ರಾಜ್ಯ ಸರ್ಕಾರ ನ್ಯಾ.ನಾಗಮೋಹನ್‌ ದಾಸ್‌ ಅವರ ಏಕವ್ಯಕ್ತಿ ಸಮಿತಿ ರಚಿಸಿ 2023ರ ಆ. 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿದಂತೆ ಹಲವು ಗುತ್ತಿಗೆ ಕಂಪನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು(ಫೆ.14): ಕಳೆದ ನಾಲ್ಕು ವರ್ಷದಲ್ಲಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅವರ ಏಕ ವ್ಯಕ್ತಿ ಸಮಿತಿಗೆ ವರದಿ ಸಲ್ಲಿಸಲು ಹೈಕೋರ್ಟ್‌ ಮತ್ತೆ ಆರು ವಾರಗಳ ಗಡುವು ನೀಡಿ ಆದೇಶಿಸಿದೆ.

ರಾಜ್ಯ ಸರ್ಕಾರ ನ್ಯಾ.ನಾಗಮೋಹನ್‌ ದಾಸ್‌ ಅವರ ಏಕವ್ಯಕ್ತಿ ಸಮಿತಿ ರಚಿಸಿ 2023ರ ಆ. 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿದಂತೆ ಹಲವು ಗುತ್ತಿಗೆ ಕಂಪನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಕೇರಳ ಸಿಎಂ ಪುತ್ರಿ ವೀಣಾ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಎಲ್ಲ ಪಾಲುದಾರರು ವಾದ ಮತ್ತು ಎಲ್ಲ ದಾಖಲೆಗಳನ್ನು ಪರಿಗಣಿಸಿದ ನಂತರ ಸಮಿತಿ 45 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ವರದಿಯನ್ನು ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು 2023ರ ಡಿ.13ರಂದು ನಿರ್ದೇಶಿಸಿದ್ದರೂ ಈವರೆಗೂ ವಿಚಾರಣೆಯೇ ಆರಂಭವಾಗಿಲ್ಲ ಎಂಬ ವಿಷಯ ತಿಳಿದು ಆಶ್ಚರ್ಯಗೊಂಡ ನ್ಯಾಯಪೀಠ, ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ರಾಜ್ಯ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಅವರ ಮನವಿ ಮೇರೆಗೆ ಮತ್ತೆ ಆರು ವಾರ ಕಾಲಾವಾಶ ನೀಡಿತು.

ಮುಂದಿನ ಆರು ವಾರಗಳಲ್ಲಿ ವಿಚಾರಣಾ ಸಮಿತಿ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಇದೇ ಕೊನೆಯ ಬಾರಿಗೆ ಕಾಲಾವಕಾಶ ನೀಡಲಾಗುತ್ತಿದೆ. ಒಂದು ವೇಳೆ‌ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸದೆ ಹೋದರೆ, ಗುತ್ತಿಗೆದಾರರಿಗೆ ಶೇ.100ರಷ್ಟು ಬಿಲ್‌ ಪಾವತಿಸುವಂತೆ ಸರ್ಕಾರಕ್ಕೆ ಆದೇಶಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಏ.2ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆಗೆ ಬಂದಾಗ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಅವರು ಸಮಿತಿ ಇನ್ನೂ ವಿಚಾರಣೆ ಆರಂಭಿಸಿಲ್ಲ ಎಂದು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, 45 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ವರದಿ ನೀಡುವಂತೆ ಹಿಂದೆಯೇ ನಿರ್ದೇಶಿಸಿದ್ದರೂ ಯಾಕೆ ವಿಚಾರಣೆ ಆರಂಭಿಸಿಲ್ಲ ಎಂದು ಪ್ರಶ್ನಿಸಿತು. ಅಡ್ವೋಕೇಟ್‌ ಜನರಲ್‌ ಉತ್ತರಿಸಿ, ಸಮಿತಿಗೆ ಜ.9ರಂದು ದಾಖಲೆ ಸಲ್ಲಿಸಲಾಗಿದೆ. ಎಲ್ಲ ಪ್ರಕರಣಗಳ ದಾಖಲೆ ಸಂಗ್ರಹಿಸಿ, ಸಮಿತಿಗೆ ಒದಗಿಸಲು ವಿಳಂಬವಾಯಿತು ಎಂದು ಸಮಜಾಯಿಸಿ ನೀಡಿದರು.

ಇದರಿಂದ ಮತ್ತಷ್ಟು ಕೋಪಗೊಂಡ ನ್ಯಾಯಮೂರ್ತಿಗಳು, ವಿಚಾರಣೆ ವಿಳಂಬವಾದರೆ ಗುತ್ತಿಗೆದಾರರ ಸ್ಥಿತಿ ಏನಾಗಬೇಕು? ಅವರಿಗೆ ಯಾವಾಗ ಬಿಲ್‌ ಪಾವತಿಸುತ್ತೀರಿ? ವಿಚಾರಣೆ ತಡವಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ಬಿಲ್‌ ಪಾವತಿಸುವಲ್ಲಿ ವಿಳಂಬ ಒಪ್ಪಲಾಗದು. ದಾಖಲೆ ಸಲ್ಲಿಸುವಲ್ಲಿ ಕರ್ತವ್ಯ ಲೋಪ ಎಸಗಿದ ನೋಡಲ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು ಎಂದರು. ಅಂತಿಮವಾಗಿ ಸಮಿತಿ ವಿಚಾರಣೆ ಪೂರ್ಣಗೊಳಿಸಲು ಆರು ವಾರ ಕಾಲಾವಕಾಶ ನೀಡಿ ನ್ಯಾಯಪೀಠ ಆದೇಶಿಸಿತು.

ನಟ ಕಬೀರ್‌ ಬೇಡಿ ಆತ್ಮಕಥನ ಮಾರಾಟಕ್ಕೆ ನಿರ್ಬಂಧ ಇಲ್ಲ: ಹೈಕೋರ್ಟ್ ಆದೇಶ

₹650 ಕೋಟಿ ಪಾವತಿ ಬಾಕಿ: ಕೋರ್ಟ್‌ ಅಚ್ಚರಿ

ಮತ್ತೊಂದು ಪ್ರಕರಣದಲ್ಲಿ ಕಲಬುರಗಿಯ ಮೆರ್ಸಸ್‌ ಎನ್‌.ಡಿ. ವಡ್ಡರ್‌ ಆ್ಯಂಡ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆದ ಕ್ಲಾಸ್‌-1 ಗುತ್ತಿಗೆದಾರ ನಾಗಪ್ಪ ದೇವಪ್ಪ ವಡ್ಡರ್‌ ಪರ ವಕೀಲ ಬಿ.ಆರ್. ಪ್ರಸನ್ನ ಹಾಜರಾಗಿ, ನಾರಾಯಣಪುರ ಅಣೆಕಟ್ಟಿನ ಕಾಮಗಾರಿ ಬಾಕಿ 650 ಕೋಟಿ ರು. ಪಾವತಿಯಾಗಿಲ್ಲ ಎಂದರು.

ಅದಕ್ಕೆ ಅಚ್ಚರಿಗೊಂಡ ನ್ಯಾಯಮೂರ್ತಿಗಳು, ಇಷ್ಟೊಂದು ಮೊತ್ತದ ಕಾಮಗಾರಿ ಯಾವುದು ಎಂದು ಪ್ರಶ್ನಿಸಿದರಲ್ಲದೆ, ಮುಂದಿನ ವಿಚಾರಣೆ ವೇಳೆ ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ಪರ ವಕೀಲರು ಈ ಕುರಿತು ವಿವರಣೆ ಸಲ್ಲಿಸಬೇಕು ಎಂದು ಸೂಚಿಸಿ, ಆ ಅರ್ಜಿ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದರು.