ಕೋಲ ಆಯ್ತು, ಈಗ ಯಕ್ಷಗಾನ…. ಶ್ರೀ ಗೌರಿ ಸೀರಿಯಲ್‌ಗೂ ತಟ್ಟಿದ ಅಸಮಧಾನದ ಬಿಸಿ
ತುಳುನಾಡಿನ ಸಂಸ್ಕೃತಿ, ಆಚರಣೆ ಸದ್ಯ ಎಲ್ಲೆಡೆ ಸುದ್ದಿಯಾಗುತ್ತಿರುವ ವಿಷಯ. ಕಾಂತಾರ ಸಿನಿಮಾ ಬಳಿಕ ಇದು ಮತ್ತಷ್ಟು ಹೆಚ್ಚಿದೆ. ಸೀರಿಯಲ್ ಗಳಲ್ಲೂ ಭೂತ ಕೋಲ ಬಂದುಬಿಟ್ಟಿದೆ. ಇದೀಗ ಶ್ರೀ ಗೌರಿ ಸೀರಿಯಲ್ ನಲ್ಲಿ ಯಕ್ಷಗಾನದ ಪ್ರೋಮೊ ಬಿಟ್ಟಿದ್ದು ಅದಕ್ಕೂ ಬಿಸಿ ತಟ್ಟಿದೆ.
ಕಿರುತೆರೆಯ ಸೀರಿಯಲ್ಸ್ ವಿವಿಧ ಕಥಾ ಹಂದರವನ್ನು ಇಟ್ಟುಕೊಂಡು ಮಾಡಲಾಗುತ್ತದೆ. ಶ್ರೀ ಗೌರಿ (Shree Gouri) ಧಾರಾವಾಹಿ ಕರಾವಳಿಯ ಸೊಗಡಿನ ಕಥೆ ಎಳೆಯನ್ನು ಇಟ್ಟು ಕೊಂಡು ಮಾಡಲಾಗಿದೆ. ಇತ್ತೀಚೆಗಷ್ಟೆ ಶುರುವಾದ ಈ ಸೀರಿಯಲ್ ಸದ್ಯ ಜನರ ಮೆಚ್ಚುಗೆ ಪಡೆದುಕೊಂಡಿದೆ.
ಕಾಂತಾರ ಸಿನಿಮಾದಲ್ಲಿ ನಾಯಕನ ಎಂಟ್ರಿ ಆದದ್ದು, ತುಳುನಾಡಿನ ಸಾಂಸ್ಕೃತಿಕ ಕಲೆ ಕಂಬಳದ (Kambala) ಮೂಲಕ, ಅದೇ ರೀತಿ ಶ್ರೀಗೌರಿ ಸೀರಿಯಲ್ ನಲ್ಲೂ ಸಹ ನಾಯಕ ಅಪ್ಪುವಿನ ಎಂಟ್ರಿ ಕಂಬಳದ ಮೂಲಕವೇ ಆಗಿ, ಬಹಳಷ್ಟು ಸದ್ದು ಮಾಡಿತ್ತು.
ಇದೀಗ ಶ್ರೀ ಗೌರಿ ಧಾರಾವಾಹಿಯಲ್ಲಿ ದಕ್ಷಿಣ ಕನ್ನಡದ ಗಂಡು ಕಲೆ ಎಂದೇ ಪ್ರಸಿದ್ದಿ ಪಡೆದಿರುವ ಯಕ್ಷಗಾನವನ್ನು (Yakshagana) ಪ್ರಸ್ತುತಿ ಪಡಿಸಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ವಲ್ಪ ಮಟ್ಟಿಗೆ ಜನರಲ್ಲಿ ಅಸಮಧಾನದ ಹೊಗೆ ಎದ್ದಿದೆ.
ಕೆಲವು ದಿನಗಳ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನದ ಮೀಡಿಯಂ (Kaveri Kannada Medium) ಸೀರಿಯಲ್ ನಲ್ಲಿ ಭೂತ ಕೋಲ ಅಂದರೆ ದೈವಾರಾಧನೆಯ ದೃಶ್ಯ ತೋರಿಸಿದ್ದಕ್ಕಾಗಿ, ತುಳುನಾಡಿನ ಜನ ಅಸಮಧಾನ ಹೊರ ಹಾಕಿದ್ದು ದೂರು ಸಹ ದಾಖಲಾಗಿತ್ತು.
ಇದೀಗ ಶ್ರೀ ಗೌರಿಯಲ್ಲಿ ದೇವಿ ಮಹಾತ್ಮೆ ಯಕ್ಷಗಾನದ ಮಹಿಷಿ ಮಗನೇ ಮಹಿಷಾ ಎಂದು ಕರೆಯುವಾಗ ಮಹಿಷಾಸುರನ (Mahishasura) ಆಗಮನದ ದೃಶ್ಯವನ್ನು ತೋರಿಸಲಾಗಿತ್ತು. ಇದಕ್ಕೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ತುಳುನಾಡಿನ ಆಚರಣೆಯನ್ನು ಹೀಗೆ ತೋರಿಸಬಾರದು ಎಂದರೆ, ಮತ್ತೆ ಕೆಲವರು ಇದೊಂದು ಕಲೆ ಚೆನ್ನಾಗಿ ತೋರಿಸಿದರೆ ತಪ್ಪಿಲ್ಲ ಎಂದಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ ಸುವರ್ಣ ಚಾನೆಲ್ ನಲ್ಲಿ ಕೋಲ ತಗೊಂಡ್ರು, ಕಲರ್ಸ್ ಅವ್ರು ಯಕ್ಷಗಾನ ಒಟ್ಟಲ್ಲಿ ಕಾಂಪಿಟೇಷನ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಈ ಸೀರಿಯಲ್ ಗೆ ಯಕ್ಷಗಾನ , ಕಂಬಳ ಎಲ್ಲಾ ತುಳುನಾಡಿನದ್ದೇ ಬೇಕು, ಆದ್ರೆ ಭಾಷೆ ಮಾತ್ರ ಬೇರೆ ಭಾಷೆ ಎಂದಿದ್ದಾರೆ.
ಮತ್ತೊಬ್ಬರು ನಮ್ಮ ತುಳುನಾಡಿನ ಯಕ್ಷಗಾನಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ಅದನ್ನು ಸೀರಿಯಲ್ ನಲ್ಲಿ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದರೆ ಸಾಕು ಎಂದರೆ ಇನ್ನೊಬ್ಬರು ಯಕ್ಷಗಾನ ನಮ್ಮ ಕಲೆ, ದೈವಾರಧನೆ ನಮ್ಮ ಆಚರಣೆ ನಂಬಿಕೆ(belief) . ಯಕ್ಷಗಾನವನ್ನು ಯಕ್ಷಗಾನದ ರೀತಿಯಲ್ಲೇ ತೋರಿಸಿದರೆ ನಮ್ಮ ಆಕ್ಷೇಪ ಇಲ್ಲ ಎಂದಿದ್ದಾರೆ.
ಮತ್ತೊಬ್ಬರು ಸಾಕು ನಿಮ್ಮ ನಾಟಕ, ಕಂಬಳ, ಯಕ್ಷಗಾನ, ದೈವಾರಾಧನೆ ಯಾವ್ದು ಮಾಡ್ಬಾರ್ದು ಒಬ್ರು ಮಾಡಿದ್ರೆ ಎಲ್ಲರೂ ಶುರು ಮಾಡ್ತಾರೆ ಎಂದು ಕಿಡಿ ಕಾರಿದ್ದಾರೆ. ಮಗದೊಬ್ಬರು ದೈವಾರಾಧನೆ ಅನ್ನೋದು ಒಂದು ನಮ್ಮ ಆಚರಣೆ ಅದನ್ನು ಯಾರೂ ಮಾಡಬೇಕು ಅವರೇ ಮಾಡಿದರೆ ಒಳ್ಳೆಯದು. ಆದರೆ ಯಕ್ಷಗಾನ ನಮ್ಮ ಕಲೆ ಅದನ್ನ ಮಾಡಿದ್ರೆ ತಪ್ಪಿಲ್ಲ ಎಂದಿದ್ದಾರೆ.