ಇಬ್ಬರು ವೈದ್ಯರು ಸೇರಿ ಶಿವಮೊಗ್ಗದಲ್ಲಿ ಆರು ಮಂದಿಗೆ ಕೊರೋನಾ
ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕದಿಂದಾಗಿ ಇಬ್ಬರಿಗೆ ಕೊರೋನಾ ತಗುಲಿದೆ. ಇನ್ನುಳಿದ ನಾಲ್ಕು ಜನರಿಗೆ ಹೇಗೆ ಸೋಂಕು ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಆರು ಮಂದಿ ಸೋಂಕಿತರಲ್ಲಿ ಮೂವರಿಗೆ ಶೀತ, ಕೆಮ್ಮು, ಜ್ವರದ ಲಕ್ಷಣ ಕಾಣಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.27): ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರು ಸೇರಿದಂತೆ 6 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 129 ಕ್ಕೆ ಏರಿಕೆಯಾಗಿದೆ.
ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕದಿಂದಾಗಿ ಇಬ್ಬರಿಗೆ ಕೊರೋನಾ ತಗುಲಿದೆ. ಇನ್ನುಳಿದ ನಾಲ್ಕು ಜನರಿಗೆ ಹೇಗೆ ಸೋಂಕು ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಆರು ಮಂದಿ ಸೋಂಕಿತರಲ್ಲಿ ಮೂವರಿಗೆ ಶೀತ, ಕೆಮ್ಮು, ಜ್ವರದ ಲಕ್ಷಣ ಕಾಣಿಸಿಕೊಂಡಿದೆ. 40 ವರ್ಷದ ಪುರುಷ (ಪಿ-10829) ಹಾಗೂ 20 ವರ್ಷದ ಯುವತಿ (ಪಿ-10831)ಗೆ ಪಿ-9546 ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನು 35 ವರ್ಷದ ಯುವಕ (ಪಿ-10826), 38 ವರ್ಷದ ಪುರುಷ (ಪಿ-10828), 30 ವರ್ಷದ ಯುವತಿ (ಪಿ-10830), 45 ವರ್ಷದ ಪುರುಷ ( ಪಿ-10827) ಇವರಿಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ.
ಸೋಂಕಿತ 4 ಮಂದಿಗೆ ನಿಗದಿತ ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವೈದ್ಯರಿಬ್ಬರಿಗೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯರಿಗೆ ಸೋಂಕು:
ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಖ್ಯಾತ ಹೃದಯರೋಗ ತಜ್ಞ ವೈದ್ಯ ಮತ್ತು ಅನಸ್ತೇಶಿಯಾ ತಜ್ಞ ವೈದ್ಯೆಗೆ ಸೋಂಕು ತಗುಲಿರುವುದು ಆತಂಕ ಸೃಷ್ಟಿಸಿದೆ. ಇಬ್ಬರು ವೈದ್ಯರು ವಾಸವಿದ್ದ ಶಿವಮೊಗ್ಗದ ಚೆನ್ನಪ್ಪ ಲೇಔಟ್ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆಯ ಕೆಲ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಉಳ್ಳಾಲದಲ್ಲಿ ಸಮುದಾಯಿಕ ಸೋಂಕು, ಎಲ್ರೂ ಪರೀಕ್ಷೆ ಮಾಡಿಸ್ಕೊಳ್ಳಿ ಎಂದ ಸಚಿವ
ಭದ್ರಾವತಿಯ ಬಸ್ ಏಜೆಂಟ್ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಈತ ಹಲವಾರು ಕಡೆಗಳಲ್ಲಿ ಸಂಚರಿಸಿದ್ದು ಈತನ ಪ್ರಾಥಮಿಕ ಸಂಪರ್ಕ ಹೊಂದಿರುವ ಎಂಟು ಜನರಿಗೆ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೇ ಶಿಕಾರಿಪುರದ ಉಸಿರಾಟ ಮತ್ತು ಹಾರ್ಟ್ ಅಟ್ಯಾಕ್ ಸಮಸ್ಯೆಯಿಂದ ಸಾವನ್ನಪ್ಪಿ ನಂತರ ಸೋಂಕು ದೃಢಪಟ್ಟಿದ್ದ ವೃದ್ಧೆಯ ಮಗ ಮತ್ತು ಮೊಮ್ಮಗನಿಗೂ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ 129 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಅವರಲ್ಲಿ ತೊಂಬತ್ತು ಮಂದಿ ಗುಣಮುಖರಾಗಿದ್ದಾರೆ. 31 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.
ಕೊರೋನೊ ಸೋಂಕು
ಹೊಳೆಹೊನ್ನೂರು: ಅರಬಿಳಚಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೋರೊನಾ ಪಾಸಿಟಿವ್ ದೃಢಪಟ್ಟಿದೆ. 8 ದಿನಗಳ ಹಿಂದೆ ದುಬೈನಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದ 23 ವರ್ಷದ ಯುವಕನಿಗೆ ಸೊಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಗ್ರಾಮದ ತುಂಬಾ ಸುತ್ತಾಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಹೊಳೆಹೊನ್ನೂರು, ಕೈಮರದಲ್ಲಿನ ಸ್ನೇಹಿತರನ್ನು ಹಾಗೂ ಸಂಬಂಧಿಕರನ್ನು ಭೇಟಿ ಮಾಡಿದ್ದನೆಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ಸೊಂಕಿತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಂಕಿತನ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ. ಶುಕ್ರವಾರ ಸಂಜೆಯಿಂದ ಯುವಕನ ಮನೆಯ ಬೀದಿಯನ್ನು ಸೀಲ್ಡೌನ್ ಮಾಡಲಾಗಿದೆ.