ಆಲಮಟ್ಟಿ ಡ್ಯಾಂ ಎತ್ತರ: ನಾಲ್ಕು ಹಳ್ಳಿಗಳ ಸ್ಥಳಾಂತರಕ್ಕೆ 3,900 ಕೋಟಿ, ಸಿಎಂ ಬೊಮ್ಮಾಯಿ

ಜಲಾಶಯದ ಎತ್ತರಕ್ಕಿಂತ ಭೂಸ್ವಾಧೀನ, ಪುನರ್ವಸತಿ, ಸೂಕ್ತ ಪರಿಹಾರ ಆದ್ಯತೆ: ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

3900 Crores for Relocation of Four Villages Says CM Basavaraj Bommai grg

ಆಲಮಟ್ಟಿ(ಅ.01): ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿರುವ ಕೃಷ್ಣಾನದಿ ಅಂತಾರಾಜ್ಯ ನದಿ ವಿವಾದದ ತೀರ್ಪಿನ ಬಳಿಕ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಅಧಿಸೂಚನೆಯ ನಂತರ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀ.ನಿಂದ 524.256 ಮೀ.ಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಆಲಮಟ್ಟಿಯ ಲಾಲ್‌ ಬಹದ್ಧೂರ ಶಾಸ್ತ್ರಿ ಸಾಗರದ ಬಳಿ ಕೃಷ್ಣೆಗೆ ಶುಕ್ರವಾರ ಬಾಗಿನ ಅರ್ಪಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬ್ರಿಜೇಜ್‌ ಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅಂತಾರಾಜ್ಯ ಜಲವಿವಾದಗಳು ನಡೆಯುತ್ತಿತ್ತು. ಕರ್ನಾಟಕ ಹಾಗೂ ಮಹಾರಾಷ್ಟ್ರದ ನ್ಯಾಯಾಧೀಶರು ಇದ್ದ ಪೀಠದಿಂದ ಅವರು ಹೊರ ಸರಿದಿದ್ದಾರೆ. ಶೀಘ್ರವೇ ಹೊಸ ನ್ಯಾಯಾಧೀಶರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸರ್ಕಾರ ಮನವಿ ಮಾಡಿಕೊಂಡಿದೆ ಎಂದರು.

ಉಮೇಶ ಕತ್ತಿ ನೆನೆದು ಭಾವುಕರಾದ ಸಿಎಂ: ದಸರಾ ನಂತರ ಸಿಎಂ,ಬಿಎಸ್ವೈ ಜಂಟಿ ಪ್ರವಾಸ

ಶೀಘ್ರವೇ ನ್ಯಾಯಾಧೀಶರು ನೇಮಕಗೊಂಡು ತೀರ್ಪು ಬರಲಿದೆ. ತೀರ್ಪು ಬಂದ ನಂತರ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಆಗ ಜಲಾಶಯದ ಎತ್ತರದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಲ ವಿವಾದ ಬಗೆಹರಿದ ನಂತರ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ರಾಜ್ಯದ ಜನರಿಗೆ ಮೊದಲು ನೀರು ಕೊಡುವುದು ನಮ್ಮ ಆದ್ಯತೆಯಾಗಿದೆ. ನಂತರ ಈ ಯೋಜನೆಯನ್ನು ರಾಷ್ಟ್ರೀಕರಣಗೊಳಿಸುವ ಕುರಿತು ಯೋಚನೆ ಮಾಡಲಾಗುವುದು ಎಂದು ತಿಳಿಸಿದರು.

ನಾಲ್ಕು ಹಳ್ಳಿಗಳ ಸ್ಥಳಾಂತರಕ್ಕೆ 3900 ಕೋಟಿ:

ಒಟ್ಟಾರೆ ಜಲಾಶಯದ ಎತ್ತರದಿಂದ 20 ಹಳ್ಳಿಗಳು ಮುಳುಗಡೆಯಾಗುತ್ತಿದ್ದು, ಅದರಲ್ಲಿ 14 ಹಳ್ಳಿಗಳ ಸಂಪೂರ್ಣ ಅಸೆಸ್‌ಮೆಂಟ್‌ ಪೂರ್ಣಗೊಂಡಿದೆ. ಅದರಲ್ಲಿ ನಾಲ್ಕು ಹಳ್ಳಿಗಳ ಸ್ಥಳಾಂತರದ ಅಂತಿಮ ಜೆಎಂಸಿ ಹಂತಕ್ಕೆ ಬಂದಿದೆ. ಶೀಘ್ರವೇ ಆ ನಾಲ್ಕು ಗ್ರಾಮಗಳ ಸ್ಥಳಾಂತರಕ್ಕೆ .3900 ಕೋಟಿಗಳನ್ನು ಬಿಡುಗಡೆ ಮಾಡಲಾಗುವುದು ಎಂದ ಅವರು, ಇನ್ನೂ 10 ಹಳ್ಳಿಗಳ ಸ್ಥಳಾಂತರಕ್ಕೆ 2023ರ ಜನವರಿ ಇಲ್ಲವೇ ಫೆಬ್ರುವರಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು. ಬಾಕಿ ಉಳಿದ ಆರು ಹಳ್ಳಿಗಳ ಸ್ಥಳಾಂತರಕ್ಕೆ ಸರ್ವೆ ಕಾರ್ಯ ಆರಂಭಗೊಂಡಿದೆ. ಒಟ್ಟಾರೆ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಹಾಗೂ ಭೂಸ್ವಾಧೀನದ ಪರಿಹಾರಕ್ಕಾಗಿ ಈ ವರ್ಷ .10 ಸಾವಿರ ಕೋಟಿ ಮೀಸಲಿರಿಸಲಾಗಿದೆ ಎಂದರು.

ಪುನರ್ವಸತಿ ಜತೆಗೆ ಜಲಾಶಯ ಎತ್ತರದಿಂದ ನೀರಾವರಿಗೆ ನಿಗದಿಪಡಿಸಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವತ್ತಲೂ ಕಾರ್ಯ ಆರಂಭಗೊಂಡಿದೆ. ಈಗಾಗಲೇ ಹೊಸ ಯೋಜನೆಗಳ ಉಪಕಾಲುವೆ ಹಾಗೂ ಸೀಳು ಕಾಲುವೆಗಳ ರಚನೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಜಲಾಶಯದ ಎತ್ತರಕ್ಕಿಂತಲೂ ಭೂಸ್ವಾಧೀನವೇ ಪ್ರಮುಖ ವಿಷಯವಾಗಿದೆ. ಭೂಸ್ವಾಧೀನ, ಸೂಕ್ತ ಪರಿಹಾರ, ಹಳ್ಳಿಗಳ ಸ್ಥಳಾಂತರವೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ತದನಂತರ ಜಲಾಶಯದ ಎತ್ತರ ಹಾಗೂ ನೀರಿನ ಸಂಗ್ರಹ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದರು.

ಟೀಕೆಗಳೇ ನನ್ನ ಯಶಸ್ಸಿನ ಮೆಟ್ಟಿಲು : ಕೃಷ್ಣಾಗೆ ಬಾಗಿನ ಅರ್ಪಿಸಿ ಸಿಎಂ ಬೊಮ್ಮಾಯಿ ಹೇಳಿಕೆ

ಜನವರಿಗೆ ಕಚೇರಿ ಸ್ಥಳಾಂತರ:

ಕೆಬಿಜೆಎನ್‌ಎಲ್‌ ಎಂ.ಡಿ. ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಲು ಈಗಾಗಲೇ ಸೂಚನೆ ನೀಡಿರುವೆ. ಬರುವ ಜನವರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಆರಂಭಗೊಳ್ಳಲಿದೆ ಎಂದ ಸಿಎಂ, ಮೂರನೇ ಹಂತದ ಕಾಮಗಾರಿಗಳು ಕೂಡ ಇದರೊಟ್ಟಿಗೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಉಲ್ಟಾ ಮಾಡುತ್ತಿರುವ ಕಾಂಗ್ರೆಸ್ಸಿಗರು:

ಪಿಎಫ್‌ಐ ಬ್ಯಾನ್‌ ಕುರಿತು ಕಾಂಗ್ರೆಸ್ಸಿಗರು ಈ ಹಿಂದೆ ವಿಧಾನಸಭೆ ಒಳಗೆ ಮತ್ತು ಹೊರಗೆ ಆಗ್ರಹಿಸಿದ್ದಾರೆ. ಈಗ ಉಲ್ಟಾಮಾತನಾಡುತ್ತಿದ್ದಾರೆ. ಪಿಎಫ್‌ಐ ಕಾರ್ಯಕರ್ತರು ಎಲ್ಲೆಲ್ಲಿ ತರಬೇತಿ ಪಡೆದಿದ್ದಾರೆ? ಯಾವ ದುಷ್ಕೃತ್ಯಗಳನ್ನು ಮತ್ತು ದೇಶದಲ್ಲಿ ಏನೇನು ದೇಶ ವಿರೋಧ ಚಟುವಟಿಕೆ ನಡೆಸಿದ್ದಾರೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕೇಂದ್ರ ಸರ್ಕಾರ ನಿಷೇಧ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಶಾಸಕ ಶಿವಾನಂದ ಪಾಟೀಲ, ಎ.ಎಸ್‌. ಪಾಟೀಲ ನಡಹಳ್ಳಿ, ಎಸ್‌.ಕೆ. ಬೆಳ್ಳುಬ್ಬಿ ಇತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios