ಮೈಸೂರು(ಜೂ.28): ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಟೆಂಡರ್‌ ಪಡೆದಿದ್ದು, ಕಾರ್ಖಾನೆಯ ಪುನಶ್ಚೇತನಗೊಳಿಸಿ ಆಗಸ್ಟ್‌ 1 ರಿಂದ ಕಬ್ಬು ಅರೆಯಲಾಗುವುದು ಎಂದು ಮಾಜಿ ಸಚಿವ, ಶಾಸಕ ಹಾಗೂ ನಿರಾಣಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುರುಗೇಶ್‌ ಆರ್‌. ನಿರಾಣಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಶನಿವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪಾಂಡವಪುರ ಕಾರ್ಖಾನೆ ಆವರಣದಲ್ಲಿ ಯಾವುದೇ ಪಕ್ಷ, ಜಾತಿ ಇರುವುದಿಲ್ಲ. ಅಲ್ಲಿ ರೈತ ಪಕ್ಷ, ರೈತ ಜಾತಿ ಮಾತ್ರ ಇರುತ್ತದೆ. ಹೀಗಾಗಿ, ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಪಕ್ಷಾತೀತವಾಗಿ, ಜಾತ್ಯತೀತವಾಗಿ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗುವುದು. ಇದೇ ವೇಳೆ ಕಾರ್ಖಾನೆ ವಿಸ್ತರಣೆ ಹಾಗೂ ಉಪ ಉತ್ಪನ್ನಗಳನ್ನು ತಯಾರಿಸಲು ಇದೇ ವೇಳೆ ಶಂಕುಸ್ಥಾಪನೆಗೆ ಅಡಿಗಲ್ಲು ಹಾಕಲಾಗುವುದು ಎಂದರು.

3 ವರ್ಷದ ವೇತನ ಬಾಕಿ ನೀಡುತ್ತೇನೆ:

ಕಾರ್ಖಾನೆಯ ಒಪ್ಪಂದದ ಆದೇಶ ಪ್ರತಿ ಕೈಸೇರಿದ 24 ಗಂಟೆಯೊಳಗೆ ಎಲ್ಲಾ ನೌಕರರಿಗೂ 3 ವರ್ಷದ ಬಾಕಿ ವೇತನವನ್ನು ಪಾವತಿಸಲಾಗುವುದು. ಸರ್ಕಾರ 90 ದಿನಗಳ ಒಳಗೆ ಪಾವತಿಸುವಂತೆ ಒಪ್ಪಂದದಲ್ಲಿ ತಿಳಿಸಿದೆಯಾದರೂ, ನೌಕರರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸಲಾಗುವುದು. ಹಾಗೆಯೇ, ಈಗಿರುವ ನೌಕರರನ್ನೇ ಮುಂದುವರೆಸಲಾಗುವುದು. ಹಳಬರು ಬರದಿದ್ದರೇ ಅವರ ಕುಟುಂಬದ ಸದಸ್ಯರೊಬ್ಬರಿಗೆ ಅವರ ವಿದ್ಯಾಭ್ಯಾಸದ ಆಧಾರದ ಮೇಲೆ ಕೌಶಲ್ಯ ತರಬೇತಿ ನೀಡಿ, ಕೆಲಸ ನೀಡಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್‌ ಬಾಬು, ಉಪಾಧ್ಯಕ್ಷ ಎಂ. ಸುಬ್ರಹ್ಮಣ್ಯ ಇದ್ದರು.

ಮೈಶುಗರ್‌ ನಾನು ಒತ್ತಡ ಹಾಕಿಲ್ಲ

ನಾನು ಮಂಡ್ಯದ ಮೈಶುಗರ್‌, ಪಾಂಡವಪುರ ಸಕ್ಕರೆ ಕಾರ್ಖಾನೆ, ಶ್ರೀರಾಮ ಸಕ್ಕರೆ ಕಾರ್ಖಾನೆ ಸೇರಿದಂತೆ ಯಾವುದೇ ಕಾರ್ಖಾನೆಯ ಟೆಂಡರ್‌ ವಿಚಾರದಲ್ಲಿ ನಾನು ಒತ್ತಡ ಹಾಕಿಲ್ಲ ಎಂದು ಮಾಜಿ ಸಚಿವ, ಶಾಸಕ ಮುರುಗೇಶ್‌ ಆರ್‌. ನಿರಾಣಿ ಸ್ಪಷ್ಟಪಡಿಸಿದರು.

ಹೋಂ ಕ್ವಾರಂಟೈನ್‌; ಊಟಕ್ಕೂ ಪರ​ದಾಟ

ಮೈಶುಗರ್‌ಗೆ ಇನ್ನೂ ಟೆಂಡರ್‌ ಸಹ ಕರೆದಿಲ್ಲ. ಮಂಡ್ಯದಲ್ಲಿರುವ ಕಾರ್ಖಾನೆಗೆ ಭೇಟಿ ನೀಡಿದ್ದು ನಿಜ. ಈಗ ಪಾಂಡವಪುರ ಸಕ್ಕರೆ ಕಾರ್ಖಾನೆ ಟೆಂಡರ್‌ ಸಿಕ್ಕಿದೆ. ಮುಂದೆ ಮೈಶುಗರ್‌ ಟೆಂಡರ್‌ ಕರೆದರೆ ನನಗೆ ಶಕ್ತಿ ಇದ್ದರೆ, ಇಚ್ಛಾಸಕ್ತಿ ಇದ್ದರೆ ಭಾಗವಹಿಸುತ್ತೇನೆ ಎಂದು ಅವರು ತಿಳಿಸಿದರು.