ವಿಜಯನಗರ ಜಿಲ್ಲೆಗೆ 425 ಕೋಟಿ ಅನುದಾನ: ಸಚಿವ ಆನಂದ್ ಸಿಂಗ್
* ಸಂವಿಧಾನ ತಿದ್ದುಪಡಿ ಕಾಯ್ದೆ 371(ಜೆ) ಜಾರಿಗೆ
* ವ್ಯಾಕ್ಸಿನ್ ಕುರಿತ ಸಾಕ್ಷ್ಯ ಚಿತ್ರ ಅನಾವರಣ
* ವಿಮೋಚನೆ ಹೋರಾಟದ ಬಣ್ಣನೆ
ಹೊಸಪೇಟೆ(ಸೆ.18): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಜಯನಗರ ಜಿಲ್ಲೆಗೆ . 425.35 ಕೋಟಿ ಅನುದಾನ ಹಂಚಿಕೆಯಾಗಿದ್ದು, ಒಟ್ಟು 1505 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿಕಾಯ್ದೆ 371(ಜೆ) ಜಾರಿಗೆ ತರಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 7 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ. 80ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 1,41,877 ಅಭ್ಯರ್ಥಿಗಳಿಗೆ 371(ಜೆ) ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ ಎಂದರು.
ನಗರದಲ್ಲಿರುವ 100 ಹಾಸಿಗೆಗಳ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಅನುಮೋದನೆ ದೊರೆತಿದೆ. 60 ಬೆಡ್‌ಗಳ ಎಂಸಿಎಚ್ ಆಸ್ಪತ್ರೆಯ ಕಾಮಗಾರಿಯು ಅಂತಿಮ ಹಂತದ ಪ್ರಗತಿಯಲ್ಲಿದೆ ಎಂದರು.
ಮುಂಬರುವ ದಿನಗಳಲ್ಲಿ ಕೋವಿಡ್ ಮೂರನೇ ಅಲೆ ಹರಡುವ ಮುನ್ನೆಚ್ಚರಿಕೆ ತಜ್ಞರು ನೀಡಿರುವುದರಿಂದ ಹಿಂದಿನಂತೆಯೇ ಜಿಲ್ಲಾಡಳಿತಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ. 3ನೇ ಅಲೆಯು ಸೃಷ್ಟಿಮಾಡಬಹುದಾದ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು ಎಂದರು.
ಹೊಸಪೇಟೆ: ವೀಕೆಂಡ್-ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡು
ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್, ಎಎಸ್ಪಿ ಬಿ.ಎನ್. ಲಾವಣ್ಯ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ತಹಸೀಲ್ದಾರ್ ವಿಶ್ವನಾಥ ಮತ್ತಿತರರಿದ್ದರು. ಪೊಲೀಸರು ಹಾಗೂ ಹೋಂ ಗಾರ್ಡ್‌ಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು.
ವಿಮೋಚನೆ ಹೋರಾಟದ ಬಣ್ಣನೆ:
ಕಲ್ಯಾಣ ಕರ್ನಾಟಕ ಪ್ರದೇಶ ವಿಮೋಚನೆಗೊಳ್ಳಲು ನಡೆಸಿದ ಹೋರಾಟ, ರಜಾಕರು ಜನರ ಮೇಲೆ ನಡೆಸಿದ ದೌರ್ಜನ್ಯಗಳನ್ನು, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ನಡೆಸಿದ ದಿಟ್ಟತನದ ಕಾರ್ಯಾಚರಣೆಯನ್ನು ಸಚಿವ ಆನಂದ್ ಸಿಂಗ್ ತಮ್ಮ ಭಾಷಣದಲ್ಲಿ ಬಣ್ಣಿಸಿದರು.
ಹೈದರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಸ್ವತಂತ್ರ ರಾಷ್ಟ್ರಕಟ್ಟುವ ಬಯಕೆಯಿಂದ ಹೈದರಾಬಾದ್ ನಿಜಾಮರಾದ ಮೀರ್ ಉಸ್ಮಾನ್ ಅಲಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಳ್ಳದೇ ಸ್ವತಂತ್ರವಾಗಿರಲು ಬಯಸಿ ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ಇದರಿಂದಾಗಿ ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದರಾಬಾದ್ ಸಂಸ್ಥಾನದ ಜನರು, ಸ್ವಾಮಿ ರಮಾನಂದ ತೀರ್ಥರು ಅಹಿಂಸಾತ್ಮಕ ಚಳವಳಿ ಪ್ರಾರಂಭಿಸಿದರು ಎಂದರು.
ಲಸಿಕಾ ಜಾಗೃತಿ ಸಾಕ್ಷ್ಯ ಚಿತ್ರ ಅನಾವರಣ:
ಕೋವಿಡ್ ಲಸಿಕೆ ಜಾಗೃತಿ ಕುರಿತು ಸಚಿವ ಆನಂದ್ ಸಿಂಗ್ ವಿಜಯನಗರ ಜಿಲ್ಲಾಡಳಿತ ರೂಪಿಸಿರುವ ವ್ಯಾಕ್ಸಿನ್ ಕುರಿತ ಸಾಕ್ಷ್ಯ ಚಿತ್ರ ಅನಾವರಣಗೊಳಿಸಿದರು. ಈ ವೇಳೆ ಗ್ರಾಪಂಗಳಿಗೆ ಕೋವಿಡ್ ಕಿಟ್ ವಿತರಿಸಲಾಯಿತು.