ಹೊಸಪೇಟೆ: ವೀಕೆಂಡ್-ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡು
* ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ
* ಪ್ರವಾಸಿಗರ ಭೇಟಿಗೆ ಹೇರಿದ್ದ ನಿರ್ಬಂಧ ಸಡಿಲಿಕೆ
* ಪ್ರವಾಸಿಗರ ಆಗಮನದಿಂದ ಹಂಪಿಯಲ್ಲಿ ವ್ಯಾಪಾರ-ವಹಿವಾಟು ಚುರುಕು
ಹೊಸಪೇಟೆ(ಸೆ.12): ಹಂಪಿ ಸ್ಮಾರಕಗಳನ್ನು ವೀಕೆಂಡ್‌ನಲ್ಲಿ ವೀಕ್ಷಿಸಲು ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಶನಿವಾರ 10 ಸಾವಿರ ಪ್ರವಾಸಿಗರು ಆಗಮಿಸಿದ್ದರು.
ಕೊರೋನಾ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ವೀಕೆಂಡ್‌ನಲ್ಲಿ ಪ್ರವಾಸಿಗರ ಭೇಟಿಗೆ ಹೇರಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ಸಡಿಲಿಸಿದೆ. ಹೀಗಾಗಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸಿ, ಸ್ಮಾರಕಗಳನ್ನು ಕಣ್ತುಂಬಿಕೊಂಡರು.
ಮಳೆಯಲ್ಲೇ ಹಂಪಿ ಬೈ ನೈಟ್ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು
ಪ್ರವಾಸಿಗರ ಆಗಮನದಿಂದ ಹಂಪಿಯಲ್ಲಿ ವ್ಯಾಪಾರ-ವಹಿವಾಟು ಚುರುಕುಗೊಂಡಿದೆ. ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿವೆ. ಐತಿಹಾಸಿಕ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯ, ಶ್ರೀಕೃಷ್ಣ ದೇಗುಲ, ಸಾಸಿವೆಕಾಳು ಗಣಪತಿ, ಕಡಲೆಕಾಳು ಗಣಪತಿ, ಬಡವಿಲಿಂಗ, ಉಗ್ರನರಸಿಂಹ, ಹಜಾರ ರಾಮ ದೇವಾಲಯ, ಕಮಲ ಮಹಲ್, ಗಜಶಾಲೆ, ಮಹಾನವಮಿ ದಿಬ್ಬ, ರಾಣಿ ಸ್ನಾನ ಗೃಹ, ವಿಜಯವಿಠ್ಠಲ ದೇವಾಲಯ ಸೇರಿ ಪ್ರಮುಖ ಸ್ಮಾರಕಗಳ ಬಳಿ ಪ್ರವಾಸಿಗರು ಕಂಡು ಬಂದರು.
ಹಂಪಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್, ರೆಸಾರ್ಟ್‌ಗಳಲ್ಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳುವ ಆಶಾಭಾವ ಮೂಡಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ಹಂಪಿ ಭೇಟಿಗೆ ಅವಕಾಶ ಇರಲಿಲ್ಲ. ಈಗ ವೀಕೆಂಡ್‌ನಲ್ಲಿ ಹಂಪಿ ಭೇಟಿಗೆ ಅವಕಾಶ ನೀಡಿರುವುದರಿಂದ ಕುಟುಂಬ ಸಮೇತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಬಂದಿದ್ದೇವೆ ಎಂದು ತುಮಕೂರಿನ ಅಭಿಷೇಕ ತಿಳಿಸಿದರು.