ದಶಪಥ ಹೆದ್ದಾರಿಗೆ .3347 ಕೋಟಿ ಭೂ ಪರಿಹಾರ
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ 528.83 ಹೆಕ್ಟೇರ್ ಭೂಮಿಯನ್ನು ವಶಪಡಿಸಿಕೊಂಡಿದ್ದು, ಪರಿಹಾರ ರೂಪದಲ್ಲಿ .3346.44 ಕೋಟಿ ಪರಿಹಾರ ನೀಡಲಾಗಿದೆ. ಇನ್ನೂ .8.43 ಕೋಟಿ ಭೂ ಪರಿಹಾರ ಬಾಕಿ ಪಾವತಿಸಬೇಕಿದೆ.
ಮಂಡ್ಯ ಮಂಜುನಾಥ
ಮಂಡ್ಯ ( ಜ. 14): ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ 528.83 ಹೆಕ್ಟೇರ್ ಭೂಮಿಯನ್ನು ವಶಪಡಿಸಿಕೊಂಡಿದ್ದು, ಪರಿಹಾರ ರೂಪದಲ್ಲಿ .3346.44 ಕೋಟಿ ಪರಿಹಾರ ನೀಡಲಾಗಿದೆ. ಇನ್ನೂ .8.43 ಕೋಟಿ ಭೂ ಪರಿಹಾರ ಬಾಕಿ ಪಾವತಿಸಬೇಕಿದೆ.
ದಶಪಥ ಹೆದ್ದಾರಿ ಯೋಜನೆ ಪೂರ್ಣಗೊಳ್ಳುವ ಹಂತ ತಲುಪಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮೊನ್ನೆಯಷ್ಟೇ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿ ಹೋಗಿದ್ದಾರೆ. ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದ್ದು, ಈ ಹಂತದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರೆಷ್ಟು, ಪರಿಹಾರ ವಿತರಿಸಿದ್ದೆಷ್ಟು, ಕೃಷಿ ಭೂಮಿ, ಕೃಷಿಯೇತರ, ಸರ್ಕಾರಿ ಭೂಮಿ, ಮನೆಗಳು, ವಾಣಿಜ್ಯಕಟ್ಟಡಗಳು ಕಳೆದುಕೊಂಡಿದ್ದೆಷ್ಟುಎಂಬ ಸಂಪೂರ್ಣ ವಿವರ ಇಲ್ಲಿದೆ.
ಎಷ್ಟುಭೂಮಿ ವಶ?
ಹೆದ್ದಾರಿ ನಿರ್ಮಾಣಕ್ಕೆ ರಾಮನಗರ ಜಿಲ್ಲೆಯಲ್ಲಿ 255.29 ಹೆಕ್ಟೇರ್, ಮಂಡ್ಯ ಜಿಲ್ಲೆಯಲ್ಲಿ 260.15 ಹೆಕ್ಟೇರ್, ಮೈಸೂರು ಜಿಲ್ಲೆಯಲ್ಲಿ 13.39 ಹೆಕ್ಟೇರ್ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ರಾಮನಗರದಲ್ಲಿ 198.59 ಹೆಕ್ಟೇರ್ ಕೃಷಿ ಭೂಮಿ, 37.05 ಕೃಷಿಯೇತರ ಭೂಮಿ, 19.65 ಹೆಕ್ಟೇರ್ ಸರ್ಕಾರಿ ಭೂಮಿ, ಮಂಡ್ಯದಲ್ಲಿ 187.50 ಹೆಕ್ಟೇರ್ ಕೃಷಿ ಭೂಮಿ, 42.03 ಕೃಷಿಯೇತರ ಭೂಮಿ, 30.62 ಹೆಕ್ಟೇರ್ ಸರ್ಕಾರಿ ಭೂಮಿ, ಮೈಸೂರಿನಲ್ಲಿ 7.76 ಹೆಕ್ಟೇರ್ ಕೃಷಿ ಭೂಮಿ, 5.03 ಹೆಕ್ಟೇರ್ ಕೃಷಿಯೇತರ ಭೂಮಿ, 0.60 ಹೆಕ್ಟೇರ್ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮನೆ ವಾಣಿಜ್ಯಕಟ್ಟಡಗಳನೆಲಸಮ
ರಾಮನಗರ ಜಿಲ್ಲೆಯಲ್ಲಿ 950 ಮನೆಗಳು, 83 ವಾಣಿಜ್ಯ ಕಟ್ಟಡಗಳು, ಮಂಡ್ಯ ಜಿಲ್ಲೆಯೊಳಗೆ 1102 ಮನೆಗಳು, 292 ವಾಣಿಜ್ಯ ಕಟ್ಟಡಗಳು, ಮೈಸೂರು ಜಿಲ್ಲೆಯಲ್ಲಿ 67 ಮನೆಗಳು, 32 ವಾಣಿಜ್ಯ ಕಟ್ಟಡಗಳು ದಶಫಥ ಹೆದ್ದಾರಿ ನಿರ್ಮಾಣಕ್ಕಾಗಿ ನೆಲಸಮಗೊಳಿಸಲಾಗಿದೆ.
