ಮಹಲ್‌ಗಳಲ್ಲಿ ನಡೆಯುತ್ತಿದ್ದ ಮುಸ್ಲಿಂ ವಿವಾಹ ಮಹೋತ್ಸವಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಳು. ಮದುವೆ ಮನೆಗೆ ಅತ್ಯಂತ ಆಪ್ತ ಸಂಬಂಧಿಕಳಂತೆ ಎಂಟ್ರಿ ಕೊಡುತ್ತಿದ್ದ ಈಕೆ, ಅಲ್ಲಿನ ಮಹಿಳೆಯರೊಂದಿಗೆ ನಗುನಗುತ್ತಲೇ ಬೆರೆತು ಅವರ ವಿಶ್ವಾಸ ಗಳಿಸುತ್ತಿದ್ದಳು. ನಂತರ ಸಮಯ ಸಿಕ್ಕಾಗ ಅತಿಥಿಗಳ ಬ್ಯಾಗ್ ಅಥವಾ ಮೈಮೇಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಳು.
ಪೊಲೀಸ್ ಕಾರ್ಯಾಚರಣೆ:
ಕಳೆದ ಕೆಲವು ದಿನಗಳಿಂದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾದಿ ಮಹಲ್‌ಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಇದರಿಂದ ಎಚ್ಚೆತ್ತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತುಂಗಾನಗರ ಠಾಣೆಯ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ಮತ್ತು ಪಿಎಸ್‌ಐ ಗಾದಿಲಿಂಗಪ್ಪ ಗೌಡರ್ ನೇತೃತ್ವದ ತಂಡವು ಸಿಸಿಟಿವಿ ದೃಶ್ಯಾವಳಿ ಹಾಗೂ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ರುಕ್ಸಾರ್ ಫಿರ್ದೋಸ್ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.
18 ಲಕ್ಷ ಮೌಲ್ಯದ ಚಿನ್ನ ಜಪ್ತಿ
ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿ ಮಹಿಳೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಈಕೆಯ ಬಂಧನದಿಂದ ತುಂಗಾನಗರ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರಮುಖ ಕಳ್ಳತನ ಪ್ರಕರಣಗಳು ಸುಖಾಂತ್ಯ ಕಂಡಿವೆ. ಆರೋಪಿಯಿಂದ ಒಟ್ಟು 120 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾರ್ವಜನಿಕರಿಗೆ ಪೊಲೀಸರ ಮನವಿ
ಮದುವೆ ಅಥವಾ ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗರೂಕರಾಗಿರಬೇಕು. ಬೆಲೆಬಾಳುವ ವಸ್ತುಗಳು ಮತ್ತು ಚಿನ್ನಾಭರಣಗಳ ರಕ್ಷಣೆ ಬಗ್ಗೆ ಸ್ವಯಂ ಕಾಳಜಿ ವಹಿಸಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಪೊಲೀಸರ ಈ ಭರ್ಜರಿ ಕಾರ್ಯಾಚರಣೆಗೆ ಶಿವಮೊಗ್ಗ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

