ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ವ್ಯಾಪಕ ಹಾನಿಯಾಗಿದೆ. ಮನಾಲಿಯಲ್ಲಿ ಶೇರ್-ಇ-ಪಂಜಾಬ್ ಹೋಟೆಲ್ ಕೊಚ್ಚಿಹೋಗಿದ್ದು ಮುಂಭಾಗದ ಗೋಡೆ ಮಾತ್ರ ಬಾಕಿ ಉಳಿದಿದೆ.
ಉತ್ತರ ಭಾರತದಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಹಿಮಾಚಲ ಪ್ರದೇಶ, ಜಮ್ಮುಕಾಶ್ಮೀರ, ಪಂಜಾಬ್‌ನಲ್ಲಿ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದಾಗಿ ವೈಷ್ಣೋದೇವಿಯಲ್ಲಿ ಸಂಭವಿಸಿದ ಅನಾಹುತದಲ್ಲಿ ಈಗಾಗಲೇ 30 ಜನ ಪ್ರಾಣ ಬಿಟ್ಟಿದ್ದಾರೆ. ಹಾಗೆಯೇ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಮಳೆಯ ರೌದ್ರಾವತಾರಕ್ಕೆ ಐತಿಹಾಸಿಕ ಶೇರ್-ಇ-ಪಂಜಾಬ್ ಹೊಟೇಲ್ ಕೊಚ್ಚಿ ಹೋಗಿದ್ದು, ಹೊಟೇಲ್‌ನ ಮುಂಭಾಗದ ಗೋಡೆ ಮಾತ್ರ ಉಳಿದುಕೊಂಡಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಐತಿಹಾಸಿಕ ರೆಸ್ಟೋರೆಂಟ್ ಬಿಯಾಸ್ ನದಿ ತೀರದಿಂದ ಕೆಲ ಅಡಿಗಳಷ್ಟು ದೂರದಲ್ಲಿತ್ತು. ಆದರೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಿಂದಾಗಿ ಈ ಸುಪ್ರಸಿದ್ಧ ಹೊಟೇಲೇ ಕೊಚ್ಚಿ ಹೋಗಿದ್ದು, ಮುಂಭಾಗದ ಗೋಡೆ ಮಾತ್ರ ಬಾಕಿ ಉಳಿದಿದೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವೀಡಿಯೋ ನೋಡಿದ ಜನ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಅಂಗಡಿಗಳು ಕೊಚ್ಚಿ ಹೋಗಿವೆ, ಹಲವಾರು ಕಟ್ಟಡಗಳು ಕುಸಿದಿವೆ ಮತ್ತು ಹೆದ್ದಾರಿಗಳು ಅಸ್ತವ್ಯಸ್ತವಾಗಿವೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ಹಾಗೆಯೇ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸಂಭವಿಸಿದ ಮತ್ತೊಂದು ಮಳೆ ಸಂಬಂಧಿ ಘಟನೆಯಲ್ಲಿ ಸಣ್ಣ ಟ್ರಕೊಂದು ರಸ್ತೆಯಲ್ಲಿ ಸಾಗುತ್ತಿದ್ದಾಗಲೇ ನೆಲದಡಿಯ ಭೂಮಿ ಕುಸಿದಿದ್ದು ಟ್ರಕ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ದೃಶ್ಯವೂ ಕೂಡ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಗೆಯೇ ಪ್ರವಾಹ ಪೀಡಿತ ಪಂಜಾಬ್‌ನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಹೆಲಿಕಾಪ್ಟರೊಂದು ಕುಸಿದ ಕಟ್ಟಡದಿಂದ ಜನರನ್ನು ಏರ್ ಲಿಫ್ಟ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಸುದ್ದಿಸಂಸ್ಥೆ ಎಎನ್ಐ ಹಂಚಿಕೊಂಡ ವೀಡಿಯೋದಲ್ಲಿ ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರ್, ಮಳೆಯಿಂದಾಗಿ ಶಿಥಿಲಗೊಂಡ ಸ್ಥಿತಿಯಲ್ಲಿರುವ ಕಟ್ಟಡದ ಮೇಲೆ ಧೈರ್ಯವಾಗಿ ಲ್ಯಾಂಡ್ ಆಗಿ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿದೆ. ಇದಾಗಿ ಕೆಲ ನಿಮಿಷದಲ್ಲಿ ಆ ಕಟ್ಟಡ ಸಂಪೂರ್ಣವಾಗಿ ಕುಸಿದು ಬೀಳುವುದನ್ನು ವೀಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಕೋತಿಯ ಕಿತಾಪತಿಗೆ 28000 ರೂಪಾಯಿ ಕಳೆದುಕೊಂಡ ವ್ಯಕ್ತಿ
ಇದನ್ನೂ ಓದಿ: ಪಿರೇಡ್ಸ್ ಅನುಭವ ಪಡೆದುಕೊಳ್ಳಲು ಹೊರಟ ಯುವಕನಿಗೆ ಆಗಿದ್ದೇನು? ವೇದಿಕೆಯಲ್ಲೇ ಕುಸಿದ ಯುವಕ
