ಬೆಂಗಳೂರು(ಫೆ.05): ಮಂಗಳೂರು ಗೋಲಿಬಾರ್‌ ಘಟನೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಗೋಲಿಬಾರ್‌ ಘಟನೆಯನ್ನು ಎಸ್‌ಐಟಿ ತನಿಖೆಗೆ ವಹಿಸಲು ಕೋರಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿತು. ಗೋಲಿಬಾರ್‌ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಎಷ್ಟುದೂರುಗಳು ದಾಖಲಾಗಿವೆ? ಆ ಪೈಕಿ ಎಷ್ಟುದೂರುಗಳ ಸಂಬಂಧ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಸರ್ಕಾರ ವರದಿ ನೀಡಬೇಕು. ಘಟನೆ ನಡೆದ ದಿನದಂದು ಎಲ್ಲ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಸಂರಕ್ಷಿಸಿಡಬೇಕು. ಪೊಲೀಸರು ಪ್ರತ್ಯೇಕವಾಗಿ ವಿಡಿಯೋ ರೆಕಾರ್ಡಿಂಗ್‌ ಮಾಡಿದ್ದರೆ ಅದರ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಸಂಗ್ರಹಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳು ಎಷ್ಟು, ಅವುಗಳ ಗುಣಮಟ್ಟಹೇಗಿದೆ? ಸೆರೆ ಹಿಡಿದ ಕ್ಯಾಮೆರಾಗಳು ಯಾವುವು ಎಂಬ ಬಗ್ಗೆ ಸಂಬಂಧಪಟ್ಟಅಧಿಕಾರಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಜನಸೇವಕ

ಅಲ್ಲದೆ, ಸಾರ್ವಜನಿಕರು, ಖಾಸಗಿ ವ್ಯಕ್ತಿಗಳು ಹಾಗೂ ಮಾಧ್ಯಮದವರು ರೆಕಾರ್ಡಿಂಗ್‌ ಮಾಡಿದ್ದರೆ ಅದನ್ನು ತಮಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಜಿಲ್ಲಾ ಮ್ಯಾಜಿಸ್ಪ್ರೇಟ್‌ (ಜಿಲ್ಲಾಧಿಕಾರಿ) ವಿಚಾರಣಾ ಪ್ರಗತಿ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು.

ವಿಚಾರಣೆ ವೇಳೆ ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು, ಗೋಲಿಬಾರ್‌ ಘಟನೆ ಸಂಬಂಧ ಜಿಲ್ಲಾ ಮ್ಯಾಜಿಸ್ಪ್ರೇಟ್‌ (ಜಿಲ್ಲಾಧಿಕಾರಿ) ಈವರೆಗೆ ನಡೆಸಿರುವ ಪ್ರಾಥಮಿಕ ವಿಚಾರಣೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಜತೆಗೆ, ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

 

ಅರ್ಜಿದಾರರ ಪರ ವಕೀಲರು, ಘಟನೆಯ ಸಂಬಂಧ ಸಾಕಷ್ಟುದೂರುಗಳು ದಾಖಲಾಗಿವೆ. ಆದರೆ, ಯಾವುದೇ ದೂರು ಆಧರಿಸಿ ಎಫ್‌ಐಆರ್‌ ದಾಖಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಜನರಲ್‌, ಅವುಗಳ ಸಂಬಂಧವೂ ಎಫ್‌ಐಆರ್‌ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಪಿಐಎಲ್‌ ಅರ್ಜಿ ವಜಾ:

ಮಂಗಳೂರು ಗೋಲಿಬಾರ್‌ ಘಟನೆ ಸಂಬಂಧ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕೋರಿ ಮಹಮ್ಮದ್‌ ಇಕ್ಬಾಲ್‌ ಮತ್ತು ಬಿ. ಉಮರ್‌ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ಇದೇ ವೇಳೆ ವಜಾಗೊಳಿಸಿದೆ. ಬಿ. ಉಮರ್‌ ವಿರುದ್ಧ ಐದು ಕ್ರಿಮಿನಲ್‌ ಕೇಸುಗಳು ದಾಖಲಾಗಿವೆ ಎಂದು ಸರ್ಕಾರ ವರದಿ ಸಲ್ಲಿಸಿದೆ. ಇಕ್ಬಾಲ್‌ ತಾವು ಸಾಮಾಜಿಕ ಕಾರ್ಯಕರ್ತರಾಗಿದ್ದು, ಜನರ ಮೂಲಭೂತ ಹಕ್ಕುಗಳು ರಕ್ಷಣೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಸಂಬಂಧ ಸಂಸ್ಥೆಗಳನ್ನು ಸ್ಥಾಪಿಸಿರುವುದಾಗಿ ಅರ್ಜಿಯಲ್ಲಿ ಹೇಳಿದ್ದಾರೆ. ಆದರೆ, ಯಾವ ಸಂಸ್ಥೆ ಸ್ಥಾಪಿಸಲಾಗಿದೆ? ಹಾಗೂ ಅದರ ಕಚೇರಿ ಮತ್ತು ಸಿಬ್ಬಂದಿ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಸಂಪೂರ್ಣವಾಗಿ ಸುಳ್ಳು ಅರ್ಜಿ ದಾಖಲಿಸಲಾಗಿದೆ. ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ಕುರಿತ ಮಾಹಿತಿಯನ್ನು ಮರೆ ಮಾಚಲಾಗಿದೆ. ಆದ್ದರಿಂದ ಅವರ ಅರ್ಜಿಯನ್ನು ವಿಚಾರಣೆ ನಡೆಸಲಾಗದು ಎಂದು ತಿಳಿಸಿದ ಹೈಕೋರ್ಟ್‌ ಅರ್ಜಿ ವಜಾಗೊಳಿಸಿತು.

'ದೇಶದ ನಿಜವಾದ ಪ್ರಜೆಗಳನ್ನು ಗುರುತಿಸಲು DNA ಟೆಸ್ಟ್..'!