ಮಂಗಳೂರು: ಸಮುದ್ರದ ಮಧ್ಯೆ ನೌಕಾ ಪಡೆಯ ಮೈನವಿರೇಳಿಸುವ ಸಾಮರ್ಥ್ಯ ಪ್ರದರ್ಶನ
ನವಮಂಗಳೂರು ಬಂದರಿನಿಂದ 40 ನಾಟಿಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಯಿತು. ಸಮುದ್ರದಲ್ಲಿ ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಕಾರ್ಯಾಚರಿಸಲಾಗುತ್ತಿದೆ ಎಂಬುದನ್ನು ತಟರಕ್ಷಣಾ ಪಡೆ ಸಿಬ್ಬಂದಿ ಪ್ರದರ್ಶಿಸಿದರು.
ಮಂಗಳೂರು(ಫೆ.24): ಅರಬ್ಬಿ ಸಮುದ್ರದಲ್ಲಿ ಕರಾವಳಿಗೆ ಆಗಮಿಸಿದ ಉಗ್ರರನ್ನು ಭಾರತೀಯ ತಟರಕ್ಷಣಾ ಪಡೆ(ಕೋಸ್ಟ್ ಗಾರ್ಡ್) ಕಾರ್ಯಾಚರಣೆ ನಡೆಸಿ ಸದೆಬಡಿದಿದೆ. ಇದೇ ವೇಳೆ ಸಮುದ್ರಕ್ಕೆ ಬಿದ್ದ ಮೀನುಗಾರರನ್ನು ಏರ್ ಲಿಫ್ಟ್ ಮಾಡಿದ್ದಲ್ಲದೆ, ಬೆಂಕಿ ಹತ್ತಿಕೊಂಡ ಬೋಟ್‌ನ್ನೂ ಸಕಾಲಿಕ ಕಾರ್ಯಾಚರಣೆ ಮೂಲಕ ರಕ್ಷಣೆ. ಇದು ನಿಜವಾಗಿ ನಡೆದ ಘಟನೆಯಲ್ಲ, ಭಾರತೀಯ ಕರಾವಳಿ ರಕ್ಷಣಾ ಪಡೆಯ 48ನೇ ಸಂಸ್ಥಾಪನಾ ದಿನದ ಅಂಗವಾಗಿ ಶುಕ್ರವಾರ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ನಡೆದ ಅಣಕು ಕಾರ್ಯಾಚರಣೆಯ ಸನ್ನಿವೇಶ.
ನವಮಂಗಳೂರು ಬಂದರಿನಿಂದ 40 ನಾಟಿಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಯಿತು. ಸಮುದ್ರದಲ್ಲಿ ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಕಾರ್ಯಾಚರಿಸಲಾಗುತ್ತಿದೆ ಎಂಬುದನ್ನು ತಟರಕ್ಷಣಾ ಪಡೆ ಸಿಬ್ಬಂದಿ ಪ್ರದರ್ಶಿಸಿದರು.
ವೇಣೂರು ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಇಂದಿನಿಂದ ಪ್ರಾರಂಭ
2 ಇಂಟರ್ ಸೆಪ್ಟರ್, 2 ಡ್ರಾನಿಯರ್ಸ್, ಒಂದು ಅತ್ಯಾಧುನಿಕ ಹೆಲಿಕಾಪ್ಟರ್, 6 ಹಡಗುಗಳು, ಒಂದು ಕಡಲಾಚೆಯ ಗಸ್ತು ಹಡಗು, 3 ವೇಗದ ಗಸ್ತು ನೌಕೆ (ಫಾಸ್ಟ್ ಪ್ಯಾಟ್ರಲ್ ವೆಸೆಲ್- ಎಫ್‌ಪಿವಿ)ಗಳು ಕೋಸ್ಟ್ ಗಾರ್ಡ್ ಅಧಿಕಾರಿಗಳ ಮಾರ್ಗದರ್ಶನದ ಕಾರ್ಯಾಚರಣೆಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದವು.
ಕೋಸ್ಟ್‌ಗಾರ್ಡ್‌ನ ವಿಕ್ರಂ ನೌಕೆಯಲ್ಲಿ ರಾಜ್ಯಪಾಲರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ.ಆನಂದ್, ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, ಜಿಲ್ಲಾ ಎಸ್ಪಿ ರಿಷ್ಯಂತ್ ಹಾಗೂ ಮಾಧ್ಯಮ ಪ್ರತಿನಿಧಿಗಳಿದ್ದರು. ಇನ್ನೊಂದು ನೌಕೆಯನಲ್ಲಿ ಆಹ್ವಾನಿತ ಸಾರ್ವಜನಿಕರು ನೌಕಾ ಪಡೆಯ ಸಿಬ್ಬಂದಿಯ ವೈವಿಧ್ಯಮಯ, ಮೈ ನವಿರೇಳಿಸುವ ಅಣಕು ಕಾರ್ಯಾಚರಣೆ ವೀಕ್ಷಿಸಿದರು.
ಸಮುದ್ರದಲ್ಲಿ ನೌಕೆಗಳು ಅವಘಡಕ್ಕೆ ಒಳಗಾದರೆ ಅದರ ರಕ್ಷಣಾ ಕಾರ್ಯಾಚರಣೆ, ಸಂತ್ರಸ್ತರನ್ನು ರಕ್ಷಿಸುವುದು, ಶತ್ರು ಪಡೆಗಳಿಂದ ದಾಳಿಯಾದರೆ ಸಮುದ್ರದ ನಡುವೆ ರಕ್ಷಣಾ ನೌಕೆಗಳು ಮರು ದಾಳಿ ನಡೆಸುವುದು, ಶತ್ರು ವಿಮಾನದ ಮೇಲೆ ದಾಳಿ ನಡೆಸುವ ಪ್ರದರ್ಶನ ಮೈ ನವಿರೇಳಿಸುವಂತಿತ್ತು.
ತುರ್ತು ಸಂದರ್ಭದಲ್ಲಿ ರಕ್ಷಣಾ ಪಡೆಯ ನೌಕೆಯಿಂದ ಸಣ್ಣ ಬೋಟನ್ನು ಸಮುದ್ರಕ್ಕೆ ಇಳಿಸಿ, ಆ ಬೋಟ್‌ಗಳು ಸಮರೋಪಾದಿಯಲ್ಲಿ ಧಾವಿಸಿ ಸಂತ್ರಸ್ತರ ರಕ್ಷಣೆ ಮಾಡುವ ಕಸರತ್ತು, ಸಮುದ್ರದ ನಡುವೆ ಯಾವುದಾದರೂ ಬೋಟ್ ಅವಘಡಕ್ಕೀಡಾಗಿ ಅಗ್ನಿ ಅನಾಹುತ ಸಂಭವಿಸಿದರೆ ರಕ್ಷಣಾ ಪಡೆಯ ನೌಕೆಯಿಂದ ಅಗ್ನಿ ನಂದಿಸುವ ಕಾರ್ಯಾಚರಣೆ ಪ್ರದರ್ಶಿಸಲಾಯಿತು. ಡಾರ್ನಿಯರ್ ವಿಮಾನಗಳು ಹಾಗೂ ಎರಡು ಹೆಲಿಕಾಪ್ಟರ್‌ಗಳ ಗಸ್ತು ಕಾರ್ಯಾಚರಣೆಯೂ ನಡೆಯಿತು. ಸುಮಾರು ಮೂರು ಗಂಟೆ ಕಾಲ ನಡೆದ ಕಾರ್ಯಾಚರಣೆಯ ಕೊನೆಗೆ ತಟರಕ್ಷಣಾ ಪಡೆಯ ನೌಕೆಗಳು ರಾಜ್ಯಪಾಲರಿಗೆ ಗೌರವ ಸೆಲ್ಯೂಟ್ ನೀಡಿ ನಿರ್ಗಮಿಸಿದವು. ಇದಕ್ಕೂ ಮೊದಲು ಕೋಸ್ಟ್‌ಗಾರ್ಡ್ ವಿಕ್ರಂ ನೌಕೆಗೆ ಆಗಮಿಸಿದ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಕರ್ನಾಟಕ ಕರಾವಳಿ ರಕ್ಷಣಾ ಪಡೆಯ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ, ಕಮಾಂಡಿಂಗ್ ಆಫೀಸರ್ ಅಶೋಕ್ ಕುಮಾರ್ ಭಾಮಾ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ರಕ್ಷಣಾ ಪಡೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕೋಸ್ಟ್‌ಗಾರ್ಡ್ ಸಾಹಸಮಯ ಅನುಭವ
‘ನಾನು ಕಳೆದ 30 ವರ್ಷಗಳಿಂದ ಕೋಸ್ಟ್‌ಗಾರ್ಡ್‌ನಲ್ಲಿ ಸೇವೆಯಲ್ಲಿದ್ದು, ಪಾರಾದೀಪ್, ವಿಶಾಖಪಟ್ಟಣಂ, ಗಾಂಧಿನಗರ ಮೊದಲಾದ ಕಡೆ ಸೇವೆ ಸಲ್ಲಿಸಿ ಇದೀಗ ಕರ್ನಾಟಕ- ಮಂಗಳೂರು ವಿಭಾಗದಲ್ಲಿದ್ದೇನೆ. ಮುಂದೆ ಗೋವಾಕ್ಕೆ ಹೋಗಲಿದ್ದೇನೆ. ಕೋಸ್ಟ್‌ಗಾರ್ಡ್‌ನಲ್ಲಿ ಕಾರ್ಯ ನಿರ್ವಹಿಸುವುದೆಂದರೆ ಅದೊಂದು ಸಾಹಸಮಯ ಅನುಭವ ಮಾತ್ರವಲ್ಲದೆ ಪ್ರಕೃತಿಯೊಂದಿಗಿನ ಒಡನಾಟ’ ಎಂದು ಕೋಸ್ಟ್‌ಗಾರ್ಡ್‌ನಲ್ಲಿ ಇನ್ಸ್‌ಪೆಕ್ಟರ್ ದರ್ಜೆಯ ಪ್ರಧಾನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಹಾರ ಮೂಲದ ಅಧಿಕಾರಿಯೊಬ್ಬರು ಅನಿಸಿಕೆ ವ್ಯಕ್ತಪಡಿಸಿದರು.
ಕೋಲ ಆಯ್ತು, ಈಗ ಯಕ್ಷಗಾನ…. ಶ್ರೀ ಗೌರಿ ಸೀರಿಯಲ್‌ಗೂ ತಟ್ಟಿದ ಅಸಮಧಾನದ ಬಿಸಿ
ಮಳೆಗಾಲದ ಸಂದರ್ಭ ಕೋಸ್ಟ್‌ಗಾರ್ಡ್‌ನ ಹಡಗಿನಲ್ಲಿ ಕಾರ್ಯಾಚರಣೆಯಲ್ಲಿರುವುದು ವಿಶೇಷ ಅನುಭವ ನೀಡಿದೆ. ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಕೋಸ್ಟ್‌ಗಾರ್ಡ್‌ನ ಸಿಬ್ಬಂದಿ ಆಗಿರುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಒಡಿಶಾ ಮೂಲದ ಸಿಬ್ಬಂದಿ.
‘ಕೋಸ್ಟ್‌ಗಾರ್ಡ್‌ನ ಈ ಅದ್ಭುತ ಸಾಹಸಮಯ ಕವಾಯತು ನೋಡುವ ಮೊದಲ ಅವಕಾಶ ನನ್ನದಾಯಿತು. ದೇಶದ ಕಡಲು ರಕ್ಷಣೆಯಲ್ಲಿ ಕೋಸ್ಟ್‌ಗಾರ್ಡ್ ಪಾತ್ರ ಬಹುಮುಖ್ಯವಾಗಿದ್ದು, ನಮ್ಮ ಕೋಸ್ಟ್‌ಗಾರ್ಡ್ ನಮ್ಮ ಹೆಮ್ಮೆ ಎಂದು ಪಂಜಾಬ್‌ನ ಅಮಿತ್ ಶರ್ಮಾ ತಿಳಿಸಿದ್ದಾರೆ.