ಪರಿಹಾರ ವಿತರಣೆ
ಯೋಜನೆಗೆ ಇದುವರೆಗೆ ಬೆಂಗಳೂರು ನಗರದ 384 ಭೂ ಮಾಲೀಕರಿಗೆ .560.27 ಕೋಟಿ ಪರಿಹಾರ ಪಾವತಿಸಿದ್ದು, .1.02 ಕೋಟಿ ಪರಿಹಾರ ಬಾಕಿ ಇದೆ. ರಾಮನಗರ ಜಿಲ್ಲೆಯ 3403 ಭೂ ಮಾಲೀಕರಿಗೆ .1494.01 ಕೋಟಿ ಪಾವತಿಸಿದ್ದು, .3.31 ಕೋಟಿ ಬಾಕಿ ಇದ್ದರೆ, ಮಂಡ್ಯ ಜಿಲ್ಲೆಯ 5178 ಭೂ ಮಾಲೀಕರಿಗೆ .1164.43 ಕೋಟಿ ಪಾವತಿಸಿದ್ದು, .2.48 ಕೋಟಿ ಬಾಕಿ ಪಾವತಿಸಬೇಕಿದೆ. ಮೈಸೂರು ಜಿಲ್ಲೆಯ 290 ಭೂ ಮಾಲೀಕರಿಗೆ .127.73 ಕೋಟಿ ಪರಿಹಾರ ಪಾವತಿಸಿದ್ದು, .1.62 ಕೋಟಿ ಪರಿಹಾರ ಪಾವತಿಸುವುದು ಬಾಕಿ ಇದೆ.
ಪರಿಹಾರಕ್ಕೆ ಮಾನದಂಡ
ಭೂಮಿ ಕಳೆದುಕೊಂಡವರ ಕಂದಾಯ ದಾಖಲೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ದಾಖಲೆಗಳನ್ನು ಪರಿಶೀಲಿಸಿ ಆರ್‌ಟಿಜಿಎಸ್ ಮುಖಾಂತರ ಭೂ ರಾಶಿ ಪೋರ್ಟಲ್‌ನಿಂದ ಪರಿಹಾರ ಧನವನ್ನು ಭೂ ಮಾಲೀಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಕಾಯ್ದೆ-1956 ಮತ್ತು ಆರ್‌ಎಫ್‌ಸಿಟಿಎಲ್‌ಎಆರ್‌ಆರ್ ಕಾಯ್ದೆ 2013ರಂತೆ 3 (ಜಿ) ಅವಾರ್ಡ್‌ಗಳನ್ನು ತಯಾರಿಸಿ ವಿತರಿಸಲಾಗಿದೆ.
ಸೇತುವೆ, ಅಂಡರ್‌ಪಾಸ್‌ಗಳೆಷ್ಟು?
ಇನ್ನು ಈ ಯೋಜನೆಗೆ ಪ್ಯಾಕೇಜ್ 1ರಲ್ಲಿ ಬೆಂಗಳೂರಿನಿಂದ ನಿಡಘಟ್ಟವರೆಗೆ ಬೆಂಗಳೂರು ನಗರದಲ್ಲಿ 3 ಕಿರುಸೇತುವೆ, ರಾಮನಗರ-12 ಕಿರುಸೇತುವೆ, 4 ಬೃಹತ್ ಸೇತುವೆ, 31 ಅಂಡರ್‌ಪಾಸ್, ಮಂಡ್ಯ-2 ಕಿರುಸೇತುವೆ-1 ಅಂಡರ್‌ಪಾಸ್, ನಿಡಘಟ್ಟದಿಂದ ಮೈಸೂರು ವಿಭಾಗದವರೆಗೆ ಮಂಡ್ಯ ಜಿಲ್ಲೆಯಲ್ಲಿ 23 ಕಿರುಸೇತುವೆ, 5 ಬೃಹತ್ ಸೇತುವೆ, 43 ಅಂಡರ್‌ಪಾಸ್, ಮೈಸೂರು ಜಿಲ್ಲೆಯಲ್ಲಿ 2 ಕಿರುಸೇತುವೆ, 2 ಅಂಡರ್‌ಪಾಸ್‌ಗಳನ್ನು ನಿರ್ಮಾಣ ಮಾಡಲಾಗಿದೆ.
ಮಂಡ್ಯ ನಗರದ ಉಮ್ಮಡಹಳ್ಳಿ ಬಳಿ ಮಂಡ್ಯ ನಗರವನ್ನು ಪ್ರವೇಶಿಸಲು ಹಾಗೂ ಇಂಡುವಾಳು ಬಳಿ ನಿರ್ಗಮಿಸಲು ಅವಕಾಶ ಕಲ್ಪಿಸಲಾಗಿದೆ. ಪ್ಯಾಕೇಜ್ 1ರ ಬೆಂಗಳೂರು-ನಿಡಘಟ್ಟಭಾಗದ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪ್ಯಾಕೇಜ್ 2ರ ನಿಡಘಟ್ಟ-ಮೈಸೂರು ಭಾಗದ ಹೆದ್ದಾರಿ ಕಾಮಗಾರಿ ಫೆ.27ರೊಳಗೆ ಪೂರ್ಣಗೊಳ್ಳಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕುರಿತು ಸದನದಲ್ಲಿ ಪ್ರಶ್ನಿಸಿದ್ದೆನು. ಅದಕ್ಕೆ ಲೋಕೋಪಯೋಗಿ ಸಚಿವರು ಉತ್ತರಿಸಿದ್ದು, ಅದರ ಪ್ರಕಾರ ಭೂಮಿ ಕಳೆದುಕೊಂಡವರಿಗೆ ಇನ್ನೂ .8.43 ಕೋಟಿ ಪರಿಹಾರ ಪಾವತಿಸಬೇಕಿದೆ. ಈ ಹಣವನ್ನು ಆದಷ್ಟುಶೀಘ್ರ ಪಾವತಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೇನೆ.
- ಮಧು ಜಿ.ಮಾದೇಗೌಡ, ವಿಧಾನಪರಿಷತ್ ಸದಸ್ಯರು