ತುಮಕೂರು(ಆ.14): ನಗರದ ವಿವಿಧೆಡೆ ಜನರಿಗೆ ತೊಂದರೆ ನೀಡುತ್ತಿದ್ದ ಕೋತಿಗಳನ್ನು ಹಿಡಿದು ನಗರದಿಂದ ಹೊರ ಸಾಗಿಸುವ ಕಾರ್ಯಕ್ಕೆ ನಗರಪಾಲಿಕೆ ಮುಂದಾಗಿದ್ದು, ಮಂಗಳವಾರ 15ನೇ ವಾರ್ಡಿಗೆ ಸೇರಿದ ಗಾಂಧಿನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅತ್ಯಂತ ಸುರಕ್ಷಿತ ರೀತಿಯಲ್ಲಿ ಮಂಗಗಳನ್ನು ಹಿಡಿದು ಹೊರ ಸಾಗಿಸಲಾಯಿತು.

45 ಕೋತಿಗಳು ಸೆರೆ:

ಕಳೆದ ಮೂರು ದಿನಗಳಿಂದ ನಗರದ ಸುಮಾರು 8 ವಾರ್ಡ್‌ಗಳಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ ಮಂಗಗಳನ್ನು ಪಾಲಿಕೆಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ನಾಗೇಶ್‌ ಅವರ ಮಾರ್ಗದರ್ಶನದಂತೆ ಮಂಡ್ಯ ಜಿಲ್ಲೆಯ ಜಕ್ರಯ್ಯ ಎಂಬುವವರ ನೇತೃತ್ವದಲ್ಲಿ ಐದಾರು ಜನರ ತಂಡ, ಬೋನುಗಳನ್ನು ನಿರ್ಮಿಸಿ, ಅದರಲ್ಲಿ ಆಹಾರದ ತುಂಡುಗಳನ್ನಿರಿಸಿ, ಅದನ್ನು ತಿನ್ನಲು ಬರುವ ಮಂಗಗಳನ್ನು ಹಿಡಿದು, ಹತ್ತಿರದ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುವ ಕೆಲಸ ಮಾಡುತ್ತಿದ್ದಾರೆ. ಈವರೆಗೆ 45 ಮಂಗಗಳನ್ನು ಹಿಡಿದು ಸಾಗಿಸಲಾಗಿದೆ.

ಪಾಲಿಕೆ ಸದಸ್ಯೆ ಭೇಟಿ, ಪರಿಶೀಲನೆ:

ಗಾಂಧಿನಗರದಲ್ಲಿ ಮಂಗಗಳನ್ನು ಸೆರೆ ಹಿಡಿಯುವ ವೇಳೆ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ ಪಾಲಿಕೆಯ 15ನೇ ವಾರ್ಡಿನ ಸದಸ್ಯೆ ಗಿರಿಜಾ ಧನಿಯಕುಮಾರ್‌, ಮುಂದಿನ 2-3 ದಿನಗಳಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ ಮಂಗಳನ್ನು ಹಿಡಿದು ಕಾಡಿಗೆ ಬಿಡುವುದರಿಂದ, ಜನರ ವಾಯುವಿಹಾರಕ್ಕೆ, ಮನೆಗೆ ಅಗತ್ಯ ವಸ್ತುಗಳನ್ನು ತರಲು ಅಡ್ಡಿಪಡಿಸುತ್ತಿದ್ದ ಮಂಗಗಳಿಂದ ಜನರಿಗೆ ಮುಕ್ತಿ ಸಿಗಲಿದೆ ಎಂದರು.

ನೆರೆ ಸಂತ್ರಸ್ತರಿಗಾಗಿ ಜೋಳಿಗೆ ಹಿಡಿದ ಸಿದ್ದಲಿಂಗ ಸ್ವಾಮೀಜಿ

ಕೆಲ ಪ್ರದೇಶಗಳಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು, ಮನೆಗೆ ಹಾಲು, ಮೊಸರು, ಹಣ್ಣು, ತರಕಾರಿ ಕೊಂಡು ತೆರಳುತಿದ್ದು, ಏಕಾಎಕಿ ದಾಳಿ ನಡೆಸಿ, ಕೈಯಲ್ಲಿದ್ದ ಬ್ಯಾಗ್‌ ಕಸಿದು ಅಗತ್ಯ ವಸ್ತುಗಳನ್ನು ಹಾಳು ಮಾಡುತಿದ್ದವು. ಕೆಲವೊಮ್ಮೆ ಪ್ರತಿರೋಧ ತೋರಿದರೆ ಜನರ ಮೈಮೇಲೆ ಬಿದ್ದು, ಪರಚಿ ಗಾಯಗೊಳಿಸಿರುವ ಉದಾಹರಣೆಗಳು ಇವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಾಕಷ್ಟುದೂರುಗಳ ಬಂದ ಕಾರಣ ಪಾಲಿಕೆಯಿಂದ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೋತಿಗಳಿಗೆ ತೊಂದರೆ ಮಾಡಲ್ಲ:

ಕೋತಿಗಳಿಗೆ ದೈಹಿಕವಾಗಿ ತೊಂದರೆ ನೀಡದೆ, ಅತ್ಯಂತ ವೈಜ್ಞಾನಿಕವಾಗಿ ಮಂಗಗಳನ್ನು ಹಿಡಿದು ಸಾಗಿಸುವ ಕಾರ್ಯ ಜರುಗಿದೆ ಎಂದು ಗಿರಿಜಾ ಧನಿಯಕುಮಾರ್‌ ತಿಳಿಸಿದರು. ಈ ವೇಳೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್‌, 15ನೇ ವಾರ್ಡಿನ ನಾಗರಿಕರಾದ ನಂಜುಂಡಸ್ವಾಮಿ, ದರ್ಶನ್‌, ನಾಗರತ್ನಮ್ಮ, ರಹಮತ್ತುಲ್ಲಾ ಉಪಸ್ಥಿತರಿದ್ದರು.