ಬೆಂಗಳೂರು(ಜ.17):  ಕೇವಲ ಒಂದು ವರ್ಷದ ಹಿಂದೆ ಗುತ್ತಿಗೆದಾರರಿಗೆ ಹಣ ನೀಡಲು ಕೂಡ ಪರದಾಡುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಖಾತೆಯಲ್ಲಿ ಇದೀಗ ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತವಿದೆ. ಅದರಲ್ಲಿ 421 ಕೋಟಿ ರು.ಗಳಿಗಿಂತ ಹೆಚ್ಚು ಲಾಭಾಂಶವಿದೆ.

2020 ಏಪ್ರಿಲ್‌-ಮೇ ತಿಂಗಳ ಅವಧಿಯಲ್ಲಿ ಬಿಡಿಎ ಖಾತೆಯಲ್ಲಿ ಇದ್ದದ್ದು ಕೇವಲ 3 ಕೋಟಿ ರು. ಮಾತ್ರ. ಅದನ್ನು ಅಂದಿನ ಆಯುಕ್ತ ಡಾ. ಜಿ.ಸಿ. ಪ್ರಕಾಶ್‌ ಅವರೇ ಅಧಿಕೃತ ಪಡಿಸಿದ್ದರು. ಕೋವಿಡ್‌-19 ಮತ್ತು ರಾಜ್ಯದಲ್ಲಿ ಹಲವೆಡೆ ತಲೆದೋರಿದ ಪ್ರವಾಹದಿಂದಾಗಿ ರಾಜ್ಯದ ಖಜಾನೆಯೂ ಕೂಡ ಖಾಲಿಯಾಗಿತ್ತು. ಬಿಡಿಎ ಕೂಡ ನಷ್ಟದ ಹಾದಿಯಲ್ಲಿತ್ತು.

ಬಿಡಿಎ ನೂತನ ಆಯುಕ್ತರಾಗಿ ಡಾ.ಎಚ್‌.ಆರ್‌.ಮಹದೇವ್‌ ಅಧಿಕಾರ ಸ್ವೀಕರಿಸಿದ ನಂತರ ಬಿಡಿಎ ಬದಲಾವಣೆಯ ಹಾದಿ ಹಿಡಿದಿದೆ. ಐದು ಹಂತದಲ್ಲಿ ವಿವಿಧ ಬಡಾವಣೆಗಳ ಮೂಲೆ ನಿವೇಶನಗಳನ್ನು ಇ-ಹರಾಜು ಪ್ರಕ್ರಿಯೆ ಮೂಲಕ ಹರಾಜಿಗೆ ಇಟ್ಟ ಬಿಡಿಎ ಒಟ್ಟು 1811 ನಿವೇಶನಗಳ ಪೈಕಿ 1307 ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಈ ನಿವೇಶನಗಳ ಮೂಲ ದರ 747.50 ಕೋಟಿ ರು.ಗಳಾಗಿದ್ದು, ಶೇ.56.35ರಷ್ಟು ಲಾಭದ ಮೊತ್ತಕ್ಕೆ ಅಂದರೆ ಬರೋಬ್ಬರಿ 1168.73 ಕೋಟಿ ರು.ಗಳಿಗೆ ನಿವೇಶನಗಳು ಮಾರಾಟವಾಗಿವೆ.

ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!

ದಲ್ಲಾಳಿಗಳಿಗೆ ಬ್ರೇಕ್‌

ಪ್ರಾಧಿಕಾರದ ಅಡಳಿತ ಬಲಪಡಿಸಬೇಕಾದರೆ ದಲ್ಲಾಳಿಗಳನ್ನು ಬಿಡಿಎನಿಂದ ದೂರ ಇಡಬೇಕು ಎಂಬ ನಿಯಮವನ್ನು ಪಾಲಿಸಲಾಗಿದ್ದು, ಸಾರ್ವಜನಿಕರಿಗೆ ಮಧ್ಯಾಹ್ನ 3 ಗಂಟೆ ಬಳಿಕ ಪ್ರಾಧಿಕಾರದ ಕಚೇರಿಯೊಳಗೆ ಭೇಟಿ ನೀಡಲು ಅವಕಾಶ ಕಲ್ಪಿಸಿದರು. ಅದಕ್ಕೂ ಮುನ್ನ ಯಾರು ಕೂಡ ಒಳ ಬರದಂತೆ ಸೂಚನೆ ನೀಡಲಾಯ್ತು. ಅಷ್ಟೇ ಅಲ್ಲ ಪ್ರಾಧಿಕಾರದಲ್ಲಿ ಗಣಕೀಕರಣ ವ್ಯವಸ್ಥೆ(ಇ-ಆಫೀಶ್‌) ಜಾರಿಗೆ ತರಲಾಗಿದೆ. ಹೀಗಾಗಿ ಏಜೆಂಟ್‌ಗಳ ಹಾವಳಿ ತಕ್ಕಮಟ್ಟಿಗೆ ಕಡಿಮೆಯಾಗಿದೆ.

ಭ್ರಷ್ಟಾಚಾರಿಗಳ ವಿರುದ್ಧ ಕೇಸು

ಬಿಡಿಎಗೆ ಸಂಬಂಧಪಟ್ಟಸುಮಾರು 120 ನಿವೇಶನಗಳಿಗೆ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ ವರ್ಗದವರು ಖಾಸಗಿ ವ್ಯಕ್ತಿಗಳೊಡನೆ ಶಾಮೀಲಾಗಿ ಅಕ್ರಮ ಎಸಗುತ್ತಿದ್ದುದ್ದನ್ನು ಪತ್ತೆ ಮಾಡಿಲಾಗಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಈ ನಿವೇಶನಗಳ ಒಟ್ಟು ಮೊತ್ತ 200 ಕೋಟಿ ರು.ಗಳಾಗಿವೆ. ಜತೆಗೆ ಹಲವು ವರ್ಷಗಳಿಂದ ಒಂದೇ ವಿಭಾಗದಲ್ಲಿದ್ದ ಸಿಬ್ಬಂದಿ ವರ್ಗ ಹಾಗೂ ಹೊರ ಗುತ್ತಿಗೆ ನೌಕರರ ಆಂತರಿಕ ಸ್ಥಳ ಬದಲಾವಣೆ ಮಾಡಲಾಗಿದೆ. ಮಹದೇವ ಅವರು ಆಯುಕ್ತರಾಗಿ ಬಂದ ನಂತರ ಈವರೆಗೆ 14 ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಅಮಾನತುಗೊಂಡಿದ್ದಾರೆ.

ಹುದ್ದೆ ಖಾಲಿ ಇದ್ದರು ಬರುವವರಿಲ್ಲ!

ಬಿಡಿಎಯಲ್ಲಿ ಕಾರ್ಯ ನಿರ್ವಹಿಸಲು ಅಧಿಕಾರಿಗಳು ಈ ಹಿಂದೆ ನಾಮುಂದು-ತಾಮುಂದು ಎಂದು ಪೈಪೋಟಿ ನಡೆಸುತ್ತಿದ್ದರು. ಆದರೆ, ಇದೀಗ ಉಪ ಕಾರ್ಯದರ್ಶಿ 3 ಮತ್ತು 4, ಭೂಸ್ವಾಧೀನ ಅಧಿಕಾರಿ ಹುದ್ದೆ, ಕಾರ್ಯಪಾಲಕ ಅಭಿಯಂತರರು ಹುದ್ದೆಗಳು ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಆದರೆ ಪೈಪೋಟಿಯೇ ಇಲ್ಲ.