ಒತ್ತುವರಿ ತೆರವಿಗೆ ಪುರವಂಕರ ಕಟ್ಟಡದ ಮಹಿಳೆಯರ ಅಡ್ಡಿ!
ಮಹದೇವಪುರ ವಲಯ ವ್ಯಾಪ್ತಿಯ ಪುರವಂಕರ ಕಟ್ಟಡದಲ್ಲಾಗಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಅಧಿಕಾರಿಗಳು ಮುಂದಾದ ಸಂದರ್ಭದಲ್ಲಿ ನಿವಾಸಿಗಳು ಜೆಸಿಬಿ ಯಂತ್ರಕ್ಕೆ ಅಡ್ಡಲಾಗಿ ನಿಂತು ಪ್ರತಿಭಟಿಸಿದ ಘಟನೆ ನಡೆದಿದೆ.
ಬೆಂಗಳೂರು (ಸೆ.21) : ಮಹದೇವಪುರ ವಲಯ ವ್ಯಾಪ್ತಿಯ ಪುರವಂಕರ ಕಟ್ಟಡದಲ್ಲಾಗಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಅಧಿಕಾರಿಗಳು ಮುಂದಾದ ಸಂದರ್ಭದಲ್ಲಿ ನಿವಾಸಿಗಳು ಜೆಸಿಬಿ ಯಂತ್ರಕ್ಕೆ ಅಡ್ಡಲಾಗಿ ನಿಂತು ಪ್ರತಿಭಟಿಸಿದ ಘಟನೆ ನಡೆದಿದೆ.
Bengaluru: ಆಪರೇಷನ್ ಡೆಮಾಲಿಷ್‌ಗೆ ಹೆದರಿ ನಿವಾಸಿಗಳಿಂದಲೇ ಒತ್ತುವರಿ ತೆರವು..!
ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆ, ಶೆಡ್, ಖಾಲಿ ಜಾಗ ತೆರವಿಗೆ ಸೀಮಿತವಾಗಿದ್ದ ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಸಂಜೆ ಪುರವಂಕರ ಸಂಸ್ಥೆಯಿಂದ ನಿರ್ಮಿಸಲಾದ ಕಟ್ಟಡದಿಂದಾಗಿರುವ ಒತ್ತುವರಿ ತೆರವಿಗೆ ಮುಂದಾಗಿದ್ದರು. ಜೆಸಿಬಿ ಸೇರಿ ಇನ್ನಿತರ ಯಂತ್ರಗಳ ಮೂಲಕ ಪುರವಂಕರ ಕಟ್ಟಡಕ್ಕೆ ಬಿಬಿಎಂಪಿ ಅಧಿಕಾರಿಗಳು ತೆರಳಿದ್ದರು. ಆದರೆ, ಜೆಸಿಬಿ ಯಂತ್ರಕ್ಕೆ ಮಹಿಳೆಯರು ಕೈ ಕೈ ಹಿಡಿದು ಅಡ್ಡಲಾಗಿ ನಿಂತು ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದರು. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಬುಧವಾರ ತೆರವು ನಡೆಸುವುದಾಗಿ ನಿವಾಸಿಗಳಿಗೆ ತಿಳಿಸಿದರು.
ಕಾಲಾವಕಾಶ ಕೊಡಿ:
ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ತೆರಳುತ್ತಿದ್ದಂತೆ ನಿವಾಸಿಗಳು, ಕಟ್ಟಡ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಹೀಗಾಗಿ ತೆರವು ಕಾರ್ಯಾಚರಣೆ ಮಾಡದಂತೆ ಆಗ್ರಹಿಸಿದರು. ಅದಕ್ಕೆ ಬಿಬಿಎಂಪಿ ಅಧಿಕಾರಿಗಳು, ನ್ಯಾಯಾಲಯದ ಆದೇಶ ತೋರಿಸುವಂತೆ ಸೂಚಿಸಿದರು. ಆದರೆ, ನ್ಯಾಯಾಲಯದ ಆದೇಶವನ್ನು ತೋರಿಸದ ನಿವಾಸಿಗಳು, ನಾವು ಕಷ್ಟದಲ್ಲಿದ್ದೇವೆ. ನಮಗೆ ಸಮಯ ಕೊಡಿ. ಏಕಾಏಕಿ ತೆರವು ಮಾಡುವುದು ಸರಿಯಲ್ಲ ಎಂದು ವಾಗ್ವಾದ ನಡೆಸಿದರು.
ಈ ವೇಳೆ ಅಧಿಕಾರಿಗಳು ಏಕಾಏಕಿ ಬಂದು ತೆರವು ಮಾಡುತ್ತಿಲ್ಲ. ಸರ್ವೇ ಸಿಬ್ಬಂದಿ ಮೂಲಕ ಒತ್ತುವರಿ ಗುರುತು ಮಾಡಿ, ನಂತರ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಕೊನೆಗೆ ನಿವಾಸಿಗಳು ಜೆಸಿಬಿ ವಾಹನದ ಮುಂದೆ ನಿಂತು ಕಾರ್ಯಾಚರಣೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟಿಸುತ್ತಿದ್ದ ನಿವಾಸಿಗಳನ್ನು ವಶಕ್ಕೆ ಪಡೆದು ಕಾರ್ಯಾಚರಣೆಗೆ ಅನುವು ಮಾಡಿಕೊಡಲು ವಿಫಲರಾದರು. ಕೊನೆಗೆ ತೆರವು ಮಾಡದೆ ಬಿಬಿಎಂಪಿ ಅಧಿಕಾರಿಗಳು ವಾಪಾಸ್ ಬಂದರು.
ಬೆಂಗ್ಳೂರಲ್ಲಿ ಒತ್ತುವರಿ ತೆರವು ಕಾರ್ಯದಲ್ಲಿ ರಾಜಿ ಇಲ್ಲ: ಸಿಎಂ ಬೊಮ್ಮಾಯಿ
ನಾಮ್ಕೆವಾಸ್ತೆ ತೆರವು:
ಮಂಗಳವಾರವೂ ಕಾಟಾಚಾರದ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಅಧಿಕಾರಿಗಳು ಮಾಡಿದ್ದಾರೆ. ಮಹದೇವಪುರ ವಲಯ ವ್ಯಾಪ್ತಿಯ ವಿಪ್ರೋ ಮತ್ತು ಸಾಲಾರ್‌ಪುರಿಯ ಕಟ್ಟಡದ ಬಳಿಯ 2.4 ಮೀ. ಕಾಂಪೌಂಡ್ ಗೋಡೆ ತೆರವುಗೊಳಿಸಲಾಗಿದೆ. ಕಸವನಹಳ್ಳಿ ಮುಖ್ಯ ರಸ್ತೆಯ ವಲ್ಲಿಯಮ್ಮ ಲೇಔಟ್‌ನಲ್ಲಿ ಸರ್ವೇ ಮಾಡಿ ರಾಜಕಾಲುವೆ ಮೇಲೆ ನಿರ್ಮಿಸಲಾಗಿದ್ದ ಶೆಡ್‌ಗಳ ಪೈಕಿ ಒಂದು ಶೆಡನ್ನು ತೆರವುಗೊಳಿಸಲಾಯಿತು. ಉಳಿದ ನಾಲ್ಕು ಶೆಡ್‌ಗಳನ್ನು ಬುಧವಾರ ತೆರವುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರತಹಳ್ಳಿ ಪೊಲೀಸ್ ಠಾಣೆ ಹಿಂಭಾಗ ಜಲಮಂಡಳಿ ನಿರ್ಮಿಸಿದ್ದ ಸೇತುವೆಯ ಉಳಿದ ಭಾಗವನ್ನು ಮಂಗಳವಾರ ತೆರವು ಮಾಡಲಾಗಿದೆ.