ತುಮಕೂರು(ಆ.13): ಜಲಪ್ರಳಯದಿಂದ ಉತ್ತರ ಕರ್ನಾಟಕ ಸೇರಿ 17 ಜಿಲ್ಲೆಯ ಜನರು ಸಂತ್ರಸ್ತರಾಗಿದ್ದು, ಇವರ ನೆರವಿಗೆ ಧಾವಿಸಿರುವ ಸಿದ್ಧಗಂಗಾ ಮಠಾಧ್ಯಕ್ಷ ಡಾ. ಸಿದ್ದಲಿಂಗ ಸ್ವಾಮೀಜಿ, ಪಾವಗಡದ ಜಪಾನಂದ ಶ್ರೀಗಳು ಜೋಳಿಗೆ ಹಿಡಿಯುವುದರೊಂದಿಗೆ ದವಸ-ಧಾನ್ಯ ಸಂಗ್ರಹಿಸಿ ಸಂತ್ರಸ್ತರಿಗೆ ರವಾನಿಸಿದ್ದಾರೆ.

ಬೆಳಗ್ಗೆ 10.45ಕ್ಕೆ ತುಮಕೂರಿನ ಟೌನ್‌ಹಾಲ್‌ ಸರ್ಕಲ್‌ನಿಂದ ಆರಂಭವಾದ ಪಾದಯಾತ್ರೆ ಗಾಯಿತ್ರಿ ಚಿತ್ರಮಂದಿರದ ಮೂಲಕ ಎಂ.ಜಿ. ರಸ್ತೆ ಮಾರ್ಗವಾಗಿ ಮಂಡಿಪೇಟೆಯಲ್ಲಿ ಮಧ್ಯಾಹ್ನ 2.30 ಕ್ಕೆ ಮುಕ್ತಾಯವಾಯಿತು.ಚೆಕ್‌ ಅಥವಾ ನಗದು ಸ್ವೀಕರಿಸದೆ ಬರೀ ಆಹಾರ ಪದಾರ್ಥ ಮತ್ತು ಮಾತ್ರ ಸ್ವೀಕರಿಸಲಾಯಿತು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಪಾನಂದ ಶ್ರೀಗಳು ಚರ್ಚ್‌ ಸರ್ಕಲ್‌ವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಬಳಿಕ ಅವರು ಸಂತ್ರಸ್ತರಿಗೆ ನೆರವಾಗಲು ಉತ್ತರ ಕರ್ನಾಟಕದ ಕಡೆ ಪಯಣ ಬೆಳೆಸಿದರು. ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಮಂಡಿಪೇಟೆ ತನಕ ಪಾದಯಾತ್ರೆ ಮೂಲಕ ತೆರಳಿ ಸಾರ್ವಜನಿಕರು ನೀಡಿದ ದವಸ-ಧಾನ್ಯ ಸಂಗ್ರಹಿಸಿದರು.

ಬೆಡ್‌ಶೀಟ್‌ಗಳು, ಬ್ಲಾಂಕೇಟ್ಸ್‌, ಪುರುಷರು, ಮಹಿಳೆಯರ ಹಾಗೂ ಮಕ್ಕಳ ಉಡುಪುಗಳನ್ನು ಸ್ವೀಕರಿಸಲಾಯಿತು. ಹಾಗೆಯೆ ಅಕ್ಕಿ, ಗೋದಿ, ಕಡಲೇಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ ಮುಂತಾದ ಗೃಹ ಬಳಕೆ ವಸ್ತುಗಳನ್ನು ಸ್ವೀಕರಿಸಲಾಯಿತು. ಸುಮಾರು 3 ಗಂಟೆಗಳ ಕಾಲ ಸಿದ್ದಲಿಂಗ ಸ್ವಾಮೀಜಿ ಪಾದಯಾತ್ರೆ ಮಾಡಿದರು.

ಶಿವಮೊಗ್ಗ: ಸಂಸದರ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹ

4 ಟನ್‌ ಗೃಹೋಪಯೋಗಿ ವಸ್ತುಗಳ ಸಂಗ್ರಹ:

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಪಾವಗಡದ ಜಪಾನಂದ ಸ್ವಾಮೀಜಿ, ಕರ್ನಾಟಕ ರೆಡ್‌ ಕ್ರಾಸ್‌ ನ ಸಭಾಪತಿ ಎಸ್‌. ನಾಗಣ್ಣ, ಶಾಸಕ ಜ್ಯೋತಿ ಗಣೇಶ್‌, ದನಿಯಾಕುಮಾರ್‌ ಸೇರಿದಂತೆ ನಾಗರಿಕರು ಹಾಗೂ ಸ್ಕೌಟ್ಸ್‌ ಗೈಡ್ಸ್‌ ಮಕ್ಕಳು ಈ ಪಾದಯಾತ್ರೆಯಲ್ಲಿ ಸಾಥ್‌ ನೀಡಿದರು. ಸೋಮವಾರ ಒಂದೇ ದಿನ ಪಾದಯಾತ್ರೆಯಲ್ಲಿ 4 ಟನ್‌ ಗೃಹಪಯೋಗಿ ಮತ್ತು ಇತರ ವಸ್ತುಗಳು ಸಂಗ್ರಹವಾಯಿತು.

ಸಂಗ್ರಹಿಸಿದ ವಸ್ತುಗಳನ್ನು ಶಿವಮೊಗ್ಗ, ಮೂಡಿಗೆರೆ, ಶಹಪುರ, ಯಾದಗಿರಿ, ರಾಯಚೂರು, ಮಡಿಕೇರಿ, ಕಾರವಾರಕ್ಕೆ ಕಳುಹಿಸಿಕೊಡಲಾಯಿತು. ಈಗಾಗಲೇ ನೆರೆ ಸಂತ್ರಸ್ತರ ನೆರವಿಗೆ ಬಂದಿದ್ದ ಸಿದ್ಧಗಂಗಾ ಮಠ 50 ಲಕ್ಷ ರು. ಹಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದನ್ನು ಸ್ಮರಿಸಬಹುದು.