ಬೆಂಗಳೂರು (ಆ.15) :  ಕೆ.ಜಿ.ಹಳ್ಳಿ ಠಾಣೆ ಮೇಲೆ 800 ಜನರ ದಂಡು ಕಟ್ಟಿಕೊಂಡು ದಾಳಿ ಮಾಡಿ ಪೊಲೀಸರ ಕೊಲೆಗೆ ಪ್ರಚೋದಿಸಿದ ಆರೋಪದ ಮೇರೆಗೆ ನಾಗವಾರ ವಾರ್ಡ್‌ ಕಾಂಗ್ರೆಸ್‌ ಪಕ್ಷದ ಬಿಬಿಎಂಪಿ ಸದಸ್ಯೆಯೊಬ್ಬರ ಪತಿ ಹಾಗೂ ಎಸ್‌ಡಿಪಿಐ ಪ್ರಮುಖ ಮುಖಂಡರು ಸೇರಿದಂತೆ ಮತ್ತೆ 60 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

"

ಇದರೊಂದಿಗೆ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 206ಕ್ಕೆ ಏರಿಕೆಯಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿರುವ ಮತ್ತಷ್ಟುಆರೋಪಿಗಳ ಬಂಧನಕ್ಕೆ ಸಿಸಿಬಿ ಕಾರ್ಯಾಚರಣೆ ಮುಂದುವರೆಸಿದೆ. ಗಲಭೆಯ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ ದೃಶ್ಯಾವಳಿ ಆಧರಿಸಿ ಗುರುವಾರ ರಾತ್ರಿ 60 ಮಂದಿಯನ್ನು ಬಂಧಿಸಲಾಗಿದೆ.

ನವೀನ್‌ ತಲೆಗೆ 51 ಲಕ್ಷ ಬಹುಮಾನ ಘೋಷಿಸಿದ್ದವನ ಬಂಧನ...

ಇದರಲ್ಲಿ ನಾಗವಾರದ ಬಿಬಿಎಂಪಿ ಸದಸ್ಯೆ ಇರ್ಷಾದ್‌ ಬೇಗಂ ಪತಿ ಹಾಗೂ ಸ್ಥಳೀಯ ಕಾಂಗ್ರೆಸ್‌ ಮುಖಂಡ ಖಲೀಂ ಪಾಷ ಮತ್ತು ಎಸ್‌ಡಿಪಿಐನ 52 ಮಂದಿ ಕಾರ್ಯಕರ್ತರು ಸೇರಿದ್ದಾರೆ. ಇನ್ನುಳಿದ 7 ಮಂದಿ ಎಸ್‌ಡಿಪಿಐನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿಲ್ಲ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕೆ.ಜಿ.ಹಳ್ಳಿ ಠಾಣೆ ಮೇಲಿನ ದಾಳಿ ಸಂಬಂಧ ಇನ್ಸ್‌ಪೆಕ್ಟರ್‌ ನೀಡಿದ ದೂರು ಆಧರಿಸಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ 7ನೇ ಆರೋಪಿ ಖಲೀಂ ಆಗಿದ್ದಾನೆ. ಉದ್ರಿಕ್ತ ಗುಂಪಿನ ಮುಂದಾಳಾಗಿದ್ದ ಆತ, ತನ್ನ ಸಹಚರರನ್ನು ಸಮಾಧಾನಪಡಿಸದೆ ಗಲಭೆಗೆ ಮತ್ತಷ್ಟುಪ್ರಚೋದನೆ ನೀಡಿದ್ದಾನೆ.ಈ ಸಂಬಂಧ ಪುರಾವೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾಳಿಕೋರರಲ್ಲಿ ಖಲೀಂ ಕೂಡ ಒಬ್ಬ:

‘ಕೆ.ಜಿ.ಹಳ್ಳಿ ಠಾಣೆ ಮುಂದೆ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ವೇಳೆ 600 ರಿಂದ 800 ಜನರು ಏಕಾಏಕಿ ಜಮಾಯಿಸಿದ್ದರು. ನಮ್ಮ ಧರ್ಮಗುರುಗಳ ಬಗ್ಗೆ ಅವಹೇಳನ ಮಾಡಿದ ನವೀನ್‌ನನ್ನು ಸಾಯಿಸದೇ ಬಿಡುವುದಿಲ್ಲ. ಪೊಲೀಸರನ್ನು ಕೊಚ್ಚಿ ಕೊಲೆ ಮಾಡಿ ಎಂದು ಘೋಷಣೆ ಕೂಗಿ ಪ್ರಚೋದಿಸಿದ್ದರು’ ಎಂದು ಕೆ.ಜಿ.ಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಅಜಯ್‌ ಸಾರಥಿ ದೂರಿನ್ವಯ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

ಬೆಂಗಳೂರು ಗಲಭೆ: ಕೊನೆಗೂ ದೂರು ದಾಖಲಿಸಿದ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ...

ಈ ದಾಳಿಯಲ್ಲಿ ಭಾಗಿಯಾಗಿದ್ದ ಗೋವಿಂದಪುರದ ಎಸ್‌ಡಿಪಿಐನ ಅಬ್ಬಾಸ್‌, ಫೈರೋಜ್‌, ಮುಜಾಮಿಲ್‌, ಹಬೀಬ್‌, ಪೀರ್‌ ಪಾಷಾ, ಜಿಯಾ, ಖಲೀಂ ಪಾಷ, ಕರ್ಚೀಫ್‌ ಸಾದಿಕ್‌, ಜಾವೀದ್‌, ಮಜ್ದು, ಸಾದಿಕ್‌, ವಿನೋಬ ನಗರದ ಆಸಿಫ್‌, ಗೋವಿಂದಪುರದ ಸೈಯದ್‌, ಫರ್ಹಾನ್‌, ಮಸೂದ್‌, ಸೈಫ್‌ ಹಾಗೂ ಇತರರು ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಇನ್ಸ್‌ಪೆಕ್ಟರ್‌ ದೂರು ನೀಡಿದ್ದರು. ಅದರನ್ವಯ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಖಲೀಂ ಪಾಷ ಸೇರಿದಂತೆ 60 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.