ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!

ಹೊಸಕೆರೆಹಳ್ಳಿಯ ಗುಡಿಸಲು ನಿವಾಸಿಗಳನ್ನು ಒಕ್ಕಲೆಬ್ಬಿಸಿದ್ದ ಬಿಡಿಎ| 32 ಅನರ್ಹರ ಹೆಸರು ಸೇರಿಸಿ ಅಕ್ರಮ| ಬಿಡಿಎಗೆ ಕೋಟ್ಯಂತರ ರುಪಾಯಿ ನಷ್ಟ| 9 ಅಧಿಕಾರಿಗಳಿಗೆ ನೋಟಿಸ್‌| 

BDA Commissioner Mahadev Prasad Notice to 9 People grg

ಬೆಂಗಳೂರು(ಡಿ.23): ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿ ಗ್ರಾಮದಲ್ಲಿ ಫಲಾನುಭವಿಗಳಲ್ಲದವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿ ಪ್ರಾಧಿಕಾರಕ್ಕೆ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪದಡಿ ಒಂಬತ್ತು ಮಂದಿ ಅಧಿಕಾರಿ, ಸಿಬ್ಬಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಆಯುಕ್ತ ಡಾ. ಮಹದೇವ ನೋಟಿಸ್‌ ಜಾರಿಗೊಳಿಸಿದ್ದಾರೆ.

ಕೆಐಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ (ಬಿಡಿಎ ಹಿಂದಿನ ಉಪ ಕಾರ್ಯದರ್ಶಿ-3) ಅನಿಲ್‌ಕುಮಾರ್‌, ಜೈವಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿ (ಬಿಡಿಎ ಹಿಂದಿನ ಉಪ ಕಾರ್ಯದರ್ಶಿ-1) ಡಾ
ಬಿ.ಸುಧಾ, ಉಪಕಾರ್ಯದರ್ಶಿ-1 ವಿಭಾಗದ ವಿಷಯ ನಿರ್ವಾಹಕ ಸಂಜಯ್‌ಕುಮಾರ್‌, ಪ್ರಸ್ತುತ ಕಂದಾಯ ವಿಭಾಗ (ಉತ್ತರ)ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ಕಾರ್ಯದರ್ಶಿ-1ರ ವಿಭಾಗದ ಮೇಲ್ವಿಚಾರಕ ಕೆ.ಎಂ.ರವಿಶಂಕರ್‌, ಪ್ರಸ್ತುತ ಕಂದಾಯ ವಿಭಾಗ (ಪಶ್ಚಿಮ)ದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ ಕಾರ್ಯದರ್ಶಿ-1ರ ಮೇಲ್ವಿಚಾರಕ ಅಶ್ವತ್‌್ಥ ನಾರಾಯಣ, ಉಪ ಕಾರ್ಯದರ್ಶಿ-3ರ ಮೇಲ್ವಿಚಾರಕಿ (ಪ್ರಸ್ತುತ ದಾಖಲೆ ವಿಭಾಗ) ವಿ.ಮಹದೇವಮ್ಮ, ಉಪ ಕಾರ್ಯದರ್ಶಿ-3ರ ವಿಭಾಗದ ನಿವೃತ್ತ 2ನೇ ದರ್ಜೆ ಸಹಾಯಕ ಮುನಿ ಬಚ್ಚೇಗೌಡ, ಪ್ರಸ್ತುತ ಅಮಾನತ್ತಿನಲ್ಲಿರುವ ಉಪ ಕಾರ್ಯದರ್ಶಿ-3ರ ವಿಭಾಗದ ಮೇಲ್ವಿಚಾರಕಿ ಎಂ.ವಿ.ಕಮಲಾ, ಪ್ರಸ್ತುತ ಕಂದಾಯ ವಿಭಾಗ (ಪಶ್ಚಿಮ)ದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಮಾನತ್ತಿನಲ್ಲಿರುವ 2ನೇ ದರ್ಜೆ ಸಹಾಯಕ ವೆಂಕಟರಮಣಪ್ಪ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಬಿಡಿಎ ಕಾರ್ನರ್ ಸೈಟ್: 54 ಲಕ್ಷದ ಸೈಟ್ 1.89 ಕೋಟಿ ರುಪಾಯಿಗೆ ಸೇಲ್‌

ಪ್ರಕರಣದ ವಿವರ:

ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂ.89, 90, 91 ಮತ್ತು 94ರಲ್ಲಿ ವಾಸ ಮಾಡುತ್ತಿದ್ದ ಗುಡಿಸಲು ನಿವಾಸಿಗಳನ್ನು ಒಕ್ಕಲೆಬ್ಬಿಸಿ, ಒಟ್ಟು 541 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಲಾಗಿತ್ತು. ಸರ್ವೆ ನಂ 90ರಲ್ಲಿ 238 ನಿವೇಶನಗಳು ಮಾತ್ರ ಲಭ್ಯವಾಗಿತ್ತು. ಹಾಗಾಗಿ ಸರ್ಕಾರದ ಅನುಮತಿ ಮೇರೆಗೆ 2005ರಲ್ಲಿ ಪ್ರತಿ ಫಲಾನುಭವಿಗೆ 20/30 ಅಡಿ ಅಳತೆಯಂತೆ ಒಟ್ಟು 238 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.

ಒಕ್ಕಲೆಬ್ಬಿಸಿದ್ದ ಗುಡಿಸಲು ನಿವಾಸಿಗಳ ಸಂಘದ ಮನವಿ ಮೇರೆಗೆ ಅರ್ಹ 180 ಮಂದಿ ಫಲಾನುಭವಿಗಳನ್ನು ಗುರುತಿಸಿ ಪ್ರಾಧಿಕಾರದ ಇತರೆ ಬಡಾವಣೆಗಳಲ್ಲಿ 20/30 ಅಡಿ ಅಳತೆಯ ನಿವೇಶನಗಳನ್ನು ಪುನರ್ವಸತಿ ಯೋಜನೆಯಡಿ ಹಂಚಿಕೆ ಮಾಡಲು ಯೋಜಿಸಲಾಗಿತ್ತು. ಅರ್ಹ ಫಲಾನುಭವಿಗಳಿಗೆ ಮಾತ್ರ ಚಾಲ್ತಿಯಲ್ಲಿದ್ದ ನಿಯಮಾವಳಿಯಂತೆ ದರ ವಿಧಿಸಿ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿತ್ತು.

ಆದರೆ ಅನುಮೋದಿತ 180 ಫಲಾನುಭವಿಗಳ ಪಟ್ಟಿಯಲ್ಲಿರದ 32 ಅನರ್ಹ ಫಲಾನುಭವಿಗಳಿಗೆ ಅಕ್ರಮವಾಗಿ ಮತ್ತು ನಿಯಮಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿ ಪ್ರಾಧಿಕಾರಕ್ಕೆ ವಂಚನೆ ಮಾಡಿರುವುದು ಬಿಡಿಎ ವಿಶೇಷ ಕಾರ್ಯನಿರತ ಪಡೆಯ ಆರಕ್ಷಕ ಉಪಾಧೀಕ್ಷರ ತನಿಖೆಯಿಂದ ಬೆಳಕಿಗೆ ಬಂದಿತ್ತು. ಜತೆಗೆ ಅನರ್ಹ ಫಲಾನುಭವಿಗಳಲ್ಲಿ ಕೆಲವರಿಗೆ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಒಂದೇ ಪ್ರಕರಣದಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣಗಳಲ್ಲಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.
 

Latest Videos
Follow Us:
Download App:
  • android
  • ios