ಬೆಂಗಳೂರು ನಗರ ಜಿಲ್ಲೆಯಲ್ಲಿ 39 ಸಾವಿರ ಎಕರೆ ಸರ್ಕಾರಿ ಜಾಗ ಒತ್ತುವರಿ: ಅಶೋಕ್‌

ಒತ್ತುವರಿ ತೆರವುಗೊಳಿಸಲು ವಿಫಲರಾಗಿರುವ ಅಧಿಕಾರಿಗಳು ಅಥವಾ ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿಸಲು ಶಾಮೀಲಾಗಿರುವ ಅಧಿಕಾರಿ/ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

39000 Acres of Government Land Encroachment in Bengaluru Urban District says R Ashok grg

ವಿಧಾನ ಪರಿಷತ್‌(ಸೆ.22):  ಬೆಂಗಳೂರು ನಗರ ಜಿಲ್ಲೆಯಲ್ಲಿ ಇರುವ 1,22,918 ಎಕರೆ ಸರ್ಕಾರಿ ಜಮೀನಿನ ಪೈಕಿ 38,942 ಎಕರೆ ಒತ್ತುವರಿಯಾಗಿದ್ದು, ಈವರೆಗೆ 16,478 ಎಕರೆ ಜಮೀನು ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ 1,08,295 ಎಕರೆ ಜಮೀನಿನ ಪೈಕಿ 36,229 ಎಕರೆ ಒತ್ತುವರಿಯಾಗಿದೆ. ಈವರೆಗೆ 11,779 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಬಿಜೆಪಿಯ ಎಚ್‌.ಎಸ್‌.ಗೋಪಿನಾಥ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ನಮೂನೆ 50, 53 ಹಾಗೂ ಕಲಂ 94 ಸಿ ಅಡಿಯಲ್ಲಿ 12,179 ಎಕರೆ ಜಮೀನಿಗೆ ಅರ್ಜಿ ಸಲ್ಲಿಕೆಯಾಗಿದೆ. ನಮೂನೆ 50 ಹಾಗೂ 53 ಅಡಿ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಲು ಜಿಲ್ಲಾಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ, 1020 ಎಕರೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಿದೆ. ಇನ್ನೂ 265 ಎಕರೆ ಜಮೀನು ಒತ್ತುವರಿ ಬಾಕಿ ಇದೆ ಎಂದು ಹೇಳಿದರು.

ಒತ್ತುವರಿ ತೆರವಿಗೆ ಪುರವಂಕರ ಕಟ್ಟಡದ ಮಹಿಳೆಯರ ಅಡ್ಡಿ!

ಒತ್ತುವರಿ ತೆರವುಗೊಳಿಸಲು ವಿಫಲರಾಗಿರುವ ಅಧಿಕಾರಿಗಳು ಅಥವಾ ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿಸಲು ಶಾಮೀಲಾಗಿರುವ ಅಧಿಕಾರಿ/ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದೇ ರೀತಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವಿಗೆ ಹಾಗೂ ರಕ್ಷಿಸಲು ಎಲ್ಲ ಜಿಲ್ಲೆಗಳಲ್ಲಿ ‘ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ’ ರಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಒತ್ತುವರಿ ತೆರವು ಮಾಡಿದ ಜಮೀನನ್ನು ಸರ್ಕಾರ ವಿವಿಧ ಯೋಜನೆಯಡಿ ನಿರ್ಮಿಸುವ ಮನೆ, ಆರೋಗ್ಯ ಘಟಕ, ಆಟದ ಮೈದಾನ, ಸ್ಮಶಾನ ಮುಂತಾದ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡಲಾಗುವುದು ಎಂದು ಅಶೋಕ್‌ ಹೇಳಿದರು.
 

Latest Videos
Follow Us:
Download App:
  • android
  • ios