ಮಂಗಳೂರು(ಫೆ.05): ಸಾರ್ವಜನಿಕರ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಪುತ್ತೂರು ವಿಭಾಗದ ಬಿಎಸ್‌ಎನ್‌ಎಲ್‌ ಸಂಸ್ಥೆಯಲ್ಲಿ ಇದೀಗ ಸ್ವಯಂ ನಿವೃತ್ತಿಯ ಪರ್ವ ನಡೆಯುತ್ತಿದ್ದು, ಸಂಸ್ಥೆಯ 62 ಮಂದಿ ಸಿಬ್ಬಂದಿಯ ಪೈಕಿ 43 ಮಂದಿ ಜ.31ರಂದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.

ಇದರಿಂದಾಗಿ ಬಿಎಸ್‌ಎನ್‌ಎಲ್‌ ಸಂಸ್ಥೆಯು ಸಿಬ್ಬಂದಿ ಕೊರತೆಯಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದ್ದು, ಜೊತೆಗೆ ಜನಸಾಮಾನ್ಯರ ಸಂಪರ್ಕವನ್ನು ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕಿ ಕೊಂಡಿದೆ.

ಮಂಗಳೂರು ಬಂದರಿನಲ್ಲಿ ಕಟ್ಟೆಚ್ಚರ: ಮೂವರು ಚೀನೀಯರ ಆಗಮನ

ಖಾಸಗಿ ನೆಟ್‌ವರ್ಕ್ಗಳ ಭರಾಟೆಯ ನಡುವೆ ಹಲವು ತೊಡಕುಗಳ ಮಧ್ಯೆ ಒದ್ದಾಡುತ್ತಿರುವ ಈ ಸರ್ಕಾರಿ ನೆಟ್‌ವರ್ಕ್ಗೆ ಸಿಬ್ಬಂದಿಗಳ ಈ ಸ್ವಯಂ ನಿವೃತ್ತಿ ದೊಡ್ಡ ಹೊಡೆತ ನೀಡಿದೆ. ಇದರಿಂದ ಜನರ ಸಂಪರ್ಕದ ಕೊಂಡಿ ಕಳಚಿಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ. ಖಾಸಗಿ ನೆಟ್‌ವರ್ಕ್ಗಳು ಮುಟ್ಟದ ಎಷ್ಟೋ ಭಾಗಗಳಲ್ಲಿ ಬಿಎಸ್ಸೆನ್ನೆಲ್‌ ಇಂದೂ ಕೂಡಾ ಅನಿವಾರ್ಯವಾದ ಸಂಪರ್ಕ ಸೇತುವೆಯಾಗಿತ್ತು.

ಬಿಎಸ್ಸೆನ್ನೆಲ್‌ ಪುತ್ತೂರು ವಿಭಾಗದಲ್ಲಿ ಒಟ್ಟು 43 ಮಂದಿ ಏಕಕಾಲದಲ್ಲಿ ಸ್ವಯಂ ನಿವೃತ್ತಿ ಪಡೆಕೊಂಡಿದ್ದಾರೆ. ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ, ಕಡಬ ವ್ಯಾಪ್ತಿಯಲ್ಲಿ ಒಟ್ಟು 62 ಮಂದಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಇದೀಗ 43 ಮಂದಿ ಸ್ವಯಂ ನಿವೃತ್ತಿಯಾಗಿದ್ದಾರೆ. ಉಳಿದ 19 ಮಂದಿಯಲ್ಲಿ 8 ಮಂದಿ ಮುಂದಿನ ಮೂರು ತಿಂಗಳಲ್ಲಿ ವಯೋಸಹಜ ನಿವೃತ್ತಿ ಪಡೆಯಲಿದ್ದಾರೆ. ಹಾಗಾಗಿ ಕೇವಲ 11 ಮಂದಿ ಮಾತ್ರ ಉಳಿದುಕೊಳ್ಳಲಿದ್ದಾರೆ. 63 ಮಂದಿ ನಿರ್ವಹಿಸುತ್ತಿದ್ದ ಕೆಲಸವನ್ನು ಕೇವಲ 11 ಮಂದಿ ನಿರ್ವಹಿಸಬೇಕಾದ ಅನಿವಾರ್ಯತೆಯ ಸವಾಲು ಸಂಸ್ಥೆಯ ಮುಂದಿದೆ.

'ಮಂಗ್ಳೂರು ಗೋಲಿಬಾರ್ ಸಂಬಂಧ ಬಂದ ದೂರುಗಳೆಷ್ಟು..'?

ಸ್ವಯಂ ನಿವೃತ್ತಿಯಿಂದ ಬಿಎಸ್ಸೆನ್ನೆಲ್‌ ಸಂಸ್ಥೆಗೆ ಪ್ರಸ್ತುತ ತೊಂದರೆಯಾದರೂ ಮುಂದೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಗುತ್ತಿಗೆ ಆಧಾರ ಪದ್ದತಿಯಲ್ಲಿ ಸಿಬ್ಬಂದಿಯನ್ನು ನೇಮಕ ಮಾಡುವ ಚಿಂತನೆ ಇದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಅನಂತರ ಮತ್ತೆ ಯಥಾಸ್ಥಿತಿಯಲ್ಲಿ ಬಿಎಸ್ಸೆನ್ನೆಲ್‌ ತನ್ನ ಸೇವೆ ಮುಂದುವರಿಸಲಿದೆ ಎಂದು ಪುತ್ತೂರು ಬಿಎಸ್ಸೆನ್ನಲ್‌ ಪ್ರಧಾನ ಕಚೇರಿ ಎಜಿಎಂ ಆನಂದ್‌ ತಿಳಿಸಿದ್ದಾರೆ